ಪಡುಬಿದ್ರಿ: ಕರ್ನಾಟಕ ಕರಾವಳಿಯ ಉಡುಪಿ ಪಡುಬಿದ್ರಿ ಇಲ್ಲಿನ ಕಾರ್ಕಳ ರಸ್ತೆಯ ಕರ್ನಾಟಕ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಇತ್ತೀಚೆಗೆ ಪತ್ತೆಯಾದ ಶಿಲಾ ಸಂಕೀರ್ಣವು ತುಳುನಾಡ ಶೈವಶಕ್ತ ಪರಂಪರೆಯ ಅಪೂರ್ವ ಇತಿಹಾಸವನ್ನು ಬೆಳಕಿಗೆ ತಂದಿದೆ. ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಕಾಲಭೈರವ ತುಳುವೇಶ್ವರಿ ಆರಾಧನೆ ನಡೆದಿದ್ದುದಕ್ಕೆ ಸ್ಪಷ್ಟ ಗುರುತುಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ.

ರಸ್ತೆಯ ಪಕ್ಕದ ಶಿಲಾಬಂಡೆಗಳ ನಡುವಿನ ನೈಸರ್ಗಿಕ ಒಳಾವರಣದಲ್ಲಿನ ಕಾಲಭೈರವನ ಕೆತ್ತನೆಯುಳ್ಳ ಬಂಡೆ ಹಾಗೂ ಮುನಿಗಳಿಂದ ಆರಾಧನೆ ಗೊಂಡಿರಬಹುದಾದ ಅತ್ಯಂತ ಸಣ್ಣ ಶಕ್ತಿಲಿಂಗ ಪತ್ತೆಯಾಗಿದೆ. ಇಂದಿಗೂ ಕೂಡ ನಾಥ ಪರಂಪರೆಯ ಸಾಧಕರು ಈ ಸ್ಥಳಕ್ಕೆ ಬಂದು ಧ್ಯಾನ ಮಾಡುವುದಾಗಿ ಸ್ಥಳೀಯರು ತಿಳಿಸಿದ್ದು, ಕಾಲಭೈರವನು ತನ್ನ ತಾಯಿ ಪರಾಶಕ್ತಿ ತುಳುವೇಶ್ವರಿಯನ್ನು ಆರಾಧಿಸುತ್ತಿದ್ದ ಸ್ಥಳವೆಂದು ಪ್ರತೀತಿಯಿದೆ.

ಈ ಮಹತ್ವದ ಮಾಹಿತಿಯನ್ನು ಕೃಷ್ಣಮೂರ್ತಿ ಭಟ್ ಪಾದೆಬೆಟ್ಟು ಅವರು ತುಳುವರ್ಲ್ಡ್ ಫೌಂಡೇಶನ್‍ಗೆ ಹಂಚಿಕೊಂಡಿದ್ದು, ಪಾದೆಬೆಟ್ಟುವಿನಲ್ಲಿ ತಲೆಮಾರುಗಳಿಂದ ತುಳುವೇಶ್ವರಿ ದೇವಿಯ ಆರಾಧನೆ ನಡೆದಿದ್ದು, ಹಲವು ಕಾರಣಗಳಿಂದ ಈ ಪೂಜಾ ಪದ್ಧತಿಗಳು ನಂತರ ಸಂಪೂರ್ಣ ನಿಂತಿವೆ. ಅವರು ಪಾರಂಪರಿಕವಾಗಿ ಆರಾಧಿಸುತ್ತಿದ್ದ ಕತ್ತಿ ಮತ್ತು ಗುರಾಣಿ ಹಿಡಿದಿರುವ ತುಳುವೇಶ್ವರಿ ವಿಗ್ರಹ ಈಗ ಉಡುಪಿಯ ಕಾಡುಬೆಟ್ಟು ಶನೀಶ್ವರ ಅಬ್ಬದ ದಾರಗ ಕ್ಷೇತ್ರದಲ್ಲಿ ಖಡ್ಗೇಶ್ವರಿ ಎಂಬ ಹೆಸರಿನಲ್ಲಿ ಪೂಜಿಸಲ್ಪಡುತ್ತಿದೆ.

