ವೆಂಕಪ್ಪ ಅಜ್ಜನ ಮನೆಯಲ್ಲಿ ಇಂದು ಜನಸಾಗರವೇ ನೆರೆದಿದೆ. ಸ್ವಲ್ಪ ವರ್ಷದ ಹಿಂದೆ ಒಂದು ಹತ್ತು ಮಂದಿಯನ್ನು ಒಟ್ಟು ಮಾಡಲು ಒದ್ದಾಡುತ್ತಿದ್ದ ಅಜ್ಜನ ಮನೆಯಲ್ಲಿ ಇಂದು ಕಾಲು ಹಾಕಲು ಜಾಗವಿಲ್ಲದಷ್ಟು ಜನ ತುಂಬಿ ಹೋಗಿದ್ದಾರೆ. ಊರು ಕೇರಿಯವರು, ತಾವರೆಯವರು, ಕೈಯವರು, ತೆನೆ ಹೊತ್ತವರು, ಗುಡಿಸಲು ಹೊರಟವರು ಎಲ್ಲರೂ ಇದ್ದರು. ಕಣ್ಣಲ್ಲಿ ಒಂದು ಹನಿ ನೀರೂ ಇಣುಕುತಿಲ್ಲ ಆದರೂ ಶೋಕಿತರಂತೆ ನಾಟಕ ಬಹಳ ಜೋರಾಗಿಯೇ ನಡೆಯುತಿದೆ. ಛೇ ಎಷ್ಟು ಗಟ್ಟಿ ಮುಟ್ಟು ಇದ್ರು ಅವರು ಈ ರೀತಿ ಮಾಡ್ಕೊಳ್ತಾರೆ ಅಂತ ಕನಸು ಮನಸಸಿನಲ್ಲಿಯೂ ಅಂದ್ಕೊಂಡಿರಲಿಲ್ಲ. ಎಷ್ಟು ಒಳ್ಳೆ ಜನ ತನ್ನ ಊರು ಅಂದ್ರೆ ಜೀವನೇ ಬಿಡ್ತಾ ಇದ್ರು, ಹಾಗಾಗಿ ಮಕ್ಳು ಅಷ್ಟು ಕರೆದ್ರು ಹೊರದೇಶಕ್ಕೆ ಹೋಗದೆ ಇಲ್ಲೇ ಒಬ್ಬಂಟಿಯಾಗಿ ಇದ್ರು. ಸತ್ಯವಂತರು ಯಾರಿಗೂ ಹಾಳು ಬಯಸಿದವರೇ ಅಲ್ಲ. ಎಲ್ಲರೂ ಇಂದು ಗುಣಗಾನ ಮಾಡುವವರೇ ಆದರೆ ವೆಂಕಪ್ಪಜ್ಜನಿಗೆ ಇಂದು ಏನು ಕೇಳ್ತಾ ಇಲ್ಲ, ಅವರು ಎದೆ ಒಣಗುವ ಹಾಗೆ ಬೊಬ್ಬೆ ಹಾಕುತ್ತಿದ್ದಾಗ ಕೇಳುವವರು ಯಾರು ಇರಲಿಲ್ಲ, ಈಗ ಈ ಜನರು ಮೆಚ್ಚಿಸುವುದು ಯಾರನ್ನು ಸುಮ್ಮನೆ ಕಣ್ಣು ಕಟ್ಟಿನ ನಾಟಕ ಅಷ್ಟೇ...
