ಮೂಡುಬಿದಿರೆ: ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆಯು (ಎನ್‍ಎಬಿಎಲ್) ಜಾಗತಿಕವಾಗಿ ಪರಿಗಣಿಸಲ್ಪಡುವ ಮಾನದಂಡವಾಗಿದೆ. ಈ ಪ್ರಯೋಗಾಲಯದ ಫಲಿತಾಂಶಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶ್ವಾಸಾರ್ಹವಾಗಿರುತ್ತದೆ ಎಂದು ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮಂಡಳಿ ನಿರ್ದೇಶಕ ಶ್ರೀಕಾಂತ್ ಆರ್ ಹೇಳಿದರು.
ಆಳ್ವಾಸ್ (ಸ್ವಾಯತ್ತ)ಕಾಲೇಜಿನ ಎಂಬಿಎ ಸೆಮಿನಾರ್ ಸಭಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ ಪರೀಕ್ಷೆ ಮತ್ತು ಮಾಪನಾಂಕ ನಿರ್ಣಯ ಪ್ರಯೋಗಾಲಯಗಳ ರಾಷ್ಟ್ರೀಯ ಮಾನ್ಯತೆ ಮತ್ತು ಅದರ ಪ್ರಯೋಜನಗಳ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎನ್‍ಎಬಿಎಲ್ ಮಾನ್ಯತೆಯ ಪ್ರಯೋಗಾಲಯಗಳು ದೃಢವಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಸಹಕಾರಿಯಾಗಿವೆ. ಇದು ಪ್ರಯೋಗಾಲಯದ ಕಾರ್ಯಾಚರಣೆಗಳು, ಪರೀಕ್ಷೆಯ ನಿಖರತೆ ಮತ್ತು ಒಟ್ಟಾರೆ ಸೇವೆಯ ಗುಣಮಟ್ಟದಲ್ಲಿ ನಿರಂತರ ಸುಧಾರಣೆಗೆ ಕಾರಣವಾಗುತ್ತದೆ ಎಂದರು.
ಮಾಪನಶಾಸ್ತ್ರ ವಿಷಯವು ಇಂದಿನ ಶೈಕ್ಷಣಿಕ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಅಧ್ಯಯನ ಮಾಡಲು ಮಾತ್ರ ಸೀಮಿತವಾಗಿದೆ. ಆದರೆ ಇದು ದುರದೃಷ್ಟಕರ. ಮಾಪನಶಾಸ್ತ್ರ ಅಥವಾ ಮಾಪನ ವಿಜ್ಞಾನವು ಕೈಗಾರಿಕಾ ಉತ್ಪಾದನೆ ಮತ್ತು ವೈಜ್ಞಾನಿಕ ಸಂಶೋಧನೆಯಿಂದ ಹಿಡಿದು ಆರೋಗ್ಯ ರಕ್ಷಣೆ, ಪರಿಸರ ಸಂರಕ್ಷಣೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದವರೆಗೆ ಆಧುನಿಕ ಜೀವನದ ಪ್ರತಿಯೊಂದು ಅಂಶಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮಾಪನಗಳ ನಿಖರತೆ, ವಿಶ್ವಾಸಾರ್ಹತೆ ಮತ್ತು ಪತ್ತೆಹಚ್ಚುವಿಕೆ ತಾಂತ್ರಿಕ ಪ್ರಗತಿ ಮತ್ತು ಆರ್ಥಿಕ ಬೆಳವಣಿಗೆಗೆ ಅಡಿಪಾಯವಾಗಿದೆ ಎಂದರು.
ಎನ್‍ಎಬಿಎಲ್‍ನ ಶ್ರೀರಾಮ್ ಪಿಣ್ಣಮ್ಮರಾಜು, ಗೋಪಿಕಾ ಮೋಹನನ್ ಕಾರ್ಯಗಾರವನ್ನು ನಡೆಸಿಕೊಟ್ಟರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ಉಪನ್ಯಾಸಕರು ಕಾರ್ಯಗಾರದಲ್ಲಿ ಪಾಲ್ಗೊಂಡರು. ಕಾರ್ಯಕ್ರಮ ಸಂಯೋಜಕ ಡಾ ವಿನಯ್ ಇದ್ದರು.
ಸಹಾಯಕ ಪ್ರಾಧ್ಯಪಕಿ ಡಾ ಸಾಕ್ಷಿ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ವ್ಯವಹಾರಗಳ ಡೀನ್ ಪ್ರೊ. ದುರ್ಗಾಪ್ರಸಾದ್ ಬಾಳಿಗ ಸ್ವಾಗತಿಸಿದರು. ಮ್ಯಾಕಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಸತ್ಯನಾರಾಯಣ ವಂದಿಸಿದರು.