ಚಿತ್ರ / ವರದಿ : ರೋನ್ಸ್ ಬಂಟ್ವಾಳ್
ಮುಂಬಯಿ: ಬದುಕಿನಲ್ಲಿ ನಾವು ಎಲ್ಲರೂ ಕೂಡಾ ನಿತ್ಯ ಸುಖ ಸಂತೋಷದಿಂದ ಇರಬೇಕು ಎಂಬುದೇ ಎಲ್ಲರ ಬಯಕೆಯಾಗಿದೆ. ಸುಖ ಸಂತೋಷಗಳು ನಿತ್ಯವಿರಲಿ. ಕಷ್ಟ ದುಃಖ, ನೋವು ಯಾವೊತ್ತು ಬಾರದಿರಲಿ ಇದು ಎಲ್ಲರ ಆಶಯವಾಗಿದೆ. ಇಂತಹ ಬ್ರಹ್ಮ ಬಯಕೆ ಪರಿಪೂರ್ಣ ಆಗಲು ಪರಿಪೂರ್ಣವಾದ ಪ್ರಯತ್ನ ಪ್ರಧಾನವಾದುದು. ಆದರೆ ದೇವರ ಅನುಗ್ರಹವಿಲ್ಲದ ಪ್ರಯತ್ನ ಸಾರ್ಥಕವಾಗದು. ಬದುಕಿನಲ್ಲಿ ನಮ್ಮ ಪ್ರಯತ್ನವೂ ದೇವರ ಅನುಗ್ರಹಗಳೆರಡೂ ಮುಖ್ಯವಾಗಿದೆ. ದೇವರನ್ನು ಮರೆತು ಬಾಳಿದರೆ ಬದುಕು ಬರಡಾಗುತ್ತದೆ. ದೇವರ ನಂಬಿಕೆಯನ್ನು ಬ್ರಾಹ್ಮಣರು ಬಲವಾಗಿ ನಂಬಿದವರು. ಅದರ ಫಲವೇ ಈ ಸಂಸ್ಥೆಯ ಶತಮಾನೋತ್ಸವ ಆಗಿದೆ. ಕಾಲನಿಯಮಕ, ಕಾಲಾಧೀತ ಭಗವಂತನೇ ನಮಗೆ ಬಲವಾದ ಆಧಾರ ಸ್ತಂಭವಾಗಿದ್ದಾನೆ. ಆದುದರಿಂದ ಭಗವಂತನನ್ನು ಹೃದಯದಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಪುಣ್ಯಾಧಿ ಬಾಳಿಗೆಗೆ ಅಣಿಯಾಗಿರಿ ಎಂದು ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವಪ್ರಸನ್ನ ಶ್ರೀಪಾದಂಗಳವರು ನುಡಿದರು.
ರಾಷ್ಟ್ರದ ಆಥಿಕ ರಾಜಧಾನಿ ಬೃಹನ್ಮುಂಬಯಿಯಲ್ಲಿ ಶತಮಾನದ ಹಿಂದೆ ಸ್ಥಾಪಿಸಲ್ಪಟ್ಟು ಪ್ರಸ್ತುತ ನೂರರಲ್ಲಿನ ಬಿಎಸ್‌ಕೆಬಿ ಅಸೋಸಿಯೇಶನ್ (ಗೋಕುಲದ) ನೂರು ವರ್ಷಗಳ ‘ಏಕತೆ, ಸಂಪ್ರದಾಯ, ಸಂಸ್ಕೃತಿ’ ಧ್ಯೇಯದ ಘೋಷಣೆಯೊಂದಿಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡೆ ಇತ್ಯಾದಿಗಳ ಮೇಳೈಕೆಗಳೊಂದಿಗೆ ೨೦೨೫ರ ವರ್ಷವಿಡೀ ಹಮ್ಮಿಕೊಳ್ಳಲಾದ ಶತ ಕಾರ್ಯಕ್ರಮಗಳ ಸಂಕಲ್ಪದ ಶತಮಾನೋತ್ಸವ ಸಂಭ್ರಮಕ್ಕೆ ಇಂದಿಲ್ಲಿ ಭಾನುವಾರ ಬೆಳಿಗ್ಗೆ ಸಯಾನ್ ಪೂರ್ವದ ಗೋಕುಲದಲ್ಲಿನ ಸರಸ್ವತಿ ಸಭಾಗೃಹದಲ್ಲಿ ಪೇಜಾವರ ವಿಶ್ವಪ್ರಸನ್ನಶ್ರೀಗಳು ಚಾಲನೆಗೈದು ಆಶೀರ್ವಚನ ನುಡಿಗಳನ್ನಾಡಿ ನೆರೆದ ಸದ್ಭಕ್ತರಿಗೆ ಹರಸಿದರು.
