ಮೂಡುಬಿದಿರೆ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ಮೂಡುಬಿದಿರೆ ಇದರ ತಾಲೂಕು ಮಟ್ಟದ ಪದಾಧಿಕಾರಿಗಳ ಸಮಾವೇಶವು ಕನ್ನಡಭವನದಲ್ಲಿ ಮಂಗಳವಾರ ನಡೆಯಿತು.

ಶ್ರೀ.ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಸಂಪತ್ ಸಾಮ್ರಾಜ್ಯ ಅವರು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ ಧರ್ಮಾಧಿಕಾರಿಗಳು ಬಡ ಜನರ ಏಳಿಗೆಗಾಗಿ ಮತ್ತು ಅವರ ಆದಾಯವನ್ನು ಹೆಚ್ಚಿಸಬೇಕೆಂಬ ಉದ್ದೇಶವನ್ನಿಟ್ಟುಕೊಂಡು 42 ವರ್ಷಗಳ ಹಿಂದೆ ಆರಂಭಿಸಿದ ಗ್ರಾಮಾಭಿವೃದ್ಧಿ ಯೋಜನೆಯಿಂದಾಗಿ ಹೆಚ್ಚಿನವರು ಅಭಿವೃದ್ಧಿಯನ್ನು ಹೊಂದಿದ್ದಾರೆ.

ರಾಜ್ಯದ 30 ಜಿಲ್ಲೆಗಳಿಗೂ ಪಸರಿಸಿರುವ ಈ ಯೋಜನೆಯಲ್ಲಿ 6,52,697 ಸ್ವಸಹಾಯ ಗುಂಪುಗಳಿವೆ.55 ಲಕ್ಷ ಜನ ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳುವ ಮೂಲಕ ಪ್ರಗತಿಯನ್ನು ಪಡೆದುಕೊಳ್ಳುತ್ತಿದ್ದಾರೆ ಆದ್ದರಿಂದ ನಾವು ಈ ಯೋಜನೆಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ ಎಂದರು.

ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಸುಭಾಶ್ಚಂದ್ರ ಚೌಟ ಅಧ್ಯಕ್ಷತೆ ವಹಿಸಿ ಮಾತನಾಡಿ ನೀಡುವ ಪಡೆದುಕೊಳ್ಳುವ ಸಾಲಕ್ಕೆ ಎಷ್ಟು ಬಡ್ಡಿ ವಿಧಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಿ ಸುಳ್ಳು ಆರೋಪಗಳಿಗೆ ಕಿವಿಕೊಡದೆ ಅಭಿವೃದ್ಧಿಯ ಪಥದತ್ತ ಸಾಗಿ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ಮತ್ತು ದ.ಕ.ಜಿಲ್ಲೆಯ ನಿರ್ದೇಶಕ ಮಹಾಬಲ ಕುಲಾಲ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಗ್ರಾಮಾಭಿವೃದ್ಧಿ ಯೋಜನೆಯ ಆರಂಭ, ಈಗ ಯಾವ ರೀತಿ ಇದೆ ಹಾಗೂ ಯೋಜನೆಯ ಬಗ್ಗೆ ಸರಿಯಾಗಿ ಅರಿತುಕೊಳ್ಳುವಂತೆ ತಿಳಿಸಿ ಪದಾಧಿಕಾರಿಗಳಿಗೆ ಮಾಹಿತಿಯನ್ನು ನೀಡಿದರು.

ಬ್ಯಾಂಕ್‌ ಆಫ್‌ ಬರೋಡಾದ ಅಸಿಸ್ಟೆಂಟ್ ಮೆನೇಜರ್ ನಿತಿನ್ ಅವರು ಭಾಗವಹಿಸಿ ಬ್ಯಾಂಕ್ ಮತ್ತು ಗ್ರಾಮಾಭಿವೃದ್ಧಿ ಯೋಜನೆಗಿರುವ ಸಂಪರ್ಕದ ಬಗ್ಗೆ ಮಾಹಿತಿ ನೀಡಿದರು.

ಪ್ರೇಮನಾಥ್ ಅವರು ಸಂಘದ ಮರುಪಾವತಿ ಚೀಟಿ ಬದಲಾವಣೆಯ ಬಗ್ಗೆ ಮಾಹಿತಿ ನೀಡಿದರು.

ಯೋಜನಾಧಿಕಾರಿ ಸುನೀತಾ ನಾಯ್ಕ ಸ್ವಾಗತಿಸಿ ತಾಲೂಕಿನ 2023-24 ನೇ ಸಾಲಿನ ಸಾಧನಾ ವರದಿ ಮತ್ತು 2024ರ ಸಾಲಿನ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಇತರ ಕಾರ್ಯಕ್ರಮಗಳ ವರದಿಯನ್ನು ಮಂಡಿಸಿದರು. ಮೂಡುಬಿದಿರೆ ವಲಯದ ಮೇಲ್ವಿಚಾರಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಆಲಂಗಾರು ವಲಯದ ಮೇಲ್ವಿಚಾರಕ ವಿಠಲ್ ವಂದಿಸಿದರು.