ಮಂಗಳೂರು, ನ. 21: ಬಾಲ್ಯವಿವಾಹ ಮತ್ತು ಪೋಕ್ಸೋ ಪ್ರಕರಣಗಳು ಕಂಡು ಬಂದಲ್ಲಿ ಪೊಲೀಸ್ ಇಲಾಖೆ ಮಾತ್ರವಲ್ಲ ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು  ಮಂಗಳೂರು ತಹಶೀಲ್ದಾರ್  ಟಿ.ರಮೇಶ್ ಬಾಬು  ಸೂಚಿಸಿದ್ದಾರೆ.    

ಅವರು ಶುಕ್ರವಾರ ಮಂಗಳೂರು ತಾಲೂಕು ಕಚೇರಿಯಲ್ಲಿ   ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಅನುಷ್ಠಾನಗೊಂಡಿರುವ  ತಾಲೂಕು ಮಟ್ಟದ ವಿವಿಧ ಯೋಜನೆಗಳ ಸಮಿತಿ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ, ಬೇಟಿ ಬಚಾವೋ, ಬೇಟಿ ಪಡಾವೋ, ಪೋಕ್ಸೋ, ಬಾಲ್ಯವಿವಾಹ, ಮಕ್ಕಳ ನಾಪತ್ತೆ ಸೇರಿದಂತೆ ಇತರೆ ಪ್ರಕರಣಗಳ ಬಗ್ಗೆ ಹೆಚ್ಚಿನ ಗಮಹರಿಸಿ ಕೆಲಸ ನಿರ್ವಹಿಸಬೇಕು  ಎಂದು ಅವರು  ಹೇಳಿದರು. 

ಮಾದಕ   ಮತ್ತು ವ್ಯಸನ ನಿಷೇಧ ಯೋಜನೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ  ಸಮಿತಿ, ಭಾಗ್ಯಲಕ್ಷ್ಮಿ ಯೋಜನೆಯ ಕಾರ್ಯಪಡೆ ಸಮಿತಿ, ಅಂಗವಿಕಲ ಕುಂದು ಕೊರತೆ ನಿವಾರಣೆ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಮಾರಾಟ ಹಾಗೂ ಸಾಗಾಟ ತಡೆ ಸಮಿತಿ, ಬಾಲ್ಯವಿವಾಹ ನಿಷೇಧ ಸಮಿತಿ , ಮಕ್ಕಳ ರಕ್ಷಣಾ ಸಮಿತಿ, ಬೇಟಿ ಬಚಾವೋ ಬೇಟಿ ಪಡಾವೋ ಸಮಿತಿ, ಮಾತೃವಂದನ ಯೋಜನೆ ಸಮಿತಿಯ ಪ್ರಗತಿಯನ್ನು ಅವರು ಪರಿಶೀಲಿಸಿದರು.

ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಏಪ್ರಿಲ್ 2025ರಿಂದ ಅಕ್ಟೋಬರ್ 2025ರ ವರೆಗೆ  16 ಪ್ರಕರಣಗಳು ದಾಖಲಾಗಿರುತ್ತದೆ. ಮಂಗಳೂರು ಶಿಶು ಅಭಿವೃದ್ಧಿ ಯೋಜನ ವ್ಯಾಪ್ತಿಯ ಅಂಗನವಾಡಿ ಕಾರ್ಯಕರ್ತೆಯರ ವಲಯ ಸಭೆಗಳಲ್ಲಿ ಹಾಗೂ ಅಂಗನವಾಡಿಗಳಲ್ಲಿ ತಾಯಂದಿರ ಸಭೆ ಹಾಗೂ ಸ್ತ್ರೀ ಶಕ್ತಿ ಸಭೆಗಳಲ್ಲಿ ಸೇರಿದ ಮಹಿಳೆಯರು ಹಾಗೂ ಸೇರಿದ ಜನರಿಗೆ ಮಾದಕ ವಸ್ತು ಸೇವನೆ ಮತ್ತು ಮಾರಾಟ ನಿಷೇಧದ ಬಗ್ಗೆ  ತಿಳಿಸಲಾಗಿರುತ್ತದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಲಾಯಿತು.

ಒಟ್ಟು 9,270 ಯುಡಿಐಡಿ ಚೀಟಿ ವಿಕಲಚೇತನರ ಫಲಾನುಭವಿಗಳಿಗೆ ನೀಡಲಾಗಿರುತ್ತದೆ. 2025-26 ನೇ ಸಾಲಿನಲ್ಲಿ  ಸಾಧನ ಸಲಕರಣೆಗಳಿಗೆ  ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದ್ದು  ಪ್ರಗತಿ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಮಂಗಳೂರು ತಾಲೂಕು ಪಂಚಾಯತ್  ಕಾರ್ಯನಿರ್ವಹಣಾಧಿಕಾರಿ ಮಹೇಶ್ ಹೊಳ್ಳ, ಪೊಲೀಸ್ ನಿರೀಕ್ಷಕ ಗುರುರಾಜ್, ಮಂಗಳೂರು (ಗ್ರಾಮಾಂತರ) ಶಿಶು ಅಭಿವೃದ್ಧಿ  ಯೋಜನಾಧಿಕಾರಿ ಶೈಲಾ ಕೆ.ಕಾರಗಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.