ಭೌತಿಕವಾದ ಸಂಪತ್ತುಕ್ಕಿಂತ ಸಂಸ್ಕಾರ, ಸಂಸ್ಕೃತಿಗಳೇ ಮನುಕುಲಕ್ಕೆ ಮುಖ್ಯವಾದುದು. ಆದುದರಿಂದಲೇ ಪ್ರಪಂಚವೇ ಇಂದು ಭಾರತೀಯ ಸಂಸ್ಕೃತಿಗೆ ತಲೆ ಬಾಗಿಸುತ್ತಿದೆ. ಇದು ನಮ್ಮ ಹಿರಿಯರು ಕೊಟ್ಟ ದೊಡ್ಡ ಸಂಪತ್ತು ಸಂಸ್ಕೃತಿಯಾಗಿದೆ. ಇದನ್ನು ನಾವು ಉಳಿಸಿ, ಗಳಿಸಿ, ಬೆಳೆಸಿ ಮುಂದಿನ ತಲೆಮಾರಿಗೆ ಹಸ್ತಾಂತರಿಸಬೇಕು. ಇದು ನಮ್ಮೆಲ್ಲರ ದೊಡ್ಡ ಜವಾಬ್ದಾರಿಯಾಗಬೇಕು. ಗುಡಿಯಾಗಿ ಹುಟ್ಟಿದ ಗೋಕುಲ ಇಂದು ಮಹಾರಾಷ್ಟ್ರದ ಭಕ್ತರ ಆಶ್ರಯದ ತಾಣವಾಗಿ ಬೆಳೆದು ರಾಷ್ಟ್ರವೇ ತಲೆಯೆತ್ತಿ ನೋಡುವಾಗೆ ಬೆಳೆದಿರುವುದು ಬಿಎಸ್‌ಕೆಬಿ ಅಸೋಸಿಯೇಶನ್‌ನ ಹಿರಿಮೆಯಾಗಿದೆ ಎಂದೂ ಪೇಜಾವರಶ್ರೀ ತಿಳಿಸಿದರು.
ಕಾರ್ಯಕ್ರಮದಲ್ಲಿ ಹೆಸರಾಂತ ಹೃದಯತಜ್ಞ ಡಾ| ಸದಾನಂದ ಆರ್.ಶೆಟ್ಟಿ, ಪುರೋಹಿತ ಡಾ| ಎಂ.ಜೆ ಪ್ರವೀಣ್ ಭಟ್ ಸಯನ್ ಅತಿಥಿಗಳಾಗಿ, ಬಿಎಸ್‌ಕೆಬಿ ಅಸೋಸಿಯೇಶನ್ ಮತ್ತು ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್‌ನ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಬಿಎಸ್‌ಕೆಬಿಎ ಉಪಾಧ್ಯಕ್ಷರುಗಳಾದ ವಾಮನ್ ಹೊಳ್ಳಾ ಮತ್ತು ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೋತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಚಿತ್ರಾ ಮೇಲ್ಮನೆ ಮತ್ತು ವೈ.ಮೋಹನ್‌ರಾಜ್, ಜೊತೆ ಕೋಶಾಧಿಕಾರಿ ಗಣೇಶ್ ಭಟ್ ವೇದಿಕೆಯನ್ನಲಂಕರಿಸಿದ್ದರು.
