ಮೂಡುಬಿದಿರೆ:  ನಾನೊಬ್ಬ ಸೇನಾಧಿಪತಿ. ನಾನೆಂದು ರಾಜನಾಗಲೂ ಬಯಸಲ್ಲ. ಸೇನೆಯ ಸಂಪೂರ್ಣ ಜವಾಬ್ದಾರಿ ಸೇನಾಧಿಪತಿಯದ್ದು.  ಅಂತೆಯೆ ನಮ್ಮ ಮೇಲೆ ಭರವಸೆ ಇಟ್ಟು ಬಂದಂತಹ ಮಕ್ಕಳನ್ನು ಗುರಿಯೆಡೆಗೆ ಸಾಗಿಸುವ  ಜವಾಬ್ದಾರಿ  ನಮ್ಮ ಮೇಲಿದೆ ಎಂದು  ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ತಿಳಿಸಿದರು. 

ಆಳ್ವಾಸ್ ಪದವಿಪೂರ್ವ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ  ಮುಂಡ್ರುದೆಗುತ್ತು ಅಮರನಾಥ್ ಶೆಟ್ಟಿ ( ಕೃಷಿಸಿರಿ) ವೇದಿಕೆಯಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ವಿದ್ಯಾಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

ನನ್ನ ಆರೋಗ್ಯ, ಕುಟುಂಬ ಎಂದೂ ನನಗೆ ಮೊದಲ ಆದ್ಯತೆಯಾಗಲು ಸಾಧ್ಯವಿಲ್ಲ. ನಮ್ಮನ್ನು ನಂಬಿ ಬಂದ ಮಕ್ಕಳಿಗೆ ನನ್ನ ಮೊದಲ ಪ್ರಾಶಸ್ತ್ಯ. ನಾನು ಸ್ವತಃ ಸ್ಫರ್ಧಾಳು ಆಗದೆ ವಿನಾ, ವಿದ್ಯಾರ್ಥಿಗಳನ್ನು ಸ್ಪರ್ಧೆಗೆ ತಯಾರು ಮಾಡಿಸಲು ಸಾಧ್ಯವಿಲ್ಲ.  ನನ್ನ ಮತ್ತು ಮಕ್ಕಳ ಸಂಬಂಧ  ಕುಂಬಾರ ಹಾಗೂ ಮಡಿಕೆಯಂತೆ. ಕುಂಬಾರ ಹೇಗೆ ಮಣ್ಣನ್ನು ಹದಗೊಳಿಸಿ ಮಡಿಕೆಗೆ ಸುಂದರರೂಪ ಕೊಡುತ್ತಾನೋ, ಅಂತೆಯೆ ನಿಮ್ಮನ್ನು ಇಂದಿನ ಸ್ಪರ್ಧಾತ್ಮಕ ಜಗತ್ತಿಗೆ ತಯಾರುಗೊಳಿಸುವಲ್ಲಿ  ನಾವೆಲ್ಲ ಶ್ರಮ ಹಾಕುತ್ತೆವೆ.  ಈ ಹಂತದಲ್ಲಿ ಕೆಲವರಿಗೆ ತಟ್ಟುವ ಕೈಕಾಣುತ್ತದೆಯೇ ಹೊರತು, ಆಧರಿಸುವ ಕೈ ಕಾಣುದಿಲ್ಲ.  ತಾಯಿ ಮಗುವಿನ ಸಂಬಂಧದಂತೆ ಬೆಲೆ ಕಟ್ಟಲಾಗದ ಬಂದುತ್ವ ನಮ್ಮದು  ಎಂದರು. 

