ಮಂಗಳೂರು: ಕರ್ನಾಟಕ ಶಿಕ್ಷಕರ ಅರ್ಹತಾ (KARTET-2025) ಪರೀಕ್ಷೆಯು ಡಿಸೆಂಬರ್ 7 ರಂದು ಬೆಳಿಗ್ಗೆ 9:30 ರಿಂದ 12 ಗಂಟೆಯವರೆಗೆ ಮತ್ತು ಅಪರಾಹ್ನ 2 ರಿಂದ 4:30 ರ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 19 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. 

ಬೆಳಿಗ್ಗೆ 6 ಪರೀಕ್ಷಾ ಕೇಂದ್ರಗಳಲ್ಲಿ 1443 ಅಭ್ಯರ್ಥಿಗಳು ಮತ್ತು ಅಪರಾಹ್ನ 19 ಪರೀಕ್ಷಾ ಕೇಂದ್ರಗಳಲ್ಲಿ 4724 ಅಭ್ಯರ್ಥಿಗಳು ಪರೀಕ್ಷೆಯನ್ನು ಬರೆಯಲಿದ್ದಾರೆ. ಪರೀಕ್ಷೆಗೆ ಹಾಜರಾಗುವ ಎಲ್ಲಾ ಅಭ್ಯರ್ಥಿಗಳು ಅವರ ಪ್ರವೇಶ ಪತ್ರದಲ್ಲಿ ಸೂಚಿಸಿರುವಂತೆ ಹಂಚಿಕೆ ಮಾಡಲಾದ ಪರೀಕ್ಷಾ ಕೇಂದ್ರಗಳ ಲ್ಯಾಂಡ್ ಮಾರ್ಕ್ ಆಧರಿಸಿ ಪ್ರವೇಶ ಪತ್ರದೊಂದಿಗೆ ನಿಗದಿತ ಸಮಯದಲ್ಲಿ ಹಾಜರಾಗುವಂತೆ ಸೂಚಿಸಿದೆ. ಪರೀಕ್ಷಾ ಕೇಂದ್ರಗಳಿಗೆ ನೀಲಿ ಅಥವಾ ಕಪ್ಪು ಶಾಯಿಯ ಬಾಲ್‍ಪಾಯಿಂಟ್ ಪೆನ್ ಪ್ರವೇಶ ಪತ್ರದೊಂದಿಗೆ ತೆಗೆದುಕೊಂಡು ಹೋಗಲು ಮಾತ್ರ ಅವಕಾಶವಿರುತ್ತದೆ. ಅಭ್ಯರ್ಥಿಗಳ ಮುಖ ಚಹರೆ ತಾಳೆ ನೋಡುವ (Face recognition) ಕಾರ್ಯವು ಪತ್ರಿಕೆ-1 ಕ್ಕೆ ಬೆಳಿಗ್ಗೆ 7 ಗಂಟೆಗೆ ಮತ್ತು ಪತ್ರಿಕೆ-2ಕ್ಕೆ ಅಪರಾಹ್ನ 12:15 ಕ್ಕೆ ಪರೀಕ್ಷಾ ಕೇಂದ್ರದಲ್ಲಿ ಪ್ರಾರಂಭವಾಗುತ್ತದೆ. ಪರೀಕ್ಷಾ ಪಾಲನಾ ನಿಯಮಗಳನ್ನು ಪ್ರವೇಶ ಪತ್ರದಲ್ಲಿ ಮುದ್ರಿಸಿದೆ. ಕಡ್ಡಾಯವಾಗಿ ಅಭ್ಯರ್ಥಿಗಳು ಓದಿಕೊಂಡು ಪಾಲಿಸಬೇಕು. 

ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ https://schooleducation.karnataka.gov.in/cacell/en ವೀಕ್ಷಿಸಬಹುದು ಎಂದು  ಶಾಲಾ ಶಿಕ್ಷಣ ಇಲಾಖೆ  ಕೇಂದ್ರೀಕೃತ ದಾಖಲಾತಿ ಘಟಕದ ಸಹ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.