ಡಾ| ಸುರೇಶ್ ಎಸ್.ರಾವ್ ಕಟೀಲು ಪ್ರಸ್ತಾವನೆಗೈದು ಬಿಎಸ್‌ಕೆಬಿ ಅಸೋಸಿಯೇಶನ್ 2025 ನೇ ಜ. 01 ರಿಂದ ಡಿ. 21ರ ವರೆಗೆ ಶತಮಾನತ್ಸವ ವರ್ಷ ಆಚರಿಸುತ್ತಿದೆ ಎಂದು ಘೋಷಿಸಲು ನಾವು ಅಭಿಮಾನ ಪಡುತ್ತಿದ್ದೇವೆ. ಇದು ನಮಗೆ ಮಹತ್ವದ ಮೈಲಿಗಲ್ಲು ನಮ್ಮ ಸಮುದಾಯದ ಹಿರಿಮೆಯಾಗಿದೆ. ಬ್ರಾಹ್ಮಣತ್ವದ ಶ್ರೀಮಂತ ಇತಿಹಾಸ ಮತ್ತು ಸಂಪ್ರದಾಯದ ಹೆಗ್ಗುರುತುವಾಗಿದೆ. ಶತ ಸಂಭ್ರಮ ಆಚರಣೆಯು ಬಿಎಸ್‌ಕೆಬಿಎ ಆರಂಭ ಮತ್ತು ಸಾಧನೆಗಳ ಮುನ್ನಡೆಯ ಪ್ರಯಾಣವನ್ನು ಪ್ರತಿಬಿಂಬಿಸಲು ಸೂಕ್ತ ಅವಕಾಶವನ್ನು ಒದಗಿಸುತ್ತದೆ. ನಮ್ಮ ಪರಂಪರೆಯನ್ನು ಹಂಚಿಕೊಳ್ಳಲು ಮತ್ತು ಸುರಕ್ಷಿತವಾಗಿರಿಸಿ ಮುನ್ನಡೆಸಲು ಹಾಗೂ ಮುನ್ನಡೆಗೆ ತಮ್ಮ ಪ್ರಮುಖ ಪಾತ್ರವನ್ನು ನಿಭಾಯಿಸಿಕೊಂಡವರನ್ನು ಗೌರವಿಸಲು ಅವಕಾಶವಾಗಿದೆ ಎಂದರು.
ಬೆಳಿಗ್ಗೆ ಗೋಕುಲದಲ್ಲಿನ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನದಲ್ಲಿ ಗಣಹೋಮ, ಗಾಯತ್ರಿ ಮಂತ್ರ ಹೋಮ, ಅಷ್ಟಕಶರ ಮಂತ್ರ ಹೋಮ, ನವಗ್ರಹ ಶಾಂತಿ ಹೋಮ, ಇನ್ನಿತರ ಪೂಜಾಧಿಗಳೊಂದಿಗೆ ಧಾರ್ಮಿಕ ಸಂಭ್ರಮಕ್ಕೆ ನಾಂದಿಯನ್ನಾಡಲಾಯಿತು. ವೇದಮೂರ್ತಿ ಗಿರಿಧರ್ ಉಡುಪ ಮತ್ತು ನಾಗರಾಜ್ ಐತಾಳ ಗಣಹೋಮ ನೇರವೇರಿಸಿದ್ದು, ಡಾ| ಸುರೇಶ್ ಎಸ್. ರಾವ್ ಕಟೀಲು ಮತ್ತು ವಿಜಯಲಕ್ಷ್ಮಿ ರಾವ್ ದಂಪತಿ ಯಜಮಾನತ್ವ ವಹಿಸಿದ್ದರು. ವೇದಮೂರ್ತಿ ಬರ್ಕೆ ಸಂತೋಷ್ ಭಟ್, ಶಶಿಕಾಂತ್ ಭಟ್ ಸುಬ್ರಹ್ಮಣ್ಯ ಭಟ್ ನವಗ್ರಹ ಹೋಮ ನೆರವೇರಿಸಿದ್ದು, ಡಾ| ಅರುಣ್ ರಾವ್ ಮತ್ತು ಶೈಲಿನಿ ರಾವ್ ದಂಪತಿ ಯಜಮಾನತ್ವ ವಹಿಸಿದ್ದರು. ಗಾಯತ್ರೀ ಹೋಮವನ್ನು ವೇದಮೂರ್ತಿ ದರೆಗುಡ್ಡೆ ಶ್ರೀನಿವಾಸ್ ಭಟ್ ಮತ್ತು ರಾಮ ವಿಠಲ ಕಲ್ಲೂರಾಯ ನೇರವೇರಿಸಿದ್ದು, ನಾಗರಾಜ್ ರಾವ್ ಮತ್ತು ಲೋಹಿತಾ ರಾವ್ ಯಜಮಾನತ್ವ, ಪುರುಷಸೂಕ್ತ ಹೋಮವನ್ನು ವೇದಮೂರ್ತಿ ವಾಸುದೇವ ಭಟ್ ಮತ್ತು ಕುಮಾರ್ ಭಟ್ ನೇರವೇರಿಸಿದ್ದು, ಜಯದೀಪ್ ರಾವ್ ಕುಟುಂಬ ಯಜಮಾನತ್ವ ವಹಿಸಿದ್ದರು. ಬಳಿಕ ಉಡುಪಿ ಪೇಜಾವರ ಪಟ್ಟದದೇವರು ಶ್ರೀ ರಾಮವಿಠ್ಠಲ ದೇವರ ತುಲಾಭಾರವನ್ನು ಭಕ್ತರು ನಾಣ್ಯಾಧಿಗಳಿಂದ ನೇರವೇರಿಸಿದರು.ಆಮೇಲೆ ಪೇಜಾವರಶ್ರೀಗಳಿಗೆ ಪುಷ್ಪಾರ್ಚನೆಗೈದು ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಶತಾಯುಷಿಗಳಾದ ಶ್ರೀಮತಿ ಸತ್ಯಭಾಮ ಭಟ್ ಪರೇಲ್ ಮತ್ತು ರಮೇಶ್ ಪಟ್ಟವರ್ಧನ್ ಪುಣೆ ಇವರಿಗೆ ಪಟ್ಟದಶಾಲು, ಉಡುಪುಗಳನಿತ್ತು ಸನ್ಮಾನಿಸಿ ಸಭಾಗೃಹದಲ್ಲಿ ರಾಜಮರ್ಯಾದೆಯೊಂದಿಗೆ ಸತ್ಕಾರಿಸಲಾಯಿತು. ಗೋಕುಲ ಭಜನಾ ಮಂಡಳಿ, ವಿಠ್ಠಲ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ಗೋಪಾಲಕೃಷ್ಣ ಭಜನಾ ಮಂಡಳಿ ಮತ್ತು ಸ್ಕಂದ ಭಜನಾ ಮಂಡಳಿಗಳು ಭಜನೆಗೈದವು.
