ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆ ತಾಲೂಕಿನ ಪ್ರಮುಖ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳಲ್ಲಿನ ಅಧಿಕಾರಿ, ಸಿಬ್ಬಂದಿಗಳ ಕೊರತೆ ಕುರಿತು ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ, ಆಡಳಿತ ಸೌಧದಲ್ಲಿ  ನಡೆದ ತೈಮಾಸಿಕ ಕೆಡಿಪಿ ಪರಿಶೀಲನಾ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. 

ಪೂರ್ಣಾವಧಿಯ ಕೃಷಿ ಅಧಿಕಾರಿಗಳಿಲ್ಲ. ಕಳೆದ 12 ವರ್ಷಗಳಿಂದ ಪೂರ್ಣಾವಧಿಯ ಪಶು ವೈದ್ಯಾಧಿಕಾರಿ, ಸಿಬ್ಬಂದಿಗಳಿಲ್ಲ. ಪೊಲೀಸ್ ಇಲಾಖೆಯಲ್ಲೂ ಸಿಬ್ಬಂದಿ ಕೊರತೆ ಇದೆ ಎಂದು ಆಯಾ ಇಲಾಖೆಯ ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. 

ಕೆಲವಾರು ಕಡೆ ಪೂರ್ಣಾವಧಿಯ ಪಿಡಿಒ, ಕಾರ್ಯದರ್ಶಿಗಳಿಲ್ಲ. ಜನರಿಗೆ ತೊಂದರೆ ಆಗುತ್ತಿದೆ ಎಂದು ಕೆಡಿಪಿ ಸದಸ್ಯ ಶಶಿಧರ್ ತಿಳಿಸಿದರು. 

ಪುರಸಭೆ ಮಾರುಕಟ್ಟೆ ನಿರ್ಮಾಣಕ್ಕೆ ಪ್ರಾಚ್ಯ ವಸ್ತು ಇಲಾಖೆ ಸೂಚನೆಯಂತೆ ಕಟ್ಟಡದ ಎತ್ತರ ಹಾಗೂ ಲೋಡ್, ಅನ್‌ಲೋಡ್ ಮಾಡುವ ಸ್ಥಳದ ಕುರಿತು ಸೂಕ್ತ ಮಾರ್ಪಾಡು ಮಾಡಿ, ಇಲಾಖೆಗೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಕಾರತ್ಮಕ ಬೆಳವಣಿಗೆ ಆಗುವ ಭರವಸೆ ಇದೆ ಎಂದು ಪುರಸಭೆ ಮುಖ್ಯಾಧಿಕಾರಿ ಇಂದು ಎಂ. ಸಭೆಯಲ್ಲಿ ತಿಳಿಸಿದರು. ಕೆಎಸ್‌ಆರ್‌ಟಿಸಿ ಸಂಬಂಧಿಸಿದಂತೆ ರಿಂಗ್‌ರೋಡ್ ಬಳಿ ಸ್ಥಳ ಗುರುತಿಸಲಾಗಿದ್ದು, ಮುಂದಿನ ಕ್ರಮ ಕೈಗೊಂಡು ಸಾರಿಗೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಶಾಸಕರು ತಿಳಿಸಿದರು. 

ಅರಣ್ಯ ಇಲಾಖೆಯವರು ಕೊಂಬೆಗಳನ್ನು ಕಡಿದು ರಸ್ತೆಯಲ್ಲೇ ಹಾಕುವುದು ಹೆಚ್ಚಾಗುತ್ತಿದೆ. ಇದರಿಂದ ವಾಹನ ಸವಾರರು, ಜನರಿಗೆ ತೊಂದರೆಯಾಗುತ್ತಿದೆ. ಇದು ಮುಂದುವರೆದರೆ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಶಾಸಕರು ಎಚ್ಚರಿಸಿದರು. ಮೂಡುಬಿದಿರೆ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಲೇಬರ್ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತೀರ ಕಡಿಮೆ ಇದ್ದು, ಒಂದು ಕಿ.ಮೀ ಒಳಗಿರುವ ಮೈನ್ ಶಾಲೆಯೊಂದಿಗೆ ವಿಲೀನಗೊಳಿಸುವಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಶಾಸಕರು ಸೂಚಿಸಿದರು. ಯಾವುದೇ ಸರ್ಕಾರಿ ಕಟ್ಟಡಕ್ಕೆ ಜಾಗ ಮಂಜೂರಾಗಿದ್ದರೆ ತಕ್ಷಣವೇ ಅದಕ್ಕೆ ಬೇಕಾದ ದಾಖಲೆಗಳನ್ನು ಮಾಡಿಸಿಕೊಳ್ಳಬೇಕು. ಮುಂದೆ ಆಗುವ ವ್ಯಾಜ್ಯಗಳಿಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಜವಾಬ್ದಾರಿಯಾಗುತ್ತೀರಿ ಎಂದು ಶಾಸಕರು ಎಚ್ಚರಿಸಿದರು. 

