ಮಂಗಳೂರು: ಆಷಾಡದ ಬಿರುಸಿನ ಮಳೆಯ ಸಂಕಷ್ಟಗಳನ್ನು ಮನೆಯ ಒಳಗೆ ಅನುಭವಿಸಿ ಪರಿಸರದ ಬದುಕಿಗೆ ತೆರೆದುಕೊಳ್ಳುವ ಮೂಲಕ ಹಬ್ಬ ಹರಿದಿನಗಳಲ್ಲಿ ಸಂತೋಷ ಕಂಡುಕೊಳ್ಳುವುದಕ್ಕೇ ಶ್ರಾವಣ ಬಂದಿದೆ.  ಹೆಂಗಸರೆಲ್ಲ ವರಮಹಾಲಕ್ಷ್ಮಿಯನ್ನು ಪೂಜಿಸಿ, ಮನೆ ಮತ್ತು ಮನಸಿನ ಸಂಕಟಗಳನ್ನು ಕಳೆಯಲು ಉಪವಾಸ ವೃತಗಳನ್ನು ಕೈಗೊಳ್ಳುವ ಈ ತಿಂಗಳ ದಿನಗಳು ಎಲ್ಲರ ಸಂಭ್ರಮದ ದಿನಗಳಾಗಿರುತ್ತವೆ ಎಂದು ಶ್ರೀ ಭುವನೇಂದ್ರ ಕಾಲೇಜಿನ ಉಪನ್ಯಾಸಕಿ ಸುಲೋಚನ ಪಚಿನಡ್ಕ ರವರು ಹೇಳಿದರು.  

ಅವರು ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಆಗಸ್ಟ್ 16 ರಂದು ಮಂಗಳೂರು ಪುರಭವನದಲ್ಲಿ ಆಯೋಜಿಸಿದ್ದ “ಶ್ರಾವಣ ಸಂಭ್ರಮ”  ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದರೂ ಕಲೆ ಮತ್ತು ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರ ಸಂಖ್ಯೆ ಕಡಿಮೆಯಾಗದು.  ಯಾವುದೇ ಕಾರ್ಯಕ್ರಮವಾದರೂ ಅದನ್ನು ವಿಶಿಷ್ಟ ರೀತಿಯಲ್ಲಿ ಆಯೋಜನೆ ಮಾಡುವ KSSAP ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದರು.  

ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಗೈದ ಹಿರಿಯ ಗೌರವ ಉಪನ್ಯಾಸಕ ವ. ಉಮೇಶ ಕಾರಂತ್‌ರವರಿಗೆ ಶಾಲು, ಹಾರ ಪೇಟ ತೊಡಿಸಿ ಫಲತಾಂಬೂಲ ಸನ್ಮಾನ ಫಲಕದೊಂದಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು KSSAP ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ ವಹಿಸಿದ್ದರು. NSCDF ನ ಅಂತರರಾಷ್ಟ್ರೀಯ ವಕ್ತಾರೆ ಮಮ್ತಾ ಕೋಟ್ಯಾನ್ ಮುಂಬೈ ಉಪಸ್ಥಿತರಿದ್ದರು. 

ಡಾ. ಸುರೇಶ್ ನೆಗಳಗುಳಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಮಾತನಾಡುತ್ತಾ ಪ್ರತಿಯೊಬ್ಬರೂ ಒಂದಿಲ್ಲೊಂದು ರೀತಿಯಲ್ಲಿ ಸಾಹಿತಿಗಳೇ ಆಗಿರತ್ತಾರೆ.ಆದರೆ ಅದಕ್ಕೊಂದು ಚೌಕಟ್ಟು ತರಲು ಆತ ಕವಿಯಾಗ ಬೇಕು. ಯೋಚನೆ ಭಾವನೆ ಸಕಲರಲ್ಲೂ ಇದೆ ಅದಕ್ಕೆ ಆಕಾರ ಕೊಡುವ ಶಿಲ್ಪಿಯೇ ಕವಿ. ಪಾಷಾಣಕ್ಕೆ ರೂಪ ಕೊಡುವ ಶಿಲೆಗೆ ಶಂಕರತ್ವ   ನೀಡುವ ಕಲೆ ಕರಗತವಾಗಲು ಅಭ್ಯಾಸ ಹಾಗೂ ಮೆದುಳಿನ ಕಸರತ್ತು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾ ಸ್ವರ ಚಿತ ಗಜಲ್ ವಾಚಿಸಿ ಸರ್ವ ಕವಿಗಳ ವಾಚನವನ್ನು ವಿಮರ್ಶೆ ಮಾಡಿದರು.

ಇದಲ್ಲದೆ ಸಂಘಟಕರು ಉಲ್ಲೇಖಿಸಿದ ದ.ರಾ. ಬೇಂದ್ರೆಯವರ ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ..ಕವನದ ಆಂತರ್ಯದ ವಿಶ್ಲೇಷಣೆ ಮಾಡಿದರು.

ಕವಿಗೋಷ್ಠಿಯಲ್ಲಿ ವೆಂಕಟೇಶ್ ಗಟ್ಟಿ, ದೀಪಾ ಚಿಲಿಂಬಿ, ಅನಿತಾ ಶೆಣೈ, ನಿಶಾನ್ ಅಂಚನ್,  ಕೊಳ್ಚಪ್ಪೆ ಗೋವಿಂದ ಭಟ್, ಶಿವಪ್ರಸಾದ್ ಕೊಕ್ಕಡ, ಗುರುರಾಜ್ ಎಂ. ಆರ್, ಡಾ. ವಾಣಿಶ್ರೀ ಕಾಸರಗೋಡು, ಉಮೇಶ್ ಕಾರಂತ್,  ಸುಲೋಚನ ನವೀನ್ ಮುಂತಾದ ಕವಿಗಳು ತಮ್ಮ ಸ್ವರಚಿತ ಕವನ ವಾಚನ ಮಾಡಿದರು. ಗಂಗಾಧರ್ ಗಾಂಧಿ ಕಾರ್ಯಕ್ರಮ ನಿರೂಪಿಸಿದರು.

ಗಡಿನಾಡ ಕನ್ನಡತಿ ಡಾ. ವಾಣಿಶ್ರೀ ಮತ್ತು ಗುರುರಾಜ್ ಕಾಸರಗೋಡು ತಂಡದಿಂದ ವರ್ಣರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳು, ಗೀತ ಗಾಯನ ಹಾಗೂ ಯಕ್ಷನೃತ್ಯ  ನಡೆಯಿತು.