ಚಿತ್ರ / ವರದಿ : ರೋನ್ಸ್ ಬಂಟ್ವಾಳ್

ಮುಂಬಯಿ: ಕೊಂಕಣ್ ಅಸೋಸಿಯೇಶನ್ ಚಾರಿಟೇಬಲ್ ಟ್ರಸ್ಟ್ (ಕೆಎಸಿಟಿ) ಸಂಸ್ಥೆ ಭಾನುವಾರ ಸಂಜೆ ಕುರ್ಲಾ ಪಶ್ಚಿಮದ ಜೆರಿಮೆರಿ ಇಲ್ಲಿನ ಸೈಂಟ್ ಜೂಡ್ ಶಾಲಾ ಸಭಾಗೃಹದಲ್ಲಿ ಕೊಂಕ್ಣಿ ಸಹಮಿಲನ್ ಸಂಭ್ರಮಿಸಿತು. ಕೆಎಸಿಟಿ ಅಧ್ಯಕ್ಷ ಲಿಯೋ ಫೆರ್ನಾಂಡಿಸ್ ಜೆರಿಮೆರಿ ಸಾರಥ್ಯದಲ್ಲಿ ಜರುಗಿಸಲಾದ ಸರಳ ಸಭಾ ಕಾರ್ಯಕ್ರಮದಲ್ಲಿ ಗೋರೆಗಾಂವ್ ಪಶ್ಚಿಮದಲ್ಲಿನ ಅವರ್ ಲೇಡಿ ಆಫ್ ದಿ ರೋಸರಿ ಚರ್ಚ್‍ನ ಪ್ರಧಾನ ಧರ್ಮಗುರು ರೆ| ಫಾ| ನೆಲ್ಸನ್ ಸಲ್ಡಾನ್ಹಾ ಮುಖ್ಯ ಅತಿಥಿಯಾಗಿದ್ದು ಶುಭಶಂಸನೆಗೈದರು.  

ಪರಸ್ಪರ ಪರಿಚಯಸ್ಥರಾಗಿ ಮುನ್ನಡೆದಾಗ ಮನುಕುಲದ ಸಂಬಂಧಗಳು ವೃದ್ಧಿಯಾಗುತ್ತವೆ. ಈ ಮೂಲಕ ಸಮೃದ್ಧಿಯ ಬದುಕು ಹಸನಾಗುವುದು. ಸಹಮಿಲನಗಳಂತಹ ಕಾರ್ಯಕ್ರಮಗಳು ಮಾತೃಭಾಷಾ ಕಲಿಕೆ, ಉಳಿವು ಮತ್ತು ಮುನ್ನಡೆಗೆ ಉತ್ತೇಜಕವಾಗಿದ್ದು, ಜೊತೆಗೆ ಕಲಾವಿದರ ಏಳಿಗೆಗೆ ಪ್ರೋತ್ಸಹಕರ ಆಗಬಲ್ಲವು. ನಾವು ಮಕ್ಕಳ ಮನಗಳಲ್ಲಿ ಮಾತೃಭಾಷಾ ಒಲವು ಭಿತ್ತರಿಸಿದ್ದಲ್ಲಿ ಮಾತ್ರ ಭಾಷೆಯ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆಗಳು ಬೆಳೆದು ಉಳಿಯಲು ಸಾಧ್ಯವಾಗುವುದು. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲಿ ಮಾತೃಭಾಷೆ ಕಲಿಕೆ ನಿರ್ಧಾರಿತ ಪಡಿಸಬೇಕು. ಆವಾಗಲೇ ಕುಟುಂಬದಲ್ಲಿ ಸಮಾಧಾನ, ಪ್ರೀತಿ ವಾತ್ಸಲ್ಯ, ಐಕ್ಯತೆಯ ಜೀವನ ಕೂಡಿಬರುವುದು ಫಾ| ಸಲ್ಡಾನ್ಹಾ ಅಭಿಪ್ರಾಯಪಟ್ಟರು.

