ಉಡುಪಿ: ಸರ್ಕಾರಿ ಕಾರ್ಯಗಳಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ನಾಗರಿಕರು ಸರಕಾರಿ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದಾಗ ಮಾಹಿತಿಯನ್ನು ತಪ್ಪದೇ ನೀಡಬೇಕು ಎಂದು ರಾಜ್ಯ ಮಾಹಿತಿ ಆಯುಕ್ತೆ ಮಮತಾ ಗೌಡ ಹೇಳಿದರು.

ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಆಯೋಜಿಸಿದ್ದ ಮಾಹಿತಿ ಹಕ್ಕು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸರಕಾರಿ ಕಚೇರಿಗಳಲ್ಲಿ ಪಾರದರ್ಶಕತೆ ಉಳಿಸಿಕೊಳ್ಳುವ ದೃಷ್ಠಿಯಿಂದ 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆ (ಆರ್.ಟಿ.ಐ) ಅನ್ನು ಜಾರಿಗೊಳಿಸಿದ್ದು, ಭಾರತೀಯ ಪ್ರತಿಯೊಬ್ಬ ನಾಗರಿಕನೂ ಸರ್ಕಾರಿ ಅಧಿಕಾರಿಗಳಿಂದ ಸರಕಾರದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆಯುವ ಹಕ್ಕನ್ನು ಹೊಂದಿರುತ್ತಾರೆ. ಅವರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದಾಗ ನಿಗಧಿತ ಕಾಲಾವಧಿಯಲ್ಲಿ ಶುಲ್ಕವನ್ನು ಪಡೆದು ನಿಯಮಾನುಸಾರ ದಾಖಲಾತಿಗಳನ್ನು ನೀಡಬೇಕು ಎಂದರು.

ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮಾಹಿತಿಯ ಪಾಲಕರಾಗಿದ್ದು, ಮಾಹಿತಿ ಹಕ್ಕು ಅಡಿ ಅರ್ಜಿಗಳು ಬಂದಾಗ ಕ್ಷುಲ್ಲಕ ಕಾರಣ ನೀಡದೇ, ಕಚೇರಿಗೆ ಸಂಬಂಧಿಸಿದ ಯಾವುದೇ ಸಾರ್ವಜನಿಕ ಕಡತಗಳು, ಮಾಹಿತಿಗಳು, ಫೋಟೋಗಳು, ಡಿಜಿಟಲ್ ಮಾಹಿತಿಗಳು ಸೇರಿದಂತೆ ಮತ್ತಿತರ ದಾಖಲೆಗಳನ್ನು ಯಥಾವತ್ತಾಗಿ ನೀಡಬೇಕು. ಸಂಪೂರ್ಣವಾಗಿ ಖಾಸಗಿಯಾಗಿರುವ ಸಂಸ್ಥೆಗಳ ವಿವರ, ವ್ಯಕ್ತಿಯ ಪಾನ್, ಆಧಾರ್, ಮಾಕ್ರ್ಸ್ ಕಾರ್ಡ್‍ಗಳು ಅಥವಾ ಇನ್ನಿತರ ಯಾವುದೇ ವೈಯಕ್ತಿಕ ಮಾಹಿತಿಗಳನ್ನು ನೀಡುವಂತಿಲ್ಲ. ಮಾಹಿತಿಯು ಅತಿ ಹೆಚ್ಚಿನ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದ್ದಾಗ ಸೆಕ್ಷನ್ 11 ರ ಅಡಿಯಲ್ಲಿ ವೈಯಕ್ತಿಕ ಮಾಹಿತಿಗಳ ಬಗ್ಗೆ ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ಅವರಿಂದ ಮಾಹಿತಿಯನ್ನು ಹಂಚಿಕೊಳ್ಳುವ ಬಗ್ಗೆ ಅನುಮತಿ ಪಡೆದು ಅವರು ಒಪ್ಪಿದರೆ ನೀಡಬಹುದಾಗಿದೆ ಎಂದರು. 