ಮೆಸ್ಕಾಂ ಇಲಾಖೆಗೆ ಸಂಬಂಧಿಸಿದಂತೆ ಲೋ ವೋಲ್ಟೋಜ್ ಕುರಿತು ಕೆಡಿಪಿ ಸದಸ್ಯರು ಸಭೆಯಲ್ಲಿ ಪ್ರಸ್ತಾಪಿಸಿದರು. ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಣಾ ಇಂಜಿನಿಯರ್ ಮೋಹನ್ ಮಾತನಾಡಿ, ಕೆಲವು ಭಾಗದಲ್ಲಿ ವಿದ್ಯುತ್ ಸಂಪರ್ಕಕ್ಕೆ ಸಂಬಂಧಿಸಿದಂತೆ ಕಾಮಗಾರಿಗಳು ನಡೆಯುವಾಗ, ಇನ್ನೊಂದು ಭಾಗದ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಕೆಲವೊಂದು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯವಾಗುತ್ತಿದೆ. ಶಿರ್ತಾಡಿಯಲ್ಲಿ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ಉಪಕೇಂದ್ರ ನಿರ್ಮಾಣವಾಗುತ್ತಿದ್ದು, ಅದು ಪ್ರಗತಿಯಲ್ಲಿದೆ. ಪೂರ್ಣಗೊಂಡು, ಕಾರ್ಯಾರಂಭಗೊಂಡಾಗ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದು ತಿಳಿಸಿದರು. 

ಗ್ಯಾರಂಟಿ ಯೋಜನೆಯಲ್ಲಿ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲು ಅವಕಾಶ ಇದೆಯೇ ಎನ್ನುವ ಕುರಿತು ತಾಲೂಕು ಕಾರ್ಯನಿರ್ವಾಹಣಾಧಿಕಾರಿಯವರಿಗೆ ಸೂಕ್ತ ಮಾಹಿತಿ ಇರಬೇಕು. ಜನಪ್ರತಿನಿಧಿಗಳು ಭಾಗವಹಿಸುವ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.  

ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದೇವೆ. ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಸುಗಳನ್ನು ಕೂಡ ಹಾಕುತ್ತಿದ್ದೇವೆ. ಮಟ್ಕಾದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿದ ಕೂಡಲೇ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೆ ಗೋವಾದಿಂದ ಸಿಮ್ ಖರೀದಿಸಿ, ಅದರ ಮೂಲಕ ಆನ್‌ಲೈನ್ ಜೂಜಾಟ ನಡೆಯುತ್ತಿರುವುದರಿಂದ ಕೆಲವೊಮ್ಮೆ ಅಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಕಷ್ಟ ಸಾಧ್ಯ. ತಾಲೂಕಿನಲ್ಲಿ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಮಾದಕ ವಸ್ತುಗಳ ಮಾರಾಟ, ಬಳಕೆ ಕುರಿತು ಹೆಚ್ಚಿನ ನಿಗಾ ವಹಿಸುತ್ತಿದ್ದೇವೆ ಎಂದು ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ ತಿಳಿಸಿದರು. 

ಗೂಡಂಗಡಿಗಳಲ್ಲಿ ಮದ್ಯ ಮಾರಾಟದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳನ್ನು ಅದಷ್ಟು ಬೇಗ ನಿಲ್ಲಿಸಿ. ಈ ಮೂಲಕ ಮನೆ, ಸಮಾಜ ಹಾಳಾಗುವುದನ್ನು ತಪ್ಪಿಸುವಂತೆ ಶಾಸಕರು ಅಬಕಾರಿ ಅಧಿಕಾರಿಗಳಿಗೆ ಸೂಚಿಸಿದರು. 

ಪುರಸಭೆ ಅಧ್ಯಕ್ಷ ಜಯಶ್ರೀ ಕೇಶವ್, ತಹಸೀಲ್ದಾರ್ ಪ್ರದೀಪ್ ಹುರ್ರ್ಡೇಕರ್, ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಕುಸಮಾಧರ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ತಾಲೂಕು ಆಡಳಿತಾಧಿಕಾರಿ ಡಾ.ಅರುಣ್ ಕುಮಾರ್, ಕೆಡಿಪಿ ಸದಸ್ಯರಾದ ಪ್ರವೀಣ್ ಪೂಜಾರಿ ಇರುವೈಲು, ಅಭಿನಂದನ್ ಬಲ್ಲಾಳ್ ಪಡುಮಾರ್ನಾಡು, ಟಿ.ಎನ್.ಕೆಂಬಾರೆ ಕಡಂದಲೆ, ಜೋಕಿಮ್ ಕೊರೆಯಾ ಕಲ್ಲಮುಂಡ್ಕೂರು, ಶಶಿಧರ ಎಮ್.ಮಾಂಟ್ರಾಡಿ ಹಾಗೂ ಶುಭಾ ಎಸ್.ಪೂಜಾರಿ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.