ಗೌರವ ಅತಿಥಿಗಳಾಗಿ ಹಿರಿಯ ರಂಗನಟ ಫ್ರಾನ್ಸಿಸ್ ಫೆರ್ನಾಂಡಿಸ್ ಕಾಸ್ಸಿಯಾ, ದಿವೋ ಕೊಂಕಣಿ ಸಾಪ್ತಾಹಿಕದ ಸಂಪಾದಕ ಲಾರೇನ್ಸ್ ಕುವೆಲ್ಹೋ, ಕೆಎಸಿಟಿ ಉಪಾಧ್ಯಕ್ಷ ವಾಲ್ಟರ್ ಡಿಸೋಜಾ ಕಲ್ಮಾಡಿ, ಕೋಶಾಧಿಕಾರಿ ಪ್ರಿತೇಶ್ ಕಾಸ್ತೆಲಿನೋ, ಜೊತೆ ಕಾರ್ಯದರ್ಶಿ ವಿನ್ಸೆಂಟ್ ಕಾಸ್ತೆಲಿನೋ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಿರಿಲ್ ಕಾಸ್ತೆಲಿನೋ, ಮ್ಯಾನುಯೆಲ್ ಪಿ.ಫೆರ್ನಾಂಡಿಸ್,ಲೆವಿನ್ ಎಲ್.ಫೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಗುರುದೀಕ್ಷೆಯ ರಜತೋತ್ಸವ ಸಂಭ್ರಮಿಸಿದ ಶುಭಾವಸರದಿ ಫಾ| ನೆಲ್ಸನ್ ಸಲ್ಡಾನ್ಹಾ ಅವರನ್ನು ಟ್ರಸ್ಟ್ ಪರವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಫ್ರಾನ್ಸಿಸ್ ಕಾಸ್ಸಿಯಾ ಮಾತನಾಡಿ ಮಾತೃಭಾಷಾ ಸಂವಹನೆಗೆ ಇಂತಹ ವೇದಿಕೆಗಳು ಪೂರಕವಾಗಿವೆ. ಇಂತಹ ವೇದಿಕೆಗಳು ನಮ್ಮೆಲ್ಲರನ್ನು ಒಂದು ಉದ್ದೇಶವಾಗಿಸಿ ಪರಸ್ಪರ ಒಗ್ಗೂಡಿಸುತ್ತಾ ನಮ್ಮತನ ಮೆರೆಸುವ ಸಾಧನವಾಗಿವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹೆಸರಾಂತ ಸಂಗೀತಕಾರ ಲಿಯೋ ರಾಣಿಪುರ ಅವರು ತನ್ನ ಯುನಿವರ್ಸಲ್ ಮೆಲೋಡೀಸ್‍ನ ಮ್ಯೂಸಿಕಲ್ ಧಮಾಕಾ-117ನೇ ಆವೃತ್ತಿಯನ್ನು ಸಾದರಪಡಿಸಿದರು. ಆ್ಯಂಟನಿ ತೌರೋ, ಮ್ಯಾನುಯೆಲ್ ಪಿ.ಫೆರ್ನಾಂಡಿಸ್, ಲೆವಿನ್ ಫೆರ್ನಾಂಡಿಸ್, ಆಂಡ್ರಿಯಾ ಸುವಾರಿಸ್, ರೂಡಿ ಡೆಸಾ ಮೀರಾರೋಡ್, ಸಾರಾ ಮಥಾಯಾಸ್, ರೊನಾಲ್ಡ್ ಡಿಸೋಜಾ ಸಂಗೀತಗೈದರು. ನೆರಿ ನಜರೆತ್, ಪ್ರಸನ್ನ ನಿಡ್ಡೋಡಿ ಕವಿತೆಗಳನ್ನು ಹಾಗೂ ಫ್ರಾನ್ಸಿಸ್ ಪಿರೇರಾ, ಆಲ್ವಿನ್ ಗೋವಿಯಸ್, ರೇಷ್ಮಾ ಅಲ್ವಿನ್ ಗೋವಿಯಸ್ ಹಾಸ್ಯ ಪ್ರಹಸನವನ್ನು ಪ್ರಸ್ತುತ ಪಡಿಸಿದರು. ಜೆನಿಸ್ ಡಿಸೋಜಾ, ಜಾಯ್ಸ್ ಡಿಸೋಜಾ, ರುತ್ ವಾಸ್ ನೃತ್ಯಗಳನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸೆಕ್ಯೂಲಕ್ ಸಿಟಿಝನ್  ಸಾಪ್ತಾಹಿಕದ ಪ್ರಕಾಶಕಿ ಸುಜನ್ಹಾ ಎಲ್.ಕುವೆಲ್ಲೋ, ರಿಯಾಲ್ ಎಸ್ಟೇಟ್ ಏಜೆಂಟ್ ಪಾವ್ಲ್ ಮಸ್ಕರೇನ್ಹಾಸ್, ಸೈಂಟ್ ಜೋನ್ ಕೊಂಕಣಿ ಸಮುದಾಯ ಮರೋಳ್ ಅಧ್ಯಕ್ಷೆ ಸುನೀತಾ ಸುವಾರೆಸ್, ಎಡ್ವಿನ್ ಆಗಸ್ಟಿನ್ ಸುವಾರೆಸ್, ಕ್ಲೋಡಿ ಫ್ರಾನ್ಸಿಸ್ ಮೊಂತೆರೋ, ಕೊಂಕಣಿ ಭಾಷಾ ಮಂಡಳ್ ಮಹಾರಾಷ್ಟ್ರ ಗೌರವ ಕೋಶಾಧಿಕಾರಿ ಮೆಲ್ವಿನ್ ಫೆರ್ನಾಂಡಿಸ್, ಕ್ಲೇಮೆಂಟ್ ಮಡಂತ್ಯಾರ್, ಜವಾಹಾರ್ ಪಿರೇರಾ, ಐವಾನ್ ಸುವಾರೆಸ್, ಸೈಮನ್ ಗೋಮ್ಸ್ ಮುಲುಂಡ್, ಫ್ರಾನ್ಸಿಸ್ ಲೂಯಿಸ್, ಜೋನ್ ರೋಡ್ರಿಗಸ್ ವಸಾಯಿ ಸೇರಿದಂತೆ ಕೆಎಸಿಟಿ ಕಾರ್ಯಕಾರಿ ಸಮಿತಿ ಸದಸ್ಯರನೇಕರುಗಳಾದ ಗ್ರೇಗೋರಿ ಮೋನಿಸ್, ಐಡಾ ಎಂ.ಮೊಂತೆರೋ, ಜೋನ್ ರೋಡ್ರಿಗಸ್, ಜೋರ್ಜ್ ಚೆಟ್ಟಿಯಾರ್ ಮತ್ತಿತರ ಗಣ್ಯರನೇಕರು ಉಪಸ್ಥಿತರಿದ್ದರು.

ಪ್ರಿತೇಶ್ ಕಾಸ್ತೆಲಿನೋ ಸ್ವಾಗತಿಸಿದರು. ಲಿಯೋ ಫೆರ್ನಾಂಡಿಸ್ ಪ್ರಸ್ತಾವನೆಗೈದು ಅತಿಥಿಗಳಿಗೆ ಪುಷ್ಫಗುಪ್ಚ ನೀಡಿ ಗೌರವಿಸಿದರು.  ಸಿರಿಲ್ ಕಾಸ್ತೆಲಿನೋ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಕಾಸ್ತೆಲಿನೋ ವಂದಿಸಿದರು.