ಸ್ವಯಂ ಪ್ರೇರಿತವಾಗಿ ನೀಡುವಂತಹ ಮಾಹಿತಿಗಳನ್ನು ಮಾಹಿತಿ ಹಕ್ಕು ಅಧಿನಿಯಮದ 4(1)ಎ, 4(1)ಬಿ ರಡಿಯಲ್ಲಿ ವೆಬ್‍ಸೈಟ್‍ನಲ್ಲಿ ಕಚೇರಿಯಲ್ಲಿ ನಿರ್ವಹಿಸುತ್ತಿರುವ ಕಡತ, ವಹಿಗಳು, ಕಚೇರಿಯ ಕಾರ್ಯ ಹಾಗೂ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿವರ ಸೇರಿದಂತೆ ಮತ್ತಿತರ ವಿವರಗಳನ್ನು ಕಾಲಕಾಲಕ್ಕೆ ಕ್ಷಿಪ್ರವಾಗಿ ನವೀಕರಿಸಿ, ಅಪ್‍ಲೋಡ್ ಮಾಡಿದ್ದಲ್ಲಿ ಸಾರ್ವಜನಿಕರು ಅದರ ಲಾಭ ಪಡೆದುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಅರ್ಜಿ ಸಲ್ಲಿಸುವುದು ತಪ್ಪುತ್ತದೆ ಎಂದರು. 

8(1) ಜೆ ನಲ್ಲಿ ಸೂಚಿಸಲಾದ ದಾಖಲೆಗಳ ಮಾಹಿತಿ ನೀಡುವ ವಿನಾಯಿತಿ ಇದ್ದಲ್ಲಿ ಹಾಗೂ ನ್ಯಾಯಾಲಯದಿಂದ ನೀಡಬಾರದು ಎಂದು ಸ್ಪಷ್ಟ ಆದೇಶವಿದ್ದ ಸಂದರ್ಭದಲ್ಲಿ ಮಾಹಿತಿ ನೀಡಲು ನಿರಾಕರಿಸಬಹುದಾಗಿದೆ ಎಂದ ಅವರು, ಸರಕಾರಿ ನೌಕರರು ಸಾರ್ವಜನಿಕರಿಗೆ ಸಹಕಾರ ನೀಡಬೇಕು ಎನ್ನುವ ಮನೋಭಾವ ಹೊಂದುವುದರೊಂದಿಗೆ ದಾಖಲೆಗಳನ್ನು ಕೋರಿ ಅರ್ಜಿ ಸಲ್ಲಿಸಿದಾಗ ನೀಡಬೇಕು ಎಂದರು. 

ಅಧಿಕಾರಿಗಳು ಮೊದಲು ತಾವು ಕೂಡ ಪ್ರಜೆಗಳು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಮಾಹಿತಿ ಹಕ್ಕು ಕಾಯ್ದೆಯಡಿ ಕೇಳುವ ಯಾವುದೇ ಮಾಹಿತಿ ತಮ್ಮಲ್ಲಿದ್ದರೆ ಅದನ್ನು ಅರ್ಜಿದಾರರಿಗೆ ಕೂಡಲೇ ನೀಡಿ ಹಿಂಬರಹ ಪಡೆದುಕೊಂಡು ಶುಲ್ಕ ಪಾವತಿಸಿಕೊಳ್ಳಬೇಕು. ಸಾರ್ವಜನಿಕರು ಮಾಹಿತಿಗಾಗಿ ಅರ್ಜಿ ಹಾಕಿದಾಗ ಅವರನ್ನು ಅನಾವಶ್ಯಕ ಅಲೆಸಿಕೊಳ್ಳದೇ ಮೂವತ್ತು ದಿನಗಳ ಒಳಗಾಗಿ ತಮ್ಮಲ್ಲಿರುವ ಮಾಹಿತಿಯನ್ನು ಅವರಿಗೆ ನೀಡಿ ಸಹಕರಿಸಬೇಕು.ತಪ್ಪಿದ್ದಲ್ಲಿ ಅಂತಹ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು. 

ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಮಾತನಾಡಿ, ಮಾಹಿತಿ ಹಕ್ಕುಗಳ ಕಾಯ್ದೆ ಅಡಿಯಲ್ಲಿ ಬರುವ ಅರ್ಜಿಗಳ ವಿಲೇವಾರಿಗೆ ಸಂಬಂಧಪಟ್ಟಂತೆ ಅಧಿಕಾರಿಗಳಲ್ಲಿ ಗೊಂದಲಗಳು ಏರ್ಪಡುತ್ತವೆ. ಕಾಯ್ದೆಯಲ್ಲಿ ಕಾಲಕಾಲಕ್ಕೆ ತಿದ್ದುಪಡಿಗಳನ್ನು ಮಾಡಲಾಗುತ್ತದೆ. ಇವುಗಳ ಬಗ್ಗೆ ಕೆಳಹಂತದ ಪ್ರತಿಯೊಬ್ಬ ಅಧಿಕಾರಿಗಳು ತಿಳಿದುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು, ಅಧಿಕಾರಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.   

ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್.ಕಾದ್ರೋಳ್ಳಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಉಪಸ್ಥಿತರಿದ್ದರು.