ಫೋಟೋ ವರದಿ ರಾಯಿ ರಾಜಕುಮಾರ ಮೂಡುಬಿದಿರೆ 

ಮೂಡುಬಿದಿರೆಪುರಸಭಾ ಅಧಿಕಾರಿಗಳು 4-5 ಮಂದಿ ಸ್ವಚ್ಛತಾ ಕಾರ್ಯದವರೊಂದಿಗೆ ಎರಡು ಬಾರಿ ಪ್ರಕಟವಾದ ಪಾದಾಚಾರಿ ಮಾರ್ಗದ ಅನಾನುಕೂಲತೆಯ ಆಧಾರದಲ್ಲಿ ಅಲ್ಲಿ ಇಟ್ಟಿರುವ ಹಣ್ಣು ಹಂಪಲು ಹಾಗೂ ತರಕಾರಿಗಳನ್ನು ನಿವಾರಿಸುವ ಕಾರ್ಯಕ್ರಮವನ್ನು ಡಿ. 9 ರಂದು ಬೆಳಗ್ಗೆ ಗಂಟೆ 10:30 ಯಿಂದ ಒಂದು ಗಂಟೆಯ ತನಕ ನಡೆಸಿದರು. ಆದರೆ ಎಲ್ಲ ಕಡೆಯ ಅಂಗಡಿಗಳವರು ಕೂಡ ಅಧಿಕಾರಿಗಳು ಬೆನ್ನು ಹಾಕಿದ ತಕ್ಷಣ ಯಥಾವತ್ತಾಗಿ ಹಿಂದಿನಂತೆಯೇ ಎಲ್ಲವನ್ನು ಇರಿಸಿ ಪಾದ ಚಾರಿಮಾರ್ಗವನ್ನು ಆಕ್ರಮಿಸಿರುವುದು ಚಿತ್ರದಲ್ಲಿ ಕಾಣಬಹುದು. ಈ ವಿಚಾರದಲ್ಲಿ ವಾರ್ಡ್ ಸದಸ್ಯರುಗಳು ಕೂಡ ಹೆಚ್ಚಿನ ಮುತುವರ್ಜಿಯನ್ನು ವಹಿಸಿ ಅಂತಹ ಎಲ್ಲಾ ಅತಿಕ್ರಮಣಗಳನ್ನು ನಿವಾರಿಸುವಾಗ ಅಧಿಕಾರಿಗಳಿಗೆ ಸ್ಥಳದಲ್ಲಿದ್ದು ಸಹಕರಿಸ ಬೇಕಾದ ಅನಿವಾರ್ಯತೆ ಇದೆ. ಯಾವುದೇ ಅಂಗಡಿಗಳವರು ಮತ್ತೆ ಅತಿಕ್ರಮಣ ಮಾಡಿದಲ್ಲಿ ದಂಡದೊಂದಿಗೆ ಅತಿಕ್ರಮಣವನ್ನು ನಿವಾರಿಸುವ ಕೆಲಸ ಮಾಡಬೇಕಾಗಿದೆ. 

ಈ ವಿಷಯದಲ್ಲಿ ಪುರಸಭೆಯವರು ಒಪ್ಪಿಗೆಯನ್ನು ಅಥವಾ ಅಂಗಡಿಯ ಪರವಾನಿಗೆಯನ್ನು ಕೊಡುವಾಗ ಅಂಗಡಿಯಿಂದ ಹೊರಕ್ಕೆ ಯಾವುದೇ ಹೆಚ್ಚುವರಿ ಶೀಟನ್ನಾಗಲಿ, ವಸ್ತುಗಳನ್ನಾಗಲಿ ಹಾಕಬಾರದು, ಇಡಬಾರದು ಎಂದು ನಿಯಮವನ್ನು ಹಾಕಬೇಕಿತ್ತು. 

ಕಟ್ಟಡದ ಪರವಾನಿಗೆಯನ್ನು ಕೊಡುವಾಗಲೂ ಕೂಡ ಪಾರ್ಕಿಂಗ್ ಸ್ಥಳವನ್ನು ಸೂಚಿಸದ ಯಾವುದೇ ಕಟ್ಟಡಕ್ಕೂ ಪರವಾನಿಗೆಯನ್ನು ನಿರಾಕರಿಸಬೇಕು. ಅಲಂಗಾರಿನಿಂದ ಪ್ರಾರಂಭವಾದ ಎಲ್ಲಾ ರಾಜ್ಯ ಹೆದ್ದಾರಿಗಳ ಬದಿಗಳಲ್ಲೂ ಯಾವುದೇ ಅಂಗಡಿಗಳವರಿಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಇದ್ದಲ್ಲಿ ಅಗತ್ಯವಾಗಿ ಪರವಾನಿಗೆಯನ್ನು ನಿರಾಕರಿಸಬೇಕು. ಅದೇ ರೀತಿ ಹೆದ್ದಾರಿ ನಿಯಮದ ಪ್ರಕಾರ 40 ಮೀಟರ್ ರಸ್ತೆಯ ಬದಿಗಳಿಂದ ದೂರ ಇರುವ ಕಟ್ಟಡಗಳಿಗೆ ಮಾತ್ರ ಪರವಾನಿಗೆಯನ್ನು ನೀಡುವಂತಾಗಬೇಕು. ಈಗ ಇರುವ ಕಟ್ಟಡಗಳಿಗೂ ಕೂಡ ಆದಷ್ಟು ಶೀಘ್ರ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಳ್ಳುವಂತೆ ಪರವಾನಿಗೆ ಸಂದರ್ಭದಲ್ಲಿ ತಿಳಿಸಬೇಕು. ಇಂತಹ ಕ್ರಮಗಳಿಗೆ ಇನ್ನು ಮುಂದಾದರೂ ಪುರಸಭೆ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.