ಮಂಗಳೂರು, ಸೆ. 22: ಜಿಲ್ಲೆಯಾದ್ಯಂತ ಪೋಷಣಾ ಅಭಿಯಾನ ನಡೆಯುತ್ತಿದ್ದು, ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲು ಮತ್ತು ಆರೋಗ್ಯವಂತ ಭಾರತ ನಿರ್ಮಿಸುವ ನಿಟ್ಟಿನಲ್ಲಿ ಎಲ್ಲರೂ ಸಹಕರಿಸಬೇಕು ಎಂದು ಲೋಕಸಭಾ ಸದಸ್ಯಕ್ಯಾ. ಬ್ರಿಜೇಶ್ ಚೌಟ ಹೇಳಿದರು.
ಅವರು ಸೋಮವಾರ ರಾಜ್ಯ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಪೋಷಣಾ ಅಭಿಯಾನ ಯೋಜನೆಯಡಿ " ಪೋಷಣಾ ಮಾಸಾಚರಣೆ ಕಾರ್ಯಕ್ರಮ" ಉದ್ಘಾಟಿಸಿ ಮಾತನಾಡಿದರು.
ಗರ್ಭಿಣಿ, ಬಾಣಂತಿಯರು, ಮಕ್ಕಳು ಮತ್ತು ಬಾಲಕಿಯರಲ್ಲಿ ಅಪೌಷ್ಟಿಕತೆಯ ನಿವಾರಣೆಯ ಬಗ್ಗೆ ಅರಿವು ಮೂಡಿಸಬೇಕು. ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಮಾತನಾಡಿ, ಅಪೌಷ್ಟಿಕತೆಯ ಪಿಡುಗನ್ನು ಹೋಗಲಾಡಿಸಬೇಕು. ಅಂಗನವಾಡಿ ಕೇಂದ್ರಗಳ ಮೂಲಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತದೆ. ಮಕ್ಕಳಲ್ಲಿ ಕುಂಠಿತ ಬೆಳವಣಿಗೆ, ಅಪೌಷ್ಟಿಕತೆ, ರಕ್ತಹೀನತೆ ಮತ್ತು ಕಡಿಮೆ ತೂಕದ ಶಿಶು ಜನನ ಮಟ್ಟವನ್ನು ಕಡಿಮೆ ಮಾಡಲು ಸಮಾಜಕ್ಕೆ ಅಪೌಷ್ಟಿಕತೆಯ ಬಗ್ಗೆ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ದೇಶದಲ್ಲಿ ಅಪೌಷ್ಟಿಕತೆ ಹೋಗಲಾಡಿಸಲು ಎಲ್ಲ ಇಲಾಖೆಗಳು ಹೋರಾಟ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನೀಸಾ ಹೇಳಿದರು. ಮಕ್ಕಳಿಗೆ ಪೋಷಣೆ ನೀಡುವುದರ ಜೊತೆಗೆ ವಿದ್ಯಾಭ್ಯಾಸವನ್ನು ನೀಡಿ ಅವರು ದೇಶದ ಪ್ರಗತಿಗೆ ಕೊಡುಗೆ ನೀಡುವಂತಾಗಬೇಕು. ಮಕ್ಕಳಿಗೆ ಕಲಬೆರಕೆಯುತ ಆಹಾರವನ್ನು ನೀಡದೆ ಸದೃಢ ದೇಶದ ವ್ಯಕ್ತಿಗಳನ್ನಾಗಿ ಮಾಡಲು ಪೌಷ್ಟಿಕ ಆಹಾರವನ್ನು ನೀಡಬೇಕು. ಪೌಷ್ಟಿಕ ಆಹಾರವನ್ನು ನೀಡುವುದರಿಂದ ಸುಪೋಷಿತ ಭಾರತ ನಿರ್ಮಿಸಬಹುದು ಎಂದು ಅವರು ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ನವೀನ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ಜಿಲ್ಲಾ ಸರ್ವೇಕ್ಷಣಾಧಿಕಾರಿ ನವೀನ್ ಚಂದ್ರ ಕುಲಾಲ್, ಆಯುಷ್ ಇಲಾಖೆ ವೈದ್ಯಾಧಿಕಾರಿ ಡಾ. ಸಹನ, ಆಯುಷ್ ಅಧಿಕಾರಿ ಮೊಹಮ್ಮದ್ ಇಕ್ಬಾಲ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ.ಕೆ ಉಳೆಪಾಡಿ, ಅದಾನಿ ಫೌಂಡೇಶನ್ ಸಂಯೋಜಕಿ ಪ್ರೇಮ, ಜಿಲ್ಲಾ ನಿರೂಪಣಾಧಿಕಾರಿ ರಶ್ಮಿ ಕೆ.ಎಂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ ಸ್ವಾಗತಿಸಿ, ಮಂಗಳೂರು ನಗರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ವಂದಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಚಂದ್ರಿಕಾ ನಿರೂಪಿಸಿದರು.