ಮೂಡುಬಿದಿರೆ: ಸಮಾಜ ಕಂಟಕರ ಕೃತ್ಯಗಳ ಬಗ್ಗೆ ವರದಿ ಮಾಡಲು, ಸತ್ಯದ ಬೆನ್ನತ್ತಿ ಸಾಗುವ ಪತ್ರಕರ್ತರು ಒತ್ತಡ, ಜೀವ ಬೆದರಿಕೆ ಎದುರಿಸಬೇಕಾಗುತ್ತದೆ, ಪ್ರಾಮಾಣಿಕ ವರದಿಗಾರರ ಹೆಸರಿನಲ್ಲಿ , ಅವರಿಗೆ ಮಾಹಿತಿ ನೀಡುವವರು ಬ್ಲ್ಯಾಕ್‌ಮೈಲ್ ವ್ಯವಹಾರ ನಡೆಸುವ ಮೂಲಕ ಪ್ರಾಮಾಣಿಕ ಪತ್ರಕರ್ತರು ಸಂಕಷ್ಟ ಎದುರಿಸುತ್ತಾರೆ. ನಿರ್ಭೀತ ಪತ್ರಿಕೋದ್ಯಮಕ್ಕೆ ಹೆಸರಾಗಿದ್ದ ವಡ್ಡರ್ಸೆ ರಘುರಾಮ ಶೆಟ್ಟಿ ಹೆಸರಿನಲ್ಲಿ ಸರ್ಕಾರ ಪ್ರಶಸ್ತಿ ನೀಡುವಂತಾಗಬೇಕು ಎಂದು ಪತ್ರಕರ್ತ ವಸಂತ ಗಿಳಿಯಾರ್ ಹೇಳಿದರು.
ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಮೂಡುಬಿದಿರೆ ಪ್ರೆಸ್‌ಕ್ಲಬ್ ಆಶ್ರಯದಲ್ಲಿ ಶುಕ್ರವಾರ ಪತ್ರಿಕಾ ದಿನಾಚರಣೆ ಅಂಗವಾಗಿ ಸಮಾಜಮಂದಿರದಲ್ಲಿ ನಡೆದ ಮಾಧ್ಯಮ ಹಬ್ಬ 2022 ದಲ್ಲಿ ವಿಶ್ರಾಂತ ಪತ್ರಕರ್ತ ಸದಾನಂದ ಹೆಗಡೆಕಟ್ಟೆ ಪ್ರಾಯೋಜಿತ ದತ್ತಿ ಉಪನ್ಯಾಸ ಮಾಲಿಕೆಯಡಿ `ತನಿಖಾ ಪತ್ರಿಕೋಧ್ಯಮ ಮತ್ತು ಪತ್ರಕರ್ತರ ಸವಾಲುಗಳು' ವಿಷಯದ ಕುರಿತು ಮಾತನಾಡಿದರು.
ಶಾಸಕ ಉಮಾನಾಥ ಕೋಟ್ಯಾನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಪತ್ರಕರ್ತರು ಸತ್ಯ ಮತ್ತು ಸತ್ವಯುತ ಬರಹಗಳಿಗೆ ಆದ್ಯತೆ ನೀಡಬೇಕು. ವಿಷಯದ ನೈಜತೆಯನ್ನು ಅರಿತು ಬರೆಯಬೇಕು. ಆಗ ಪತ್ರಕರ್ತರಿಗೂ ಗೌರವ ಸಿಗುವುದಲ್ಲದೆ ಪತ್ರಿಕೋದ್ಯಮದ ಘನತೆಯೂ ಹೆಚ್ಚುತ್ತದೆ ಎಂದರು.
ಸಂಘದ ಅಧ್ಯಕ್ಷ ವೇಣುಗೋಪಾಲ ಅಧ್ಯಕ್ಷತೆವಹಿಸಿದರು. ಮಾಜಿ ಶಾಸಕ ಅಭಯಚಂದ್ರ ಜೈನ್ ಮುಖ್ಯ ಅತಿಥಿಯಾಗಿದ್ದರು. ಕಾರ್ಯದರ್ಶಿ ಶರತ್ ದೇವಾಡಿಗ ಉಪಸ್ಥಿತರಿದ್ದರು.
ಹಿರಿಯ ಸಾಹಿತಿ ಎಂ.ಡಿ. ಇಂದ್ರ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಜಾನಪದ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಬಂಗೇರ, ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದಿರುವ ಆಳ್ವಾಸ್ ಪ.ಪೂ. ಕಾಲೇಜಿನ ವಾಣಿಜ್ಯ ವಿಭಾಗದ ಅದ್ವಿತಿ ಪಿ.ಹೆಗ್ಡೆ, ವಿಜ್ಞಾನ ವಿಭಾಗದ ಭಕ್ತಿಶ್ರೀ, ಭುವನ್‌ದೀಪ್ ಡಿ.ಆಚಾರ್, ರೋಟರಿ ಶಾಲೆಯ ಎಸ್‌ಎಸ್‌ಎಲ್‌ಸಿ ಸಾಧಕ ವಿದ್ಯಾರ್ಥಿ ಸುಧೀಂದ್ರ ಕಾಮತ್ ಅವರನ್ನು ಗೌರವಿಸಲಾಯಿತು. ಧನಂಜಯ ಮೂಡುಬಿದಿರೆ ಸನ್ಮಾನಿತರನ್ನು ಪರಿಚಯಿಸಿದರು.
ಎಂ.ಡಿ. ಇಂದ್ರರ ಪರವಾಗಿ ಅವರ ಪುತ್ರ ಸುಖರಾಜ್ ಇಂದ್ರ, ಗೌರವ ಪುರಸ್ಕಾರ ಸ್ವೀಕರಿಸಿದವರ ಪರವಾಗಿ ಭಕ್ತಿಶ್ರೀ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ನವೀನ್ ಸಾಲ್ಯಾನ್ ಸ್ವಾಗತಿಸಿದರು, ಕೋಶಾಧಿಕಾರಿ ಗಣೇಶ್ ಕಾಮತ್ ವಂದಿಸಿದರು. ಉಪಾಧ್ಯಕ್ಷ ಅಶ್ರಫ್ ವಾಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.