ಐದು ವರ್ಷದ ಹಿಂದೆ ಒಂದು ದಿನ ಗದ್ದೆಯ ಬದು ಕಟ್ಟುತ್ತಿದ್ದ ವೆಂಕಪಜ್ಜನ ಹತ್ರ ಕೇಶವ ಓಡೋಡಿ ಬಂದ " ಅಜ್ಜ ಅಜ್ಜ... ನೇತ್ರಾವತಿ ನದಿ ನೀರನ್ನು ತಿರ್ಗಿಸಿ ಬೇರೆ ಎಲ್ಲಿಗೋ ಕೊಡ್ತಾರಂತೆ...ಕೇಶವ ಹತ್ತನೇ ತರಗತಿಯಲ್ಲಿ ಓದುವ ಹುಡುಗ ತನ್ನ ಕಿವಿಗೆ ಬಿದ್ದ ವಿಚಿತ್ರ ಸುದ್ದಿಯನ್ನು ಅಜ್ಜನಿಗೆ ತಿಳಿಸಲು ಒಂದೇ ಉಸಿರಲ್ಲಿ ಓಡಿ ಬಂದಿದ್ದ. ವೆಂಕಪಜ್ಜ ಆ ಊರಿಗೆ ಬಹಳ ಅಚ್ಚುಮೆಚ್ಚು ಕೃಷಿ ಅವರ ಮುಖ್ಯ ಕಸುಬು ..ಭೂಮಿಯನ್ನು ದೇವರು ಅನ್ನುವಂತೆ ಆರಾಧಿಸಿಕೊಂಡು ಬಂದವರು ಹಾಗಾಗಿ ಮಕ್ಕಳು ಒಳ್ಳೆ ವಿದ್ಯಾಭ್ಯಾಸ ಪಡೆದು ದೂರದ ದೇಶಕ್ಕೆ ಹೊರಟ್ರು ಗಂಡ ಹೆಂಡತಿ ತಾವು ಹುಟ್ಟು ಬೆಳೆದ ಊರು ಬಿಟ್ಟು ಹೋಗಲು ಮನ ಮಾಡದೆ ಇಲ್ಲೇ ಉಳಿದರು. ಬಾಲ ಸಂಗಾತಿ ಸುಮಿತ್ರಜ್ಜಿ ಮೂರು ವರ್ಷದ ಹಿಂದೆಯೇ ಇಹದ ಕರ್ತವ್ಯ ಮುಗಿಸಿದ್ದರು. ವೆಂಕಪಜ್ಜ ಮಾತ್ರ ಈಗ್ಲೂ ಮಣ್ಣಲ್ಲಿ ಹೊನ್ನು ಬೆಳೆಯುವ ಕಾಯಕದಲ್ಲೇ ಸುಖಿಯಾಗಿದ್ದರು. ತನಗೆ ಬೇಕಾದಷ್ಟು ಬಳಸಿಕೊಂಡು ಮಿಕ್ಕಿದ್ದನು ಅಗತ್ಯವಿದ್ದವರಿಗೆ ನೀಡಿ ಜನರ ಮೆಚ್ಚುಗೆ ಗಳಿಸಿದ್ದರು..ಹಾಗಾಗಿ ಅವರಿಗೆ ಕೃಷಿ ಕೆಲಸದಲ್ಲಿ ಸಹಾಯ ಮಾಡಲು ಊರ ಜನರು ನೆರವಾಗುತ್ತಿದ್ದರು. ಅದಲ್ಲದೆ ಊರಲ್ಲಿ ಏನೇ ತೊಂದ್ರೆ ಆದ್ರೂ ಅದಕ್ಕೆ ಪರಿಹಾರ ಸೂಚಿಸಲು ವೆಂಕಪ್ಪಜ್ಜ ಬೇಕು ಅವರು ಆ ಊರಿಗೆ ಜನನಾಯಕನಂತಿದ್ದರು.
