ವರದಿ / ರೋನ್ಸ್ ಬಂಟ್ವಾಳ
ಮುಂಬಯಿ: ಹರಿ ಹರರಿಗೆ ಅತ್ಯಂತ ಪ್ರಿಯವಾದ ಮಾಸ ಕಾರ್ತಿಕ ಮಾಸದಲ್ಲಿ ದೀಪೋತ್ಸವ ಸೇವೆ ವಿಶೇಷ ಪೌರಾಣಿಕ ಮಹತ್ವವುಳ್ಳದ್ದು. ಗೋಕುಲ ಶ್ರೀ ಗೋಪಾಲಕೃಷ್ಣ ದೇವರ ಸನ್ನಿಧಾನದಲ್ಲಿ ಕಳೆದ ವರ್ಷದಂತೆ ಈ ಬಾರಿಯೂ ಈ ಪರ್ವಕಾಲದಲ್ಲಿ ವರ್ಣರಂಜಿತ ಕಾರ್ತಿಕ ದೀಪೋತ್ಸವವು ರವಿವಾರ (ನ. 24) ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿ.ಎಸ್.ಕೆ. ಎಸೋಸಿಯೇಶನ್ ಜಂಟಿ ಆಯೋಜನೆಯಲ್ಲಿ ವೈಭವೋಪೇತವಾಗಿ ಜರಗಿತು.

ಗೋಕುಲ ಶ್ರೀ ಗೋಪಾಲಕೃಷ್ಣನ ದಿವ್ಯ ಮೂರ್ತಿಯನ್ನು ಅರ್ಚಕರಾದ ವೇದಮೂರ್ತಿ ಗಣೇಶ್ ಭಟ್ ಅವರು ವಿಶೇಷ ಪುಷ್ಪಾಹಾರಗಳಿಂದ ಅತ್ಯಂತ ಸುಂದರವಾಗಿ ಶೃಂಗರಿಸಿದ್ದರು. ಸಂಜೆ 6 ಗಂಟೆಯಿಂದ ಪ್ರಾರಂಭವಾದ ದೀಪೋತ್ಸವ ಸಂಭ್ರಮವು ದೇಗುಲದಲ್ಲಿ ನಿತ್ಯ ಪೂಜೆಯಾದ ನಂತರ ಅರ್ಚಕರು ಸಾಂಪ್ರದಾಯಿಕವಾಗಿ ದೀಪ ಪ್ರಜ್ವಲನೆ ಗೈಯುವುದರೊಂದಿಗೆ ದೀಪೋತ್ಸವಕ್ಕೆ ಶುಭಾರಂಭಗೈದರು. ಅಧ್ಯಕ್ಷ ಡಾ| ಸುರೇಶ್ ರಾವ್ ಮತ್ತು ಪದಾಧಿಕಾರಿಗಳು ದೀಪ ಬೆಳಗಿಸಿದ ನಂತರ ನೆರೆದ ನೂರಾರು ಸೇವಾರ್ಥಿಗಳು ದೇವಾಲಯದ ಒಳ ಹಾಗೂ ಹೊರಾಂಗಣದಲ್ಲಿ ವ್ಯವಸ್ಥಿತವಾಗಿ ಸಿದ್ಧಪಡಿಸಿಟ್ಟ ಹಣತೆಗಳಲ್ಲಿ ಸಹಸ್ರಾರು ದೀಪ ಬೆಳಗಿಸಿ ಸೇವೆ ಗೈದರು. ಶ್ರೀ ದೇವರಿಗೆ ರಂಗ ಪೂಜಾ ಸೇವೆಯಾದ ನಂತರ ಅರ್ಚಕರು ಅಲಂಕೃತ ಉತ್ಸವ ಮೂರ್ತಿಯನ್ನು ಮಂತ್ರ ಘೋಷ, ಚೆಂಡೆ, ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ತಂದು ವಿವಿಧ ತರಕಾರಿ, ಫಲ, ಪುಷ್ಪಗಳಿಂದ ವಿಶೇಷವಾಗಿ ನಿರ್ಮಿಸಿದ ಅಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ, ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಹಾ ಮಂಗಳಾರತಿ, ಅಷ್ಟಾವಧಾನ ಸೇವೆ ಜರಗಿತು. ನಂತರ ಉತ್ಸವ ಮೂರ್ತಿಯನ್ನು ಗರ್ಭಗೃಹದಲ್ಲಿರಿಸಿ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿತರಿಸಲಾಯಿತು.



ಗೋಕುಲ ಮಹಾದ್ವಾರ, ತೀರ್ಥ ಮಂಟಪ, ಗರ್ಭ ಗೃಹ, ಗೋಕುಲ ಸಭಾಗೃಹ ಮತ್ತು ವಿಶೇಷ ಮಂಟಪವು ವೈವಿಧ್ಯಮಯ ಪುಷ್ಪಗಳಿಂದ ಅಲಂಕೃತಗೊಂಡು ಕಂಗೊಳಿಸುತ್ತಿತ್ತು. ಗೋಕುಲ ಸಭಾಗೃಹ ಹಲವಾರು ಗಣ್ಯಾತಿಗಣ್ಯರ ಸಹಿತ ಕಿಕ್ಕಿರಿದು ನೆರೆದ ಅಪಾರ ಭಕ್ತಾದಿಗಳಿಂದ ತುಂಬಿ ತುಳುಕುತ್ತಿತ್ತು. ಸುಮಾರು 500 ಕ್ಕೂ ಮಿಕ್ಕಿ ನೆರೆದ ಭಕ್ತಾದಿಗಳಿಗೆ, ಪ್ರಸಾದ ಭೋಜನದೊಂದಿಗೆ ಚಿರಸ್ಮರಣೀಯ ಕಾರ್ತಿಕ ದೀಪೋತ್ಸವ ಸಂಪನ್ನಗೊಂಡಿತು.