ಮಂಗಳೂರು: ಪರಸ್ಪರ ಉತ್ತಮ ಬಾಂಧವ್ಯ ಹಾಗೂ ಸೌಹಾರ್ದತೆಯ ವಾತಾವರಣ ಮೂಡಿಸಲು ಕ್ರೀಡೆ ಪೂರಕವಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕಾಗಿ ಕ್ರೀಡೆಗೆ ಸಮಯ ಮೀಸಲಿಡುವುದು ಅತೀ ಅಗತ್ಯ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ಹೇಳಿದರು.

ದಕ್ಷಿಣ ಕನ್ನಡ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಗುರುವಾರ ನಗರದ ನೆಹರು ಮೈದಾನದಲ್ಲಿ  ಏರ್ಪಡಿಸಲಾಗಿದ್ದ ಪೊಲೀಸ್ ಹಾಗೂ ಪತ್ರಕರ್ತರ ತಂಡದ ಸೌಹಾರ್ದ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿ ಅವರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲೆಯ ಘನತೆ ಕಾಪಾಡುವುದು ಎಲ್ಲರ ಕರ್ತವ್ಯ.  ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ನಿರಂತರ ಶ್ರಮ ವಹಿಸುತ್ತಿದ್ದಾರೆ. ಜಿಲ್ಲೆಯ  ಮಾಧ್ಯಮಗಳು ಹಾಗೂ ಪ್ರಜ್ಞಾವಂತ ನಾಗರಿಕರು ಇಲಾಖೆಗೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಅವರು ಹೇಳಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ  ಶ್ರೀನಿವಾಸ ನಾಯಕ್  ಇಂದಾಜೆ, ಮಂಗಳೂರು ಪ್ರೆಸ್  ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ  ರೈ, ಮಂಗಳೂರು ನಗರ ಪೊಲೀಸ್ ಕಮಿಷನರೆಟ್‌ನ ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ಬಿ.ಪಿ.ದಿನೇಶ್ ಕುಮಾರ್, ಉಮೇಶ್ ಪಿ.,ಎಸಿಪಿಗಳಾದ ಮನೋಜ್ ಕುಮಾರ್,  ಶ್ರೀಕಾಂತ್, ರವೀಶ್ ನಾಯಕ್, ನಜ್ಮಾ ಫಾರೂಕಿ, ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ಉಪಸ್ಥಿತರಿದ್ದರು.

ಪಂದ್ಯಾಟದಲ್ಲಿ ಪೊಲೀಸ್ ತಂಡ ಜಯಗಳಿಸಿತು. ಪೊಲೀಸ್ ತಂಡದ ಮನೋಜ್ ನಾಯಕ್ ಉತ್ತಮ ಬ್ಯಾಟ್ಸ್‌ಮನ್ ಹಾಗೂ ಸಾಗರ್ ಉತ್ತಮ ಬೌಲರ್ ವೈಯಕ್ತಿಕ ಪ್ರಶಸ್ತಿ ಪಡೆದರು.