ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಅಶ್ಲೀಲ ವಿಡಿಯೋಗಳ ಮೂಲಕ ಬ್ಲಾಕ್‌ಮೈಲ್ ಮಾಡುತ್ತಿದ್ದ ಪ್ರಕರಣದ ಆರೋಪಿ ಸಮಿತ್‌ರಾಜ್ ದರೆಗುಡ್ಡೆ ಹಾಗೂ ತನಗೂ ಯಾವುದೇ ಸಂಬಂಧವಿಲ್ಲವೆಂದು ಹೇಳಿಕೆ ನೀಡಿರುವ ಶಾಸಕ ಉಮಾನಾಥ ಕೋಟ್ಯಾನ್ ಅವರು, ಜೂನ್ 26ರಂದು ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡಿರುವ ಅರ್ಥವೇನು? ಶಾಸಕರು ತನ್ನ ಆಪ್ತ ಸಮಿತ್‌ರಾಜ್‌ಗೆ ಯಾವ ವಿಚಾರದಲ್ಲಿ ಹೆದರುತ್ತಿದ್ದಾರೆ? ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ರೈ ಸುದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. 

ಕೋಟ್ಯಾನ್ ಅವರು ಒಬ್ಬ ನೈಜ ಕಲಾವಿದ ಎನ್ನುವುದು ಮೊನ್ನೆಯ ಅವರ ಹೇಳಿಕೆಯಿಂದ ಸಾಬೀತಾಗಿದೆ, ನನಗಾಗಲೀ, ಅಭಯರಿಗಾಗಲೀ ಅವರ ಹಾಗೆ ನಟನೆ ಮಾಡಲು ಬರುವುದಿಲ್ಲ. ನಾವು ಏನಿದ್ದರೂ ನೇರವಾಗಿ ಹೇಳಿಬಿಡುತ್ತೇವೆ, ಮುಂದಿನ ದಿನಗಳಲ್ಲಿ ಉಮಾನಾಥ ಕೋಟ್ಯಾನ್ ಹಾಗೂ ಸಮಿತ್‌ರಾಜ್‌ನ ಎಲ್ಲ ವಿಷಯಗಳನ್ನು ಜನರ ಮುಂದಿಡಲಿದ್ದೇವೆ ಎಂದು ಹೇಳಿದ ಅವರು ಕಳೆದಬಾರಿ ಅದೇ ಸಮಿತ್‌ರಾಜ್ನನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬಂದಿದ್ದ ಶಾಸಕರು ಮೊನ್ನೆ ಆತನನ್ನು ಭೇಟಿಯಾಗಿ ಮಾತನಾಡಲು ಜೈಲಿಗೆ ಹೋಗಿದ್ದು ಯಾಕಾಗಿ?

ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಅನ್ಯಾಯವಾದರೆ ಸುಮ್ಮನಿರಲ್ಲ ಎನ್ನುವ ಶಾಸಕರು ಅದೇ ಕಾರ್ಯಕರ್ತನಿಂದ ಅನ್ಯಾಯವಾದವರಿಗೇಕೆ ಧೈರ್ಯ ಹೇಳಲ್ಲ ? ಅದೇ ಜೈಲಿನಲ್ಲಿ ಮೂಡುಬಿದಿರೆಯ ಹಿಂದೂ ಸಂಘಟನೆಯ ಕಾರ್ಯಕರ್ತರಿದ್ದರೂ ಅವರಲ್ಲಿ ಮಾತನಾಡದೆ ಕೇವಲ ಸಮಿತ್‌ರಾಜ್ ಒಬ್ಬನಲ್ಲೇ ಮಾತನಾಡಿ ಬಂದಿದ್ದಾರೆ ಎಂದರೆ ಅರ್ಥ?

