ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಮೂಡುಬಿದಿರೆ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‍ಸಿ) ಎನರ್ಜಿ ಆ್ಯಂಡ್ ವೆಟ್‍ಲ್ಯಾಂಡ್ಸ್ ರಿಸರ್ಚ್ ಗ್ರೂಪ್, ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಮೂರು ದಿನಗಳ ಕಾಲ ಕೆರೆ ಸಮ್ಮೇಳನ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮೂರನೇ ಬಾರಿಗೆ ದ್ವೈವಾರ್ಷಿಕ ಕೆರೆ ಸಮ್ಮೇಳನವನ್ನು ಆಯೋಜಿಸುತ್ತಿದ್ದು, 2016 ಹಾಗೂ 2018ರಲ್ಲಿ ಹಮ್ಮಿಕೊಂಡು ಯಶಸ್ವಿಗೊಳಿಸಿತ್ತು. ಪರಿಸರ, ನೀರು, ಜೀವ ವೈವಿಧ್ಯತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ, ವೈಜ್ಞಾನಿಕ ಅನ್ವೇಷಣೆಗಳ ಸಹಬಳಕೆಯ ಕುರಿತು ಚರ್ಚಿಸಲಾಗುತ್ತದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿಯ ಮಾಜಿ ಅಧ್ಯಕ್ಷ ಅನಂತ ಹೆಗ್ಡೆ ಅಶಿಸರ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ವಿಜ್ಞಾನಿ ಡಾ ಟಿ ವಿ ರಾಮಚಂದ್ರ ಭಾಗವಹಿಸಲಿದ್ದಾರೆ.
ದೇಶದ ವಿವಿಧ ಭಾಗಗಳಿಂದ ಸುಮಾರು 700 ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿಗಳು, ಪರಿಸರ ಹೋರಾಟಗಾರರು, ಹಾಗೂ ಸರಕಾರಿ ಅಧಿಕಾರಿಗಳು ಪ್ರತಿನಿಧಿಸಲಿದ್ದಾರೆ. ಐಐಟಿ, ಐಐಎಸ್ಸಿ, ಐಐಐಟಿ ಹಾಗೂ ಎನ್‍ಐಟಿಗಳಿಂದ ಸಂಶೋಧಕರು ಸೇರಿದಂತೆ, ಕೆನಡಾ, ರಷ್ಯಾ, ಸಿಂಗಪೂರ್ ಹಾಗೂ ನೇಪಾಳದವರಿಂದ ಪ್ರಬಂಧ ಮಂಡನೆ ನಡೆಯಲಿದೆ. ಮೂರು ದಿನಗಳ ಅವಧಿಯಲ್ಲಿ 11 ತಾಂತ್ರಿಕ ಅಧಿವೇಶನಗಳ ಜೊತೆಗೆ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಂದ 7 ಸೆಷನ್‍ಗಳು ನಡೆಯಲಿವೆ.