ಮೂಢನಂಬಿಕೆಗಳ ವಿರೋಧ ಹೋರಾಟ ನಡೆಸಿದ್ದ ಪುಣೆಯ ಡಾ. ನರೇಂದ್ರ ದಾಬೋಲ್ಕರ್ ಅವರ ಕೊಲೆಯ ಐವರು ಆಪಾದಿತರ ಮೇಲೆ ಆರೋಪ ಪಟ್ಟಿ  ಮಾಡಲಾಗಿದ್ದು, ಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ ಎಂದು ಹೆಚ್ಚುವರಿ ವಿಶೇಷ ನ್ಯಾಯಾಲಯದ ಜಸ್ಟಿಸ್ ಎಸ್. ಆರ್. ನವಂದರ್ ಹೇಳಿದರು.

ಆರೋಪಿಗಳಾದ ವೀರೇಂದ್ರ ಸಿನ್ಹಾ ತಾವ್ಡೆ, ಸಚಿನ್ ಅಂದೂರೆ, ಶರದ್ ಕೇಳಸ್ಕರ್ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಗೂ ಇನ್ನಿಬ್ಬರು ಆರೋಪಿಗಳಾದ ಶರದ್ ಪುನಾಲೆಕರ್, ವಿಕ್ರಮ್ ಭಾವೆ ನ್ಯಾಯಾಲಯದಲ್ಲಿ ಹಾಜರಿದ್ದು ವಿಚಾರಣೆ ಎದುರಿಸಿದರು.

ತಮ್ಮ ವಕೀಲರಲ್ಲಿ ಇನ್ನೂ ಮಾತನಾಡಬೇಕಿದ್ದು ಸಮಯಾವಕಾಶ ನೀಡಲು ಆರೋಪಿಗಳು ಮನವಿ ಮಾಡಿದರು. ಆರೋಪ ಪಟ್ಟಿ ಅಂತಿಮ, ಇನ್ನು ವಿಚಾರಣೆ ಅಷ್ಟೇ ಎಂದ ನ್ಯಾಯಾಧೀಶರು ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ನಿಗದಿಪಡಿಸಿದರು.

ಸಿಬಿಐ ವಕೀಲ ಪ್ರಕಾಶ ಸೂರ್ಯವಂಶಿ ಆರೋಪ ಪಟ್ಟಿಯನ್ನು ಸಲ್ಲಿಸಿದರು.