ಮೂಡುಬಿದಿರೆ: ಪ್ರಾಮಾಣಿಕತೆ ಎಂಬುದು ನಮ್ಮ ನೈತಿಕ ಮತ್ತು ಸಾಮಾಜಿಕ ಬದುಕಿನ ಬಹುಮುಖ್ಯ ಅಂಶ. ಜೀವನದಲ್ಲಿ ಕಷ್ಟ, ವಿಫಲತೆಗಳು ಹಾಗೂ ಆಕಸ್ಮಿಕ ಸಮಸ್ಯೆಗಳು ಬಂದರೂ, ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದರೆ ಯಶಸ್ಸು ನಮಗೆ ಖಂಡಿತ ಒಲಿಯುತ್ತದೆ ಎಂದು ಮಾಜಿ ಸಚಿವ ಹಾಗೂ ರಾಜ್ ಫಿಶ್ ಮೀಲ್ ಆ್ಯಂಡ್ ಆಯಿಲ್ ಕಂಪೆನಿಯ ವ್ಯವಸ್ಥಾಪಕ ಪಾಲುದಾರ ಪ್ರಮೋದ ಮಧ್ವರಾಜ್ ನುಡಿದರು.
ಅವರು ಶನಿವಾರ ಕುವೆಂಪು ಸಭಾಂಗಣದಲ್ಲಿ ನಡೆದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ನೂತನ ವಿದ್ಯಾರ್ಥಿ ಸ್ಟಾರ್ಟ್‍ಅಫ್ ವೇದಿಕೆ ‘ಟ್ರೈಬ್ಲೇಜ್’ನ್ನು ಉದ್ಘಾಟಿಸಿ, ‘ಯಶಸ್ವಿ ನಾಯಕತ್ವದ ತಂತ್ರಗಳು’ ವಿಷಯದ ಕುರಿತು ಮಾತನಾಡಿದರು.
ನಮ್ಮ ಪರಂಪರೆ, ಸಂಸ್ಕೃತಿ, ಆಚರಣೆ, ಗುರುಹಿರಿಯರು, ಪಾಲಕರು, ಪೋಷಕರನ್ನು ಮರೆತ ದಿನ, ನಮ್ಮ ಅವನತಿ ಪ್ರಾರಂಭವಾಗುತ್ತದೆ. ದುರಾದೃಷ್ಟಾವಷಾತ್ ನಮ್ಮ ಇಂದಿನ ಸಮಾಜ ಭಾರತೀಯ ಭವ್ಯ ಪರಂಪರೆಯನ್ನು ಕಡೆಗಾಣಿಸುತ್ತಾ ಸಾಗಿದೆ. ನಮ್ಮ ಸಂಸ್ಕೃತಿಯ ಭಾಗವಾಗಿದ್ದ ಎರಡು ಕೈಗಳನ್ನು ಜೋಡಿಸಿ ವಂದಿಸುವ ಸಂಸ್ಕೃತಿ ನಮ್ಮಲ್ಲಿ ಮರೆಯಾಗಿ ವಿದೇಶಗಳಲ್ಲಿ ಆಳವಡಿಸಿಕೊಳ್ಳಲಾಗುತ್ತಿದೆ. ಇದು ಸಲ್ಲದು ಎಂದರು.
ತನ್ನ ಜೀವನ ವೃತಾಂತವನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡ ಅವರು, ತಾನು ಪ್ರಸಿದ್ಧ ರಾಜಕೀಯ ಮನೆತನ ಹಾಗೂ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ, ತನ್ನ ಅಸ್ಮಿತೆಯನ್ನು ಕಂಡಕೊಳ್ಳಲು ತಡಕಾಡಿದ ಬದುಕಿನ ವಿವಿಧ ಘಟ್ಟಗಳನ್ನು ವಿವರಿಸಿದರು. ಪ್ರಾರಂಭದಲ್ಲಿ ಪೌಲ್ಟ್ರಿ ವ್ಯವಹಾರ ಪ್ರಾರಂಭಿಸಿ ನಷ್ಟ ಅನುಭವಿಸಿದ ನಂತರ ಲಾಂಡ್ರಿ ವ್ಯಹಾರವನ್ನು ಆರಂಭಿಸಿ ನಂತರದಿನಗಳಲ್ಲಿ ಮೀನಿನ ವ್ಯವಹಾರದಲ್ಲಿ ಸಫಲತೆಯನ್ನು ಕಂಡುಕೊಂಡ ಪರಿಯನ್ನು ಎಳೆಎಳೆಯಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು.
