ವರದಿ ರಾಯಿ ರಾಜಕುಮಾರ

ವೇಣೂರು, ಮೂಡುಬಿದಿರೆಗಳ ಪ್ರಥಮ ವೆಬ್ ನಿರ್ಮಾಪಕ, ಬೆಟ್ಕೇರಿಯ ಪಟ್ಟಣಶೆಟ್ಟಿ ಮನೆತನ ಹಾಗೂ ಸೂರಾಲು ಮನೆತನಗಳ ಕೊಂಡಿಯಾಗಿರುವ ಅಭಿಜಿತ್ ಸರ್ವರಿಂದ ಅಭಿನಂದನೀಯರಾದವರು. ಅವರಂತೆ ಸತತ ಅಭ್ಯಾಸ, ಧ್ಯಾನ, ಜ್ಞಾನಗಳಿಂದ ಅಭಿವೃದ್ಧಿ ಹೊಂದಿದ ಸತ್ ಇಂದ್ರಿಯಗಳನ್ನು ಬೆಳೆಸಿಕೊಂಡು ಮನುಷ್ಯರ ಸೇವೆ ಮಾಡುವ ಗುಣವನ್ನು ಹೊಂದುವುದು ಅಗತ್ಯ ಎಂದು ಮೂಡುಬಿದಿರೆ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ಗೈದರು.

ಅವರು ನವೆಂಬರ್ 16ರಂದು ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಹ ಸಂಭ್ರಮದ ಮೂರನೇ ದಿನದ ಸಮಗ್ರ ಸಾಧಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಸಮಗ್ರ ಸಾಧಕ ಪ್ರಶಸ್ತಿ ಪುರಸ್ಕೃತ ಯುವ ಉದ್ಯಮಿ ಅಭಿಜಿತ್ ಎಂ ಉತ್ತರಿಸಿ-ವ್ಯಕ್ತಿಗಳಿಗಿಂತ ತಾಂತ್ರಿಕತೆ ಹೆಚ್ಚು ವ್ಯಾಪಕವಾಗಿ ಬೆಳೆಯುತ್ತಿದೆ. ಸಮರ್ಪಕ ಕೆಲಸಗಾರರಿಂದ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಿದ ಕಾರಣ 10 ಕಂಪನಿಗಳ ಕೆಲಸ ನಮ್ಮ ಒಂದೇ ಟೀಮ್ ನಿಂದ ನಡೆಯುತ್ತಿದೆ. ಅಂತಹ ಯಶಸ್ವಿ ಕೆಲಸಗಾರರಿಂದ ಎಲ್ಲವೂ ಸಾಧ್ಯವಾಗಿದೆ ಎಂದು ಕೆಲಸಗಾರರ ಪ್ರಾಮಾಣಿಕತೆಯನ್ನು ಮೆಚ್ಚಿಕೊಂಡು ಅಭಿನಂದಿಸಿದರು.

ಶುಭಾಶಂಸನೆ ಗೈದ ಪ್ರಾಂಶುಪಾಲ ಡಾ. ಪ್ರಭಾತ್ ಬಲ್ನಾಡು ಅಭಿನಂದಿಸಿ ಮಾತನಾಡಿ ರಾಷ್ಟ್ರ ವ್ಯಾಪಿ ಎಂಟನೇ ಗರಿಷ್ಠ ವಾಣಿಜ್ಯ ಗ್ಯಾಸ್ ವಿತರಕ, ಎಚ್ ಪಿ ಸಿ ಎಲ್ ನ ರಾಷ್ಟ್ರೀಯ ಕಾರ್ಯದರ್ಶಿ, ಎರಡು ರಾಜ್ಯಗಳ ಎಂಟು ಜಿಲ್ಲೆಗಳಲ್ಲಿ ಅತ್ಯುತ್ತಮ ವಿತರಕ ಪ್ರಶಸ್ತಿ ಪಡೆದ, ಜೆ ಸಿ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ವ್ಯಕ್ತಿಗಳಲ್ಲಿ ಓರ್ವ, ವಿನಮ್ರ, ಜ್ಞಾನಿ, ದಾನಿ, ಮಹಾನ್ ಸಾಧಕ, ಶ್ರೇಷ್ಠ ಚಿಂತಕ ಅಭಿಜಿತ್ ರ ಆಧುನಿಕತೆ ಮತ್ತು ಹೊಸತನವನ್ನು ಪೋಣಿಸಿದ ಅಪೂರ್ವ ಸಾಧನೆಗಳನ್ನು ಸಭೆಯ ಮುಂದಿಟ್ಟರು.

ದೇಶದ ಸ್ವಾವಲಂಬನೆಗೆ, ಗ್ರಾಮೀಣ ಅಭಿವೃದ್ಧಿಗೆ ಸೋಲಾರ್, ಇತ್ಯಾದಿ ತಾಂತ್ರಿಕತೆಗಳ ಅಭಿವೃದ್ಧಿಯ ಅಗತ್ಯವನ್ನು ಸೊಸೈಟಿಯ ಅಧ್ಯಕ್ಷ ಬಾಹುಬಲಿ ಪ್ರಸಾದ್ ತಿಳಿಸಿದರು. ತಂತ್ರಜ್ಞಾನದ ಎದುರು ಚರಿತ್ರೆ, ಇತ್ಯಾದಿ ವಿಷಯಗಳು ಹಿಂದೆ ಸರಿದಿವೆ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ವಿಷಾದಗೊಂಡರು.

ಇದೇ ಸಂದರ್ಭದಲ್ಲಿ ಎರಡು ಗ್ರಾಮಗಳ ಶಿಕ್ಷಣ ಸಂಸ್ಥೆಗಳಿಗೆ ಪ್ರೋತ್ಸಾಹ ಧನವನ್ನು, 12 ರ್ಯಾಂಕುಗಳನ್ನು ಪಡೆದ ಸಹಕಾರಿ ಶಿಕ್ಷಣ ತರಬೇತಿ ಸಂಸ್ಥೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ವೇದಿಕೆಯಲ್ಲಿ ಚೌಟರ್ ಅರಮನೆಯ ವೀರೇಂದ್ರ ಕುಮಾರ್, ಸಿ ಎಚ್ ಅಬ್ದುಲ್ ಗಫೂರ್, ಹಾಜರಿದ್ದರು.

ಮಂಜುನಾಥ ಅಂಚನ್ ಪಟ್ಟಿಯನ್ನು ವಾಚಿಸಿದರು. ವಿಶೇಷ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕ ಮಾತಿನಲ್ಲಿ 12,000 ಸದಸ್ಯರನ್ನು ಹೊಂದಿರುವ ಸೊಸೈಟಿಯ ವಿವರಗಳನ್ನು ಪ್ರಸ್ತುತಪಡಿಸಿಯರು. ವಾಸುದೇವ ಭಟ್ ಪ್ರಾರ್ಥಿಸಿದರು. ಗಣೇಶ್ ಕಾಮತ್ ಕಾರ್ಯಕ್ರಮ ನಿರ್ವಹಿಸಿದರು.