ಮಂಗಳೂರು, ಎಪ್ರಿಲ್ 17:- ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಸೋಂಕು ನಿಯಂತ್ರಣ ಕ್ರಮಗಳನ್ನು ಕಟುನಿಟ್ಟಾಗಿ ಜಾರಿಗೆ ತರುವುದರ ಜೊತೆಗೆ ಕೋವಿಡ್  ಪರೀಕ್ಷೆಗಳನ್ನು ಹೆಚ್ಚು ಹೆಚ್ಚು ಮಾಡಿ, ಸೋಂಕಿತರನ್ನು ಗುರುತಿಸಿ, ಚಿಕಿತ್ಸೆ ನೀಡಿ, ಅವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರಿಗೂ ಸಹ ಪರೀಕ್ಷೆಗೆ ಒಳಪಡಿಸಬೇಕು ಎಂದು ಮುಜರಾಯಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ತಾವು ಚಿಕಿತ್ಸೆ ಪಡೆಯುತ್ತಿದ್ದ ಉಡುಪಿಯ ಆದರ್ಶ ಆಸ್ಪತ್ರೆಯಿಂದ ವೀಡಿಯೋ ಕಾನ್ಫ್‍ರೆನ್ಸ್ ಮೂಲಕ ಕೊರೋನಾ ನಿಯಂತ್ರಣ ಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ವಾರ ಪ್ರತೀ ದಿನ  60 ರಿಂದ 70 ಪ್ರಕರಣಗಳು ಬರುತ್ತಿದ್ದರೆ, ನಾಲ್ಕೈದು ದಿನಗಳಿಂದ ಪ್ರತೀ ದಿನ 140 ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬರುವುದರೊಂದಿಗೆ ಜಿಲ್ಲೆಯಲ್ಲಿ ಎರಡನೇ ಅಲೆಯ ಆತಂಕ ಉಂಟುಮಾಡಿದೆ. ಇದರ ನಿಯಂತ್ರಣಕ್ಕೆ  ಅಗತ್ಯ ಇರುವ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸೋಂಕಿನ ಪ್ರಮಾಣವನ್ನು ಕಡಿಮೆಗೊಳಿಸಲು  ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾರ್ವಜನಿಕರು ಕೋವಿಡ್ ನಿಯಂತ್ರಣದ ಸರಳ ಮಾರ್ಗಸೂಚಿಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್‍ಗಳ ಬಳಕೆ ಸೇರಿದಂತೆ ಮತ್ತಿತರ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು ಮಾಲ್‍ಗಳಲ್ಲಿ, ಪೆಟ್ರೋಲ್ ಬಂಕ್ ಸೇರಿದಂತೆ ಮತ್ತಿತರ ವಾಣಿಜ್ಯ ಚಟುವಟಿಕೆದಾರರು ತಮ್ಮ ಗ್ರಾಹಕರಿಗೆ ಕರೋನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಎಚ್ಚರಿಸಬೇಕು.  ರಾತ್ರಿ ಕಫ್ರ್ಯೂ ನಿಯಮಗಳು ಕಟ್ಟುನಿಟ್ಟಾಗಿ ಪಾಲನೆಯಾಗಬೇಕು. ಕೇರಳ ಗಡಿಯಲ್ಲಿ ಕೊರೋನಾ ನೆಗೆಟಿವ್ ರಿಪೋರ್ಟ್‍ನ ತಪಾಸಣೆ ಸೇರಿದಂತೆ ಮತ್ತಿತರ ನಿಯಂತ್ರಣ ಕ್ರಮಗಳನ್ನು ಜಿಲ್ಲೆಯಾದ್ಯಂತ ಬಿಗಿಗೊಳಿಸಬೇಕು ಎಂದರು.

ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರ ಮೇಲುಸ್ತುವಾರಿಗಳನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ, ಅವರ ಆರೋಗ್ಯವನ್ನು ತಪ್ಪದೇ ವಿಚಾರಿಸಿ, ಹೆಚ್ಚಿನ ನಿಗಾ ವಹಿಸುವಂತೆ ಸೂಚಿಸಿದರು.  

ಮುಂದಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿವೆ. ಅವರುಗಳ ಚಿಕಿತ್ಸೆ ನೀಡಲು ಆಸ್ಪತ್ರೆಗಳಲ್ಲಿ ಬೆಡ್‍ಗಳ ವ್ಯವಸ್ಥೆ, ವೆಂಟಿಲೇಟರ್, ಆಕ್ಸಿಜನ್‍ನ ಲಭ್ಯತೆ ಇರುವ ಹಾಗೆ ವ್ಯವಸ್ಥೆಗಳನ್ನು ಮಾಡಿಕೊಳ್ಳಬೇಕು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 4978 ಹಾಸಿಗೆಗಳಿವೆ ಎಂದು ಅವರು ಖಾಸಗಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರು ಕೋವಿಡ್ ಚಿಕಿತ್ಸೆ ಪಡೆಯಲು ಅನೂಕೂಲವಾಗುವಂತೆ ನೂಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದು ತಿಳಿಸಿದರು.