ನಾನು ಹೆಣ್ಮಕ್ಕಳನ್ನು ಕುಣಿಸಿ ಹಣ ಮಾಡುತ್ತೇನೆಂದು ಹೇಳಿ ನನ್ನ ತೇಜೋವಧೆ ಮಾಡಿದ್ದಾರೆ. ನಾನು ಪ್ರತಿಷ್ಠಿತ ವೈದ್ಯ ಕುಟುಂಬದಿಂದ ಬಂದವನು. ನನಗೆ ಆ ರೀತಿ ಹಣ ಮಾಡುವ ಅಗತ್ಯವೇ ಇಲ್ಲ. ನನಗೆ ಬಾರ್, ರೆಸ್ಟೊರೆಂಟ್, ಹೋಟೆಲ್ ವ್ಯವಹಾರ ಇರುವುದು ನಿಜ. ಆದರೆ ಹೆಣ್ಮಕ್ಕಳನ್ನು ಕುಣಿಸಿ ವ್ಯವಹಾರ ಮಾಡಿಲ್ಲ ಎಂದು ಎಲ್ಲಿ ಬೇಕಾದರೂ ಪ್ರಮಾಣ ಮಾಡಿ ಹೇಳುತ್ತೇನೆ ಎಂದ ಅವರು ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿ ತೇಜೋವಧೆ ಮಾಡಿದ ಶಾಸಕರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿದರು.

ಎರಡು ದಿನಗಳಲ್ಲಿ ಎಫ್‌ಐಆರ್:

ಎಫ್‌ಎಸ್.ಎಲ್ ವರದಿ ಇನ್ನೆರಡು ದಿನಗಳಲ್ಲೇ ಬರಲಿದೆ. ಸಮಿತ್‌ರಾಜ್ ವಿರುದ್ಧ ಮತ್ತೆರಡು ಪ್ರಕರಣಗಳು ದಾಖಲಾಗಲಿದೆ. ಆತನಿಂದ ಅನ್ಯಾಯಕ್ಕೊಳಗಾದವರು ನಮ್ಮನ್ನು ಧೈರ್ಯವಾಗಿ ಸಂಪರ್ಕಿಸಬಹುದು. ನಾವು ಅವರ ಹೆಸರನ್ನು ಗೌಪ್ಯವಾಗಿಟ್ಟು ನ್ಯಾಯ ದೊರಕಿಸಿಕೊಡುತ್ತೇವೆ ಎಂದರು.

ಗಣಿಗಾರಿಕೆ-ಬಿಜೆಪಿ ಮುಖಂಡ ಪಾಲುದಾರ: 

ಸಮಿತ್‌ರಾಜ್ ಪ್ರಕರಣವನ್ನು ಮರೆಮಾಚಿಸಲು, ದಿಕ್ಕುತಪ್ಪಿಸಲು ಶಾಸಕರು ಹಾಗೂ ಬಿಜೆಪಿಯಿಂದ ವಿವಿಧ ಪ್ರಯತ್ನಗಳು ನಡೆಯುತ್ತಿದೆ. ಇದಕ್ಕೆ ಪೂರಕವಾಗಿ ಇಷ್ಟು ದಿನ ಇಲ್ಲದ ಹೋರಾಟಗಳು ತಲೆ ಎತ್ತುತ್ತಿದೆ. ನಿಡ್ಡೋಡಿಯಲ್ಲಿ ಗಣಿಗಾರಿಕೆಗೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಪರ್ಮಿಶನ್ ನೀಡಲಾಗಿತ್ತು. ಖಾಸಗಿ ಕಂಪೆನಿಯೊಂದು ನಡೆಸುತ್ತಿರುವ ಗಣಿಗಾರಿಕೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ ಕೆ.ಪಿ ಜಗದೀಶ್ ಅಧಿಕಾರಿ ಪಾಲುದಾರರಾಗಿದ್ದಾರೆ. ಈಗ ಬಿಜೆಪಿ ಆ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿರುವುದರಲ್ಲಿ ಅರ್ಥವೇನು? ಎಂದು ಮಿಥುನ್ ರೈ ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಪುರಂದರ ದೇವಾಡಿಗ, ರುಕ್ಕಯ್ಯ ಪೂಜಾರಿ, ಸುರೇಶ್ ಕೋಟ್ಯಾನ್, ಹರ್ಷವರ್ಧನ ಪಡಿವಾಳ್, ಪ್ರವೀಣ್ ಕುಮಾರ್, ಜೊಸ್ಸಿ ಮಿನೇಜಸ್, ಚಂದ್ರಹಾಸ ಸನಿಲ್, ರಾಜೇಶ್ ಕಡಲಕೆರೆ, ಸುರೇಶ್ ಪ್ರಭು, ಸತೀಶ್ ಕೋಟ್ಯಾನ್ ಮತ್ತಿತರರಿದ್ದರು.