ಕೇಶವ ಓಡಿ ಬಂದು ಹೇಳಿದ ವಿಷಯ ಅವರಿಗೂ ಗಂಭೀರ ಅನಿಸಿತು, ಅಲ್ಲೇ ನೀರಲ್ಲಿ ಕೈಕಾಲು ಮುಖ ತೊಳೆದುಕೊಂಡು ಶಲ್ಯ ಹೆಗಲಿಗೇರಿಸಿ ಕವಲುದಾರಿ ಯಲ್ಲಿ ಹೊರಟು ನಾಗೇಶನ ಅಂಗಡಿಯ ಹತ್ತಿರ ಬಂದು ಅವನಿಂದ ಅಂದಿನ ದಿನಪತ್ರಿಕೆ ಪಡೆದುಕೊಂಡರು, ಹೌದು ಕೇಶವ ಹೇಳಿದ ಮಾತು ನಿಜವಾಗಿತ್ತು .ಅದರಲ್ಲಿ ನೇತ್ರಾವತಿಯಿಂದ ಬಯಲು ಸೀಮೆಗೆ ನೀರುಣಿಸುವ ಎತ್ತಿನಹೊಳೆ ಯೋಜನೆಯ ಬಗ್ಗೆ ಬರೆಯಲಾಗಿತ್ತು. ಅವರ ಮನದಲ್ಲಿ ಆತಂಕ ಮೂಡಿತು ನಾಗೇಶ ಮಾತ್ರ " ಅದೆಂತ ನೀರಿನ ಟ್ಯಾಂಕರಾ ಬೇಕಾದಲ್ಲಿಗೆ ತಿರ್ಗಿಸ್ಲಿಕ್ಕೆ, ಸುಮ್ಮನೆ ಅಜ್ಜ.... ನದಿ ತಿರ್ಗಿಸುವುದು ಅಷ್ಟು ಸುಲಭದ ಕೆಲಸವಾ, ಸರ್ಕಾರದವರು ತಲೆಕೆಟ್ಟು ಏನೇನೋ ಹೇಳ್ತಾರೆ" ಅಂದು ಬಿಟ್ಟ. ಆದರೂ ಅಜ್ಜನ ಮನದಲ್ಲಿ ಆತಂಕ ಮನೆ ಮಾಡಿತ್ತು.
ಮರುದಿನ ಬೇಗ ಎದ್ದು ಮಂಗಳೂರಿಗೆ ಹೊರಟ ಅಜ್ಜ ಯೋಜನೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದರಾದರು ಅವರಿಗೆ ಸಮರ್ಪಕ ಮಾಹಿತಿ ದೊರೆಯಲಿಲ್ಲ. ಸ್ವಲ್ಪ ದಿನದಲ್ಲೇ ಸುತ್ತ ಮುತ್ತ ಮೊಳಗತೊಡಗಿತು ವಾಹನದ ಸದ್ದು. ಸರಕಾರ ರಹಸ್ಯ ವಾಗಿ ಜಾಗ ಒತ್ತುವರಿ ಮಾಡಿಕೊಂಡಿತು. ಎತ್ತಿನಹೊಳೆ ಯೋಜನೆ ಕಾರ್ಯರೂಪಕ್ಕೆ ತರಲು ಬಾರಿ ಸಿದ್ಧತೆ ಮಾಡಿಕೊಂಡಿತು. ವೆಂಕಪ್ಪಜ್ಜನ ಆತಂಕ ನಿಜವಾಯಿತು. ಊರಿನ ಜನರನ್ನು ಸೇರಿಸಿ ಮಾತಾಡಲು ಪ್ರಯತ್ನ ಪಟ್ಟರು ಆದ್ರೆ ಅದರಲ್ಲಿ ಅವರು ಸಫಲರಾಗಲಿಲ್ಲ ದೊಡ್ಡವರ ಉಸಾಬ್ರಿ ನಮಗೇಕೆ ಅನ್ನುವ ದೋರಣೆಗೆ ಎಲ್ಲರೂ ಬಧ್ದರಾಗಿದ್ದರು. ಆದರೆ ವೆಂಕಪಜ್ಜನಿಗೆ ಹತ್ತಿರದಲ್ಲೇ ಹರಿಯುತ್ತಿದ್ದ ಹೊಂಗೆ ಅಳುತಿರುವಂತೆ ಭಾಸವಾಗಿತಿತ್ತು. ಕಾಮಗಾರಿಯನ್ನು ನಿಲ್ಲಿಸುವಂತೆ ಮನವಿ ಬರೆದು ಜಿಲ್ಲಾಧಿಕಾರಿ ಕಛೇರಿಗೆ ದೌಡಾಯಿಸಿದರು. ಅಲ್ಲಿ ಅವರಿಗೆ ಸಿಕ್ಕ ಉತ್ತರ ನೇತ್ರಾವತಿಯಲ್ಲಿ 548 ಟಿ.ಎಂ.ಸಿ ಹಾಗೂ ಕುಮಾರಧಾರದಲ್ಲಿ 220 ಟಿ.ಎಂ.ಸಿ ನೀರಿನ ಹರಿವು ಇದೆ. ಇದರಲ್ಲಿ 24. 01 ಟಿ.ಎಂ. ಸಿ. ಅಡಿ ಮಾತ್ರ ಅಂದ್ರೆ 768 ಟಿ.ಎಂ.ಸಿ ಅಡಿಯಲ್ಲಿ ಅತ್ಯಲ್ಪ ನೀರನ್ನು ಮಾತ್ರ ಎತ್ತಿನ ಹೊಳೆ ಯೋಜನೆಗೆ ಕೆಂಪುಹೊಳೆ, ಹೊಂಗದ ಹೊಳೆ, ಕೇರಿ ಹೊಳೆ, ಕಾಡುಮನೆ ಹೊಳೆ 1 - 2, ಮತ್ತು ಎತ್ತಿನಹೊಳೆಯ ಎರಡು ಉಪಹೊಳೆಗಳ ನೀರನ್ನು ಬಳಸಿಕೊಳ್ಳಲಾಗುವುದು ಎಂದು ಸಮಾಧಾನಿಸಿ ಕಳುಹಿಸಿ ಬಿಟ್ಟರು.
ಆದರೆ ಸ್ವಲ್ಪ ದಿನದಲ್ಲೇ ಅರಣ್ಯದೊಳಗೆ 120 ಅಡಿ ಅಂಗುಲದ ಜಾಗ ತೆರವುಗೊಳಿಸಿದ್ರು, 60 ಕಿ.ಮೀ ವ್ಯಾಪ್ತಿಯ ಕಾಡು ನಾಶ ಮಾಡಿ ಸಮತಟ್ಟು ಮಾಡಿದ್ರು. 400 ಎಕ್ರೆಗೂ ಮೀರಿದ ಅರಣ್ಯ ಒಳಭಾಗದ ಕೊಳವೆಗಳನ್ನು ಹಾಕಲು ನಾಶ ಮಾಡಿದ್ರು.
ನೀರಿನ ಹರಿವು ಕಮ್ಮಿಯಾಗುತ್ತಾ ಬಂತು, ಪಶ್ಚಿಮಘಟ್ಟ ಕುಸಿಯಿತು, ಹೊಂಗೆ ಬತ್ತಲಾರಂಭಿಸಿದಳು, ವೆಂಕಪಜ್ಜ ಪರಿಸ್ಥಿತಿಯನ್ನು ನೋಡಿ ಕಂಗಾಲಾದರು. ಮಂಗಳೂರಿಗೆ ಬಂದು ಹೋಗುವುದು ದಿನಚರಿಯಾಯಿತು.. ಒಂದಷ್ಟು ಪರಿಸರ ಪ್ರೇಮಿಗಳು ವಿರೋಧ ವ್ಯಕ್ತ ಪಡಿಸಿದ್ರು ದರಣಿ ಮಾಡಿದ್ರು .ಕೆಲವು ರಾಜಕಾರಣಿಗಳು ನಾವು ಈ ಯೋಜನೆ ಆಗಲು ಬಿಡುವುದೇ ಇಲ್ಲ ಅಂತ ಪ್ರತಿಭಟನೆ ಮಾಡಿ ಕೊನೆಗೆ ಅವರೇ ಅದರಲ್ಲಿ ಸೇರಿಕೊಂಡರು.