ಕೊರೋನಾ ಚಿಕಿತ್ಸೆಗೆ ಪೂರಕವಾಗಿರುವ ರೆಮ್‍ಡಿಸಿವಿಯರ್ ಸೇರಿದಂತೆ ಮತ್ತಿತರ ಔಷಧಿಗಳು, ಪಿಪಿಇ ಕಿಟ್, ಮಾಸ್ಕ್, ಟೆಸ್ಟಿಂಗ್ ಕಿಟ್ ಸೇರಿದಂತೆ ಮತ್ತಿತರ ಅತ್ಯವಶ್ಯಕ ಪರಿಕರಗಳ ದಾಸ್ತಾನುಗಳ ಬಗ್ಗೆ ಮಾಹಿತಿ ಪಡೆದು ಮಾತನಾಡಿ, ಯಾವುದೇ ಕೊರತೆ ಉಂಟಾದಲ್ಲಿ ಸರ್ಕಾರದಿಂದ ಸರಬರಾಜು ಆಗುವಂತೆ ನೋಡಿಕೊಳ್ಳಲಾಗುವುದು ಎಂದರು.

ಪ್ರಸ್ತುತ ದಿನಗಳಲ್ಲಿ ಹೆಚ್ಚು ಸೋಂಕಿತರುಗಳು ಯುವ ಜನರುಗಳಾಗಿದ್ದು, ಅವರುಗಳು  ತಮ್ಮ ಹಿರಿಯರಿಗೂ ಸೋಂಕು ಹರಡುವ ಸಾಧ್ಯತೆ ಇದೆ. ಅವರುಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರ ಜೊತೆಗೆ ಇತರ ಕಾಯಿಲೆಗಳಿಂದ ಬಳಲುತ್ತಿರುತ್ತಾರೆ. ಅವರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು,  ಕೋವಿಡ್ ನಿರೋಧಕ ಲಸಿಕೆಯನ್ನು ತಪ್ಪದೇ ಪಡೆಯುವಂತೆ ಪ್ರೇರೇಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ಜಿಲ್ಲೆಯಲ್ಲಿ 4,0,16,121 ಜನರು 45 ವರ್ಷದ ಮೇಲ್ಪಟ್ಟ ವಯೋಮಾನದವರಿದ್ದು ಈ ವರೆಗೆ 50,000 ಜನರಿಗೆ ಸೋಂಕು ನಿರೋಧಕ ಚುಚ್ಚುಮದ್ದನ್ನು ನೀಡಲಾಗಿದೆ ಮುಂದಿನ 20 ದಿನಗಳ ಒಳಗಾಗಿ ಪ್ರತಿಯೊಬ್ಬರಿಗೂ ಚುಚ್ಚು ಮದ್ದು ನೀಡಬೇಕು ಎಂದ ಅವರು ಇದು ಆಂದೋಲನದ ರೀತಿಯಲ್ಲಿ ಸಂಘ ಸಂಸ್ಥೆಗಳು ಸೇರಿದಂತೆ ಯುವಕ ಮಂಡಲಗಳು, ಆಶಾ ಕಾರ್ಯಕರ್ತೆಯರ ಸಹಭಾಗಿತ್ವದಲ್ಲಿಯಾಗಬೇಕು ಎಂದರು.

ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೋನಾ ಸೋಂಕಿನ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕು ಎಂದ ಅವರು ಸಭೆ ಸಮಾರಂಭಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಚಾಚು ತಪ್ಪದೆ ಪಾಲಿಸಬೇಕು ಇವುಗಳ ಮೇಲುಸ್ತುವಾರಿಯನ್ನು ಸ್ಥಳೀಯ ಸಂಸ್ಥೆಗಳು, ಪೋಲಿಸ್ ಇಲಾಖೆ ಮಾಡಬೇಕು ಎಂದರು.

ಪಾಸಿಟಿವ್ ವರದಿ ಬಂದ ಗರ್ಭಿಣಿಯರಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ವ್ಯವಸ್ಥೆಯನ್ನು ಮಾಡಬೇಕೆಂದು ಸೂಚನೆ ನೀಡಿದ ಅವರು ಡಯಾಲಿಸಿಸ್ ರೋಗಿಗಳೂ ಸೇರಿದಂತೆ ಇತರೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಶುಶ್ರೂಷೆಗೆ ಕೊರತೆ ಉಂಟಾಗದಂತೆ ಎಚ್ಚರವಹಿಸಬೇಕು ಎಂದರು.

ಮುಂಬರುವ  ಜೂನ್‍ವರೆಗಿನ ಬೇಸಿಗೆಯಲ್ಲಿ ಜಿಲ್ಲೆಯ ಯಾವುದೇ ಗ್ರಾಮ ಹಾಗೂ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ, ಅಗತ್ಯ ಮುಂಜಾಗೃತಾ ಕ್ರಮ ವಹಿಸಿ, ಸಮಸ್ಯೆಯಾಗದಂತೆ ಎಚ್ಚರವಹಿಸಬೇಕು ಎಂದರು.

ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕದ ಯೋಜನೆಯಡಿ ಚಿಕಿತ್ಸೆಯು ಎಲ್ಲಾ ಆಸ್ಪತ್ರೆಗಳಲ್ಲಿಯೂ ಲಭ್ಯವಾಗಿ ಸಾರ್ವಜನಿಕರು ಚಿಕಿತ್ಸೆ ಪಡೆಯುವಂತೆಯಾಗಬೇಕು, ಇದಕ್ಕೆ ಸಹಕರಿಸಲು ಆರೋಗ್ಯ ಮಿತ್ರರನ್ನು ಆಸ್ಪತ್ರೆಗಳಲ್ಲಿ ನೇಮಕ ಮಾಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾನೆ, ಅಪರ ಜಿಲ್ಲಾಧಿಕಾರಿ ಎಮ್. ಜೆ. ರೂಪಾ, ಉಪವಿಭಾಗಾಧಿಕಾರಿಗಳು, ತಹಶೀಲ್ದಾರರು, ಸಿಡಿಪಿಓಗಳು ಮತ್ತಿತರರು ಉಪಸ್ಥಿತರಿದ್ದರು.