15 ಪೈಸೆಯ ಲಾಭದಿಂದ 1 ರೂಪಾಯಿಗೆ ಎರಿಸಿದ ಕಥೆ
ಮೀನು ವ್ಯವಹಾರಕ್ಕೆ ಇಳಿದ ಕ್ಷಣದಿಂದ ಮೀನುಗಾರಿಕೆಯನ್ನು ತಂತ್ರಜ್ಞಾನ ಮತ್ತು ಆಧುನಿಕ ಮಾರುಕಟ್ಟೆ ತಂತ್ರಗಳೊಂದಿಗೆ ಬೆಸೆದು, ಈ ವಲಯದಲ್ಲಿ ಹೊಸ ಆಯಾಮಗಳನ್ನು ತಂದುಕೊಟ್ಟರು. 2002 ರಲ್ಲಿ ವೇ ಬ್ರಿಡ್ಜ್‍ನ್ನು ಆರಂಭಿಸಿ ಗಾತ್ರದ ಆಧಾರದಲ್ಲಿ ಮೀನನ್ನು ಮಾರುವ ವ್ಯವಸ್ಥೆಯಿಂದ ತೂಕದ ಆಧಾರದಲ್ಲಿ ಪ್ರಾರಂಬಿಸಿ, ಪ್ರತೀ ಕೆಜಿಗೆ ಮುಂಚೆ ಲಭಿಸುತ್ತಿದ್ದ 15 ಪೈಸೆಯ ಲಾಭದಿಂದ 1ರೂಪಾಯಿ ಲಾಭವನ್ನು ಮೀನುಗಾರರಿಗೆ ಒದಗಿಸಿದನ್ನು ವಿವರಿಸಿದರು.
ಲಕ್ಷ ಸಾಲ ನೀಡಲು ಹಿಂಜರಿದ ಬ್ಯಾಂಕಗಳಿಂದ ಕೋಟಿ ಸಾಲದ ಆಫರ್
ಒಂದು ಕಾಲದಲ್ಲಿ 20 ಲಕ್ಷ ಹಣವನ್ನು ಸಾಲವಾಗಿ ನೀಡಲು ಹಿಂದೆ ಮುಂದೆ ನೋಡಿದ ಬ್ಯಾಂಕ್‍ಗಳು ಯಶಸ್ವಿ ಉದ್ಯಮಿಯಾದಾಗ 50 ಕೋಟಿಯಷ್ಟು ಹಣವನ್ನು ನೀಡಲು ಮುಂದೆ ಬಂದ ಸನ್ನಿವೇಶವನ್ನು ವಿವರಿಸಿದರು. ಪ್ರತಿಯೊಬ್ದರ ಜೀವನದಲ್ಲೂ ಕಷ್ಟಗಳು, ಏಳು ಬೀಳುಗಳು ಬಂದೆ ಬರುತ್ತವೆ, ಆದರೆ ನಾವದನ್ನು ಹೇಗೆ ನಿಭಾಯಿಸುತ್ತವೆ ಎಂಬುದರ ಮೇಲೆ ನಮ್ಮ ಏಳಿಗೆ ನಿರ್ಧಾರವಾಗುತ್ತದೆ ಎಂದರು.
ತಾನು ರಾಜ್ಯದ ಮಂತ್ರಿಯಾಗಿದ್ದಾಗ ತನ್ನ ವ್ಯವಹಾರದಲ್ಲಾದ ಆರ್ಥಿಕ ಮುಗ್ಗಟ್ಟಿನಿಂದಾಗಿ ಆತ್ಮಹತ್ಯೆಮಾಡಿಕೊಳ್ಳುವ ಮನಸ್ಥಿತಿ ಏದುರಾಗಿತ್ತು, ಆದರೆ ಪರಿಸ್ಥಿತಿಯನ್ನು ನಿಭಾಯಿಸಿದ್ದರಿಂದಾಗಿ ತಾನಿಂದು ಯಶಸ್ವಿಯಾಗಿ ಸಮಾಜದ ಎಲ್ಲಾ ರಂಗದಲ್ಲೂ ಗುರುತಿಸುವಂತಾಯಿತು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ನಿಯಂತ್ರಿತ ಸಮಸ್ಯೆಗಳಿಗೆ ಪರಿಹಾರ ನಮ್ಮ ಬಳಿಯಲ್ಲಿದೆ
ಬದುಕಿನಲ್ಲಿ ಬರುವ ಸಮಸ್ಯೆಗಳು ಎರಡು ರೀತಿಯಲ್ಲಿದ್ದು, ನಿಯಂತ್ರಿತ ಸಮಸ್ಯೆ ಹಾಗೂ ಅನಿಯಂತ್ರಿತ ಸಮಸ್ಯೆಗಳು. ಇವುಗಳಲ್ಲಿ ನಿಯಂತ್ರಿತ ಸಮಸ್ಯೆಗಳನ್ನು ನಾವು ದೃಢವಾಗಿ ಎದುರಿಸಿ ಮುಂದೆ ಸಾಗಬೇಕು, ಆದರೆ ಅನಿಯಂತ್ರಿತ ಸಮಸ್ಯೆಗಳನ್ನು ದೇವರ ಮೇಲಿನ ನಂಬಿಕೆ, ಪ್ರಾಮಾಣಿಕತೆಯ ನೆಲೆಯಲ್ಲಿ ಎದುರಿಸಿ ಜಯಶಾಲಿಗಳಾಗಬೇಕು ಎಂದರು. ನಮ್ಮ ಏಳಿಗೆ ಸದಾ ನಮ್ಮ ಜೊತೆಗಿರುವವರ ಅಭ್ಯುದಯದ ಮೇಲೆ ನಿರ್ಧಾರಿತವಾಗುತ್ತದೆ, ಆ ಹಿನ್ನಲೆಯಲ್ಲಿ ನಮ್ಮ ಜೊತೆಗಿರುವವರ ಹಿತಾಸಕ್ತಿ ಕಾಪಾಡುವುದು ಅಷ್ಟೇ ಮುಖ್ಯ, ಇದು ವ್ಯವಹಾರ ಕ್ಷೇತ್ರದಲ್ಲಿ ಬಹಳ ಪ್ರಾಮುಖ್ಯತೆಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಮೋದ ಮಧ್ವರಾಜ್ ಮಂತ್ರಿಗಳಾಗಿದ್ದಾಗ ಹತ್ತು ಹಲವು ಸಮಾಜಮುಖಿ ಕ್ರಮಗಳನ್ನು ಜಾರಿಗೊಳಿಸಿದರು. ಪ್ರಮುಖವಾಗಿ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿ, ಕರ್ನಾಟಕದ ಕ್ರೀಡಾಪಟುಗಳಿಗೆ ಕ್ರೀಡಾ ಕೋಟಾದಡಿಯಲ್ಲಿ ಸರಕಾರಿ ನೌಕರಿಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದರು ಎಂದರು.
ನವ ಉದ್ಯಮಗಳು ಕಾಲೇಜಿನಲ್ಲಿ ಹುಟ್ಟಿಕೊಳ್ಳಲಿ
ವಿದ್ಯಾರ್ಥಿಗಳು ಜೀವನದಲ್ಲಿ ಸಾಧಿಸುವ ದೃಢ ಸಂಕಲ್ಪವನ್ನು ಹೊಂದಬೇಕು. ತಮ್ಮ ಮೇಲೆ ನಂಬಿಕೆ, ಗುರಿಯೆಡೆಗಿನ ಅಛಲ ನಿಲುವಿನ ಜೊತೆಯಲ್ಲಿ ಮೌಲ್ಯ ಹಾಗೂ ಪ್ರಾಮಾಣಿಕತೆಯ ದಾರಿಯಲ್ಲಿ ನಡೆದರೆ ಸಫಲತೆ ಸಾಧ್ಯ. ‘ಟ್ರೈಬ್ಲೇಜ್’ ವಿದ್ಯಾರ್ಥಿ ಸ್ಟಾರ್ಟ್‍ಅಫ್ ವೇದಿಕೆ ಮೂಲಕ ಹತ್ತು ಹಲವು ವ್ಯವಹಾರದ ನವ ಉದ್ಯಮಗಳು ಕಾಲೇಜಿನಲ್ಲಿ ಹುಟ್ಟಿಕೊಳ್ಳಲಿ. ಸಂಸ್ಥೆ ಅಂತಹ ಕಾರ್ಯಕ್ಕೆ ಸದಾ ಬೆಂಬಲಿಸುತ್ತದೆ ಎಂದರು.
ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್ ಮಾತನಾಡಿದರು. ‘ಟ್ರೈಬ್ಲೇಜ್’ ವಿದ್ಯಾರ್ಥಿ ಸ್ಟಾರ್ಟ್‍ಅಫ್ ವೇದಿಕೆಯ ನೂತನ ಲಾಂಛನ ಹಾಗೂ ಬುಲೆಟಿನ್‍ನ್ನು ಬಿಡುಗಡೆಗೊಳಿಸಲಾಯಿತು. ನೂತನ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ, ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ವೇದಿಕೆಯ ನಿರ್ದೇಶಕಿ ಸೋನಿ, ವೇದಿಕೆಯ ಅಧ್ಯಕ್ಷ ಹಾರ್ದಿಕ್ ಶೆಟ್ಟಿ, ಕಾರ್ಯದರ್ಶಿ ಕಿರಣ್‍ಕುಮಾರ್ ಇದ್ದರು. ಅಫ್ತಾಬ್ ಮೊಹಮ್ಮದ್ ನಿರೂಪಿಸಿ, ಚಿನ್ಮಯಿ ಹೊಳ್ಳ ಅತಿಥಿಯನ್ನು ಪರಿಚಯಿಸಿ, ಇಶಿಕಾ ಅಂಚನ್ ಸ್ವಾಗತಿಸಿ, ದುರ್ಗಾ ಬಾಕರ್ ವಂದಿಸಿದರು.