ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಬೆಳಕು-ಆಪ್ತ ಸಮಾಲೋಚನಾ ಕೇಂದ್ರ’ವನ್ನು ಆಳ್ವಾಸ್ ಪದವಿಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಿ ಉದ್ಘಾಟಿಸಲಾಯಿತು.
ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, ಭೂಮಿಯಲ್ಲಿರುವ ಎಲ್ಲಾ ಜೀವಿಗಳ ಪೈಕಿ ಮನುಷ್ಯ ಅತ್ಯಂತ ವಿಶೇಷ. ತನ್ನ ಬುದ್ಧಿಶಕ್ತಿ, ಕಲ್ಪನೆ, ನೈತಿಕ ಮೌಲ್ಯಗಳು ಹಾಗೂ ಸಮಾಜವನ್ನು ರೂಪಿಸುವ ಸಾಮಥ್ರ್ಯವು ಮನುಷ್ಯನನ್ನು ಇತರ ಜೀವರಾಶಿಗಳಿಗಿಂತ ಭಿನ್ನಗೊಳಿಸಿದೆ. ಆದರೆ, ಈ ಅಸಾಧಾರಣ ಸಾಮಥ್ರ್ಯಗಳ ಜೊತೆಗೆ ಮನುಷ್ಯ ತನ್ನ ಭಾವನಾತ್ಮಕ ಅಸ್ಥಿರತೆಯ ಬಲೆಗೆ ಸುಲಭವಾಗಿ ಸಿಲುಕ ಬಲ್ಲ ಎಂದರು.
ಅದರಲ್ಲೂ ಮುಖ್ಯವಾಗಿ ವಿದ್ಯಾರ್ಥಿಗಳು ತಮ್ಮ ಸಾಮಥ್ರ್ಯಕ್ಕಿಂತ ಹೆಚ್ಚು ಪ್ರಯತ್ನ ಮಾಡುವ ಸಂದರ್ಭಗಳಲ್ಲಿ, ಸ್ಪರ್ಧೆ, ಅತಿಯಾದ ಆಕಾಂಕ್ಷೆ ಹಾಗೂ ಪೋಷಕರ ಒತ್ತಡದಿಂದಾಗಿ ನಿರೀಕ್ಷಿತ ಫಲಿತಾಂಶವನ್ನು ಸಾಧಿಸಲು ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭಗಳು ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ. ಈ ಸಮಯದಲ್ಲಿ ಆಪ್ತ ಸಮಾಲೋಚನೆಯ ಅಗತ್ಯತೆಯಿದೆ” ಎಂದರು.
ಸಮಸ್ಯೆಯಿಂದ ಬಳಲುವ ವಿದ್ಯಾರ್ಥಿಗಳನ್ನು ಶಿಕ್ಷಕರು ಹಾಗೂ ವಿದ್ಯಾರ್ಥಿ ಕ್ಷೇಮಪಾಲಕರು ಕೂಡಲೇ ಗುರುತಿಸಿ, ಸೂಕ್ತ ಮಾರ್ಗದರ್ಶನ ಮತ್ತು ಚಿಕಿತ್ಸೆ ನೀಡಿದರೆ ಅವರು ಬೇಗನೆ ಚೇತರಿಸಿಕೊಳ್ಳಬಹುದು ಎಂದು ತಿಳಿಸಿದರು.
ಆಳ್ವಾಸ್ ಆಪ್ತ ಸಮಾಲೋಚನಾ ಕೇಂದ್ರದಲ್ಲಿ ವೃತ್ತಿಪರ ಸಮಾಲೋಚಕರ ಜೊತೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಹೋಮಿಯೋಪತಿ ವೈದ್ಯರ ಸೇವೆಯೂ ಲಭ್ಯವಿದೆ. ಕೇಂದ್ರವು ವಿದ್ಯಾರ್ಥಿಗಳ ಮಾನಸಿಕ ಮತ್ತು ಭಾವನಾತ್ಮಕ ಸುಸ್ಥಿತಿಗಾಗಿ ಸುರಕ್ಷಿತ ಹಾಗೂ ಗೌಪ್ಯತೆಯೊಂದಿಗೆ ಚಿಕಿತ್ಸೆಯನ್ನು ನೀಡುತ್ತದೆ. ವೈಯಕ್ತಿಕ ಸಮಾಲೋಚನೆ ಮತ್ತು ಗುಂಪು ಚಟುಚಟಿಕೆಗಳ ಮೂಲಕ ಮನಸ್ಸಿನ ಗೊಂದಲ ನಿವಾರಣೆ, ಸಹನಶೀಲತೆಯ ವೃದ್ಧಿ, ಆತ್ಮವಿಶ್ವಾಸ ಬೆಳೆಸುವ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ. ಇಲ್ಲಿ ಪ್ರಮುಖವಾಗಿ ಸೈಕೋ ತೆರೆಪಿ, ಬಿಬ್ಲಿಯೋ ತೆರೆಪಿ ಹಾಗೂ ಮ್ಯೂಸಿಕ್ ತೆರೆಪಿಗಳ ಮೂಲಕ ವಿದ್ಯಾರ್ಥಿಗಳ ಭಾವನಾತ್ಮಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೋ ಸದಾಕತ್, ಬೆಳಕು-ಆಪ್ತ ಸಮಾಲೋಚನಾ ಕೇಂದ್ರದ ಮುಖ್ಯ ಆಪ್ತಸಮಾಲೋಚಕಿ ರೆನಿಟಾ ಡಿಸೋಜಾ, ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್, ಆಪ್ತಸಮಾಲೋಚಕರಾದ ಆ್ಯನ್ ಡಿಕೋಸ್ಟಾ, ಸುಜನ್ ಶೆಟ್ಟಿ ಹಾಗೂ ಇನ್ನಿತರರು ಇದ್ದರು.