ಪಶ್ಚಿಮ ಘಟ್ಟ ಉಳಿಸುವಂತೆ ಕಸ್ತೂರಿ ರಂಗನ್ ವರದಿಯನ್ನು ಸರಕಾರಕ್ಕೆ ಒಪ್ಪಿಸಿದಾಗ ವೆಂಕಪಜ್ಜನ ಮನದಲ್ಲಿ ಸ್ವಲ್ಪ ಸಂಭ್ರಮ ಮೂಡಿತು, ಇನ್ನಾದರೂ ಪ್ರತಿಭಟನೆ ಜೋರಾಗಬಹುದು, ಅವಾಗ ಸರಕಾರ ಯೋಜನೆ ಕೈಬಿಡುತ್ತದೆ ಅನ್ನುವ ಆಶಾವಾದದೊಂದಿಗೆ. ಆದರೂ ಏನು ಆಗಲಿಲ್ಲ ಸರಕಾರ ತನ್ನ ಹಠ ಬಿಡ್ಲಿಲ್ಲ. ಮಳೆ ಕಮ್ಮಿಯಾಯ್ತು ನೇತ್ರಾವತಿ ಮಂಕಾದಳು. ಹೊಂಗೆ ಬತ್ತಿ ಹೋದಳು. ವೆಂಕಪ್ಪಜ್ಜನ ದೇಹ ಕುಂದಿತು ಹೋರಾಟದ ಕಾವು ಇಳಿಯಿತು . ಮೈದಾನದಂತಾಗಿದ್ದ ಹೊಂಗೆಯಲ್ಲಿ ದೇಹದಲ್ಲಿ ಶಕ್ತಿ ಇರುವವರೆಗೆ ಮಕ್ಕಳಂತೆ ಅಳುತ್ತಾ ಓಡಿದರು ಮುಂದೆ ಒಡಲಾಗದೆ ಕುಸಿದು ಅವಳ ಅಪ್ಪಿ ಮಗುವಂತೆ ಅಳಲಾರಂಭಿಸಿದರು. ಹೊಂಗೆ ಮಾತ್ರ ಎಷ್ಟೋ ಸಮಯದಿಂದ ಬಾಯಾರಿದವಳಂತೆ ದಾಹ ಸಹಿಸಲಾಗದೆ ಅವರ ಕಣ್ಣೀರನ್ನೇ ಚೂರು ತೇವ ನಿಲ್ಲದಂತೆ ಕುಡಿಯುತ್ತಿದ್ದಳು. ಅತ್ತು ಅತ್ತು ಬೇಸತ್ತು ಮುಖ ಒರೆಸಿಕೊಂಡು ಮಂಗಳೂರಿಗೆ ಬಂದ ಅಜ್ಜ ಜಿಲ್ಲಾಧಿಕಾರಿ ಕಛೇರಿ ಮುಂದೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡರು. ಇಂದು ಅವರ ಹೋರಾಟ ಅಂತ್ಯವಾಯಿತು.
ಮಳೆಗಾಲವಾದರು ಬಣಗುಟ್ಟುತ್ತಿದ್ದ ಭೂಮಿ ಇಂದಾದರು ಒಂದು ಹನಿ ನೀರು ಬಿದ್ದಿದ್ದರೆ ಅಜ್ಜನ ಆತ್ಮಕ್ಕೆ ಶಾಂತಿ ಸಿಗುತ್ತಿತ್ತೇನೋ. ಅಲ್ಲಿ ಕಾರ್ಮೋಡ ಒಂದು ಕವಿದಿದ್ದರೂ ಕೂಡ ದೂರ್ತ ಜನರ ನೋಡಿ ಗಾಳಿಯೊಂದಿಗೆ ಸೇರಿ ಹಾಗೆ ಸಾಗಿ ಮುಂದಕ್ಕೆ ಚಲಿಸಿಬಿಟ್ಟಿತು.
✍️ ಗೀತಾ ಲಕ್ಷ್ಮೀಶ್