ಈ ಸಂದರ್ಭ ಗೋಕುಲ ಶತಮಾನೋತ್ಸವದ ಚಿಹ್ನೆ, ಗೋಕುಲದ ಶತಮಾನೋತ್ಸವದ ಗುರುತು ಚಿತ್ರ, ಸಂಗೀತ, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರಕ್ಕಾಗಿ ಗೋಕುಲ ಗೀತೆ ರಚನೆ, ಶ್ರೀ ಗೋಪಾಲಕೃಷ್ಣನ ಫೋಟೋ, ವಾಹನ ಸ್ಟಿಕರ್ಸ್, ಬೆಳ್ಳಿ ನಾಣ್ಯ, ಗುರುತು ಚೀಲ ಮತ್ತು ಗೋಕುಲ ಶತಮಾನೋತ್ಸವ ಕ್ಯಾಲೆಂಡರ್ 2025 ಇತ್ಯಾದಿಗಳನ್ನು ಅನಾವರಣ ಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಧೀಶ ನ್ಯಾ| ರಾಜ್ ಕುಮಾರಂ, ಬೃಹನುಂಬಯಿ ಮಹಾನಗರ ಪಾಲಿಕಾ ಆಯುಕ್ತ ಭೂಷಣ್ ಗಗ್ರಾನಿ, ಡಾ| ಜಿ.ವಿ ಕುಲಕರ್ಣಿ, ಆರ್.ಎಲ್ ಭಟ್ ಜೆರಿಮೆರಿ, ಪ್ರದೀಪ್ ಕುಮಾರ್, ಹರಿ ಭಟ್, ಕೃಷ್ಣರಾಜ ತಂತ್ರಿ, ಬಿಎಸ್‌ಕೆಬಿಎ ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೋತಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರಶಾಂತ್ ಹೆರ್ಲೆ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಕಲಾ ವೃಂದ ವಿಭಾಗಧ್ಯಕ್ಷೆ ವಿನೋದಿನಿ ರಾವ್, ಆಶ್ರಯ ಸಮಿತಿ ಕಾರ್ಯಾಧ್ಯಕ್ಷ ಕೆ.ರಘುರಾಮ ಆಚಾರ್ಯ, ಮಾಜಿ ಅಧ್ಯಕ್ಷ ಕೆ. ಸುಬ್ಬಣ್ಣ ರಾವ್, ಕೃಷ್ಣ ಮಂಜರಬೆಟ್ಟು, ದೀಪಕ್ ಶಿವತ್ತಾಯ, ಗೋಪಾಲಕೃಷ್ಣ ಟ್ರಸ್ಟ್‌ನ ವಿಶ್ವಸ್ಥ ಸದಸ್ಯರುಗಳಾದ ಬಿ.ರಮಾನಂದ ರಾವ್, ಕೃಷ್ಣ ಆಚಾರ್ಯ, ಶೈಲಿನಿ ಎ.ರಾವ್, ಜಗದೀಶ್ ಚಂದ್ರಕುಮಾರ್ ಸೇರಿದಂತೆ ಸದಸ್ಯರು, ಭಕ್ತರನೇಕರು ಉಪಸ್ಥಿತರಿದ್ದರು.
ವಿನಯ ಅನಂತಕೃಷ್ಣ ಪ್ರಾರ್ಥನೆಯನ್ನಾಡಿದರು. ಶೈಲಿನಿ ರಾವ್ ಶತಮಾನ ಆಚರಣೆಯ ಬಗ್ಗೆ ಮಾಹಿತಿಯನ್ನಿತ್ತರು. ಡಾ| ಸುರೇಶ್ ಎಸ್.ರಾವ್ ಪ್ರಸ್ತಾವಿಕ ನುಡಿಗಳನ್ನಾಡಿದರು. ವೆ| ಮೂ| ಡಾ| ರಾಮದಾಸ ಉಪಾಧ್ಯಾಯ ಅವರು ಪೇಜಾವರಶ್ರೀಗಳ ಪರಿಚಯ ನೀಡಿದರು. ಸಿಎ| ಹರಿದಾಸ ಭಟ್ ಕಾರ್ಯಕ್ರಮ ನಿರೂಪಿಸಿದರು. ಎ.ಪಿ.ಕೆ ಪೋತಿ ವಂದನಾರ್ಪಣೆಗೈದರು.