ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಅರಣ್ಯ ಇಲಾಖೆಯು ಲಾಡಿ ಚತುರ್ಮುಖ ಬ್ರಹ್ಮ ದೇವಸ್ಥಾನದ ಪೂರ್ವದಲ್ಲಿರುವ ಖಾಸಗಿ ಸ್ಥಳದ ವ್ಯಕ್ತಿಯೋರ್ವರು ಒಂದು ಮರ ಕಡಿಯಲು ಪರವಾನಿಗೆ ಪಡೆದರು. ಆ ಒಂದು ಮರಕ್ಕೆ ಪೂರಕವಾಗಿ ಕುದುರೆ ಗುಂಡಿಯ ಸರಕಾರಿ ಸ್ಥಳದಲ್ಲಿರುವ ಹತ್ತಕ್ಕೂ ಹೆಚ್ಚು ಮರಗಳನ್ನು ಕಡಿದು ಸಾಗಿಸಲಾಯಿತು. ಈ ಪರಿಸರದಲ್ಲಿ ಅರಣ್ಯ ಇಲಾಖೆಯ ವ್ಯಕ್ತಿ ಇದ್ದರೂ, ಇಲಾಖೆಯ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ, ಈ ತನಕ ತನಿಖೆ ನಡೆಸಿ ಕ್ರಮ ಕೈಗೊಳ್ಳದೇ ಇರಲು ಕಾರಣ ತಿಳಿದುಬಂದಿಲ್ಲ.
ಕುದುರೆ ಗುಂಡಿಯ ಈ ಸರಕಾರಿ ಸ್ಥಳದ ಕಡಿದ ಮರಗಳ ಬಗ್ಗೆ ತಿಳಿಯದಂತೆ ಮಾಡಲು ಕಡಿದು ಸಾಗಿಸಿ ಉಳಿದ ಬುಡಕ್ಕೆ ಮಣ್ಣು ಮುಚ್ಚಿ ಹಾಕಲಾಗಿದೆ. ಸಾಮಾನ್ಯ ಜನರು ಒಂದು ಮರಕಡಿದರೂ ತಕ್ಷಣ ಫೋನ್ ಮಾಡಿ ಕೇಳುವ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಹಗಲು ದರೋಡೆಯಲ್ಲಿ ಎಷ್ಟು ಬಾಚಿದ್ದಾರೆ? ಇಲ್ಲದಿದ್ದರೆ ಈ ವಿಷಯ ತಿಳಿಸಿದರೂ ಕ್ರಮ ಜರುಗಿಸಿ ಮಹಜರು ಕೈಗೊಳ್ಳದಿರಲು ಕಾರಣವೇನು?
ಸಾಗಿಸಲು ಆಗದೇ ಉಳಿದ ಕೆಲವು ಶೇಷ ಇನ್ನೂ ಅಲ್ಲೇ ಬಿದ್ದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಸ್ಥಾಪಿತ ಹಿತಾಸಕ್ತಿಗಳ, ಹಗಲು ದರೋಡೆ ಕೋರರ ಒತ್ತಡವೇ ತಿಳಿಯದಾಗಿದೆ. ಸತ್ಯ ಈಗಲಾದರೂ ಹೊರಬರಲಿ. ಚತುರ್ಮುಖ ಬ್ರಹ್ಮ ದೇವಸ್ಥಾನಕ್ಕೆ ಒಂದೇ ಒಂದು ತುಂಡೂ ಅಲ್ಲಿಂದ ತಂದಿರುವುದಿಲ್ಲ ಎಂದು ಸ್ವತಃ ಸಮಿತಿಯವರು ತಿಳಿಸಿರುತ್ತಾರೆ.