ಎನ್‍ಸಿಆರ್‍ಟಿ ಪರೀಕ್ಷೆಗೆ ಇನ್ನೂ ಕೇವಲ 17 ದಿನಗಳು ಉಳಿದಿದೆ. ಈ ಸಂಧರ್ಭದಲ್ಲಿ ಯಾವುದೇ ಗೊಂದಲಕ್ಕೆ ಒಳಗಾಗದೆ ಪರೀಕ್ಷೆಯೆಡೆಗೆ ಗಮನ ಹರಿಸಿ.  ನಿಮ್ಮ ಗುರಿ ಸದಾ ನಿಮ್ಮ ಕಣ್ಣ ಮುಂದೆ ಇರಲಿ. ಆಗ ಸಾಧನೆ ಸುಲಭ.  ಈಗಾಗಲೆ ಹಲವು ನೀಟ್, ಸಿಇಟಿ ಅಣಕು ಪರೀಕ್ಷೆಗಳು ನಡೆದಿವೆ. ಮುಂದಿನ ದಿನಗಳಲ್ಲಿ 14 ನೀಟ್ ಹಾಗೂ 6 ಸಿಇಟಿ ಅಣಕು ಪರೀಕ್ಷೆಗಳನ್ನು ನೆಡಸಲಾಗುವುದು.  ಇದು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ವೃದ್ಧಿಸಿ, ಮುಂದೆ ನಡೆಯುವ  ಪರೀಕ್ಷೆಯಲ್ಲಿ ಯಾವುದೇ ಪ್ರಶ್ನೆ ಕೊಟ್ಟರೂ ಉತ್ತರಿಸುವ ಚಾಕಚಕ್ಯತೆ ನೀಡುತ್ತದೆ.  ನಿಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಆದ್ಯತೆ ನೀಡಿ ಎಂದರು. 

ಮುಂದೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಆಳ್ವಾಸ್‍ನ ವಿದ್ಯಾರ್ಥಿಗಳು ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗದಲ್ಲಿ ಪ್ರಥಮ ಸ್ಥಾನಗಳಿಸಿದರೆ ತಲಾ 3ಲಕ್ಷ,  ಸಿಇಟಿಯಲ್ಲಿ ಪ್ರಥಮ ಸ್ಥಾನಗಳಿಸಿದರೆ 5 ಲಕ್ಷ, ನೀಟ್‍ನಲ್ಲಿ ದೇಶಕ್ಕೆ ಮೊದಲ ಸ್ಥಾನ ಬಂದರೆ 10 ಲಕ್ಷ ನೀಡುತ್ತೇನೆ ಎಂದು ಘೋಷಿಸಿದರು. 

ದತ್ತು ಸ್ವೀಕಾರದ ಪದ್ಧತಿಯನ್ನು ರಾಜ್ಯಕ್ಕೆ ಪರಿಚಯಿಸಿದ ಕೀರ್ತಿ ಆಳ್ವಾಸ್‍ಗೆ ಸಲ್ಲುತ್ತದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಪ್ರತೀ ವರ್ಷ 40 ಕೋಟಿಗೂ ಅಧಿಕ ಹಣ ಇದಕ್ಕಾಗಿ ವ್ಯಯಿಸುತ್ತದೆ. ಆಳ್ವಾಸ್ ನೆಡೆಸುವ ಕನ್ನಡ ಮಾಧ್ಯಮ ಶಾಲೆಯನ್ನು ರಾಜ್ಯದ ಶಿಕ್ಷಣ ಇಲಾಖೆ ರಾಜ್ಯದ ನಂಬರ್ ಒನ್ ಶಾಲೆ ಎಂದು ಘೋಷಿಸಿದೆ ಎಂದು ತಿಳಿಸಿದರು. 

ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಇಂಗ್ಲೀಷ್ ಉಪನ್ಯಾಸಕ ರಾಜೇಶ್ ಡಿಸೋಜಾ ಕಾರ್ಯಕ್ರಮ ನಿರ್ವಹಿಸಿದರು. ವೇದಿಕೆಯಲ್ಲಿ ಪ್ರಾಚಾರ್ಯ ಪ್ರೋ ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಜಾನ್ಸಿ ಪಿ.ಎನ್, ಹಾಗೂ ವಿವಿಧ ಬ್ಯಾಚ್‍ಗಳ ಸಂಯೋಜಕರು ಉಪಸ್ಥಿತರಿದ್ದರು.