ಪರಂಪರೆಯ ಪ್ರಕಾರ ಸ್ಥಾನೀಯ ಹಲವು ಭಾಗಗಳಲ್ಲಿ ತುಳುವೇಶ್ವರಿಗೆ ಪೂಜೆ, ಪಾರುಪತ್ಯ, ಪುನಸ್ಕಾರಗಳು ನಡೆಯುತ್ತಿದ್ದು, ಕಾಲಕ್ರಮೇಣ ಅವು ಖಡ್ಗೇಶ್ವರಿ, ಪದ್ಮಾವತಿ, ಆದಿ ಪರಾಶಕ್ತಿ, ವ್ಯಾಘ್ರಚಾಮುಂಡಿ, ಚಾಮುಂಡೇಶ್ವರಿ, ರಕ್ತೇಶ್ವರಿ, ದುರ್ಗಾಪರಮೇಶ್ವರಿ, ಅನ್ನಪೂರ್ಣೇಶ್ವರಿ ಇತ್ಯಾದಿ ಹೆಸರುಗಳಿಂದ ರೂಪಾಂತರ ಗೊಂಡಿವೆ ಎಂದು ಅವರು ಅಭಿಪ್ರಾಯಪಟ್ಟರು. ಅಲ್ಲದೆ, ಕೊಕ್ಕರ್ಣೆ ಸಮೀಪವಿರುವ ನಂಚಾರು ಎಂಬಲ್ಲಿ ತುಳುವೇಶ್ವರಿ ಹೆಸರಿನಲ್ಲಿ ಇತ್ತೀಚಿನವರೆಗೂ ದೇವಸ್ಥಾನ ಇದ್ದದ್ದು, ಈಗ ಕೆಲವು ದಶಕಗಳಿಂದ ಅದನ್ನು ಖಡ್ಗೇಶ್ವರಿಯಾಗಿ ಮರುನಾಮಕರಣ ಮಾಡಿರುವ ದಾಖಲೆಗಳಿವೆ ಎಂದಿದ್ದಾರೆ.

ಪಡುಬಿದ್ರಿಯನ್ನು ಹಳೆಯ ಕಾಲದಲ್ಲಿ ಮಧ್ಯ ಎಂದು ಕರೆಯಲಾಗುತ್ತಿದ್ದು, ಇದೇ ಪ್ರದೇಶದಲ್ಲಿ ಗೇರುಸೊಪ್ಪೆಯ ಚನ್ನಬೈರವಿ ದೇವಿ ಮತ್ತು ಪದ್ಮಲತಾಂಬಿಕಾ ದೇವಿ ( ಪೊಟ್ಟಿ ) ಅವರ ಸಮಾಧಿಗಳು ಕಂಡುಬರುತ್ತವೆ. ಈ ಇಬ್ಬರು ರಾಣಿಯರ ಹೆಸರಿನಿಂದ ಈ ಸ್ಥಳವನ್ನು ಚೆನ್ನಪೊಟ್ಟಿ ಎಂದು ಕರೆಯಲಾಗುತ್ತದೆ. ಇವರ ಗುರುಗಳಾದ ಸುವೃತ ಮುನಿ ಅವರ ಸಮಾಧಿಯೂ ಪಡುಬಿದ್ರಿಯಲ್ಲಿದೆ. ಮಾತ್ರವಲ್ಲದೆ ಇದಕ್ಕೆ ಸಂಬಂಧಿಸಿದ ಬಸದಿಯು ಪಡುಬಿದ್ರೆಯಲ್ಲಿ ಇದೆ. ಈ ಸಂಬಂಧಿತ ಉಲ್ಲೇಖಗಳು ತಾಮ್ರಶಾಸನಗಳಲ್ಲಿ ದೊರಕಿರುವುದು ಗಮನಾರ್ಹ.

ಮಾಹಿತಿ ಪ್ರಕಾರ, ಪಾಂಡುರಾಯ ಬ್ರಹ್ಮಸ್ಥಾನ (ಪಾಂಡ್ಯರು) ಎಂಬ ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಆಲಡೆ ಇದ್ದದ್ದು, ಹಾಗೆಯೇ ತುಳುನಾಡ ಕಳರಿ ಅಭ್ಯಾಸ ಕೇಂದ್ರಗಳು ಕಾರ್ಯನಿರ್ವಹಿಸಿದ್ದಕ್ಕೆ ಸಾಕ್ಷ್ಯಗಳಿವೆ. ಕೊಂಕಣ ರೈಲ್ವೆ ಮಾರ್ಗದ ಪಕ್ಕದಲ್ಲಿಯೇ ಈ ಪುರಾತನ ಕುರುಹುಗಳು ಇಂದಿಗೂ ಮೂಕ ಸಾಕ್ಷಿಯಾಗಿ ನಿಂತಿವೆ. ಮಾತ್ರವಲ್ಲದೆ ಬಸ್ರೂರು ತುಳುವೇಶ್ವರ ಸನ್ನಿಧಿಗೆ ಸಂಬಂಧಪಟ್ಟ ಅತ್ಯಂತ ಆಪ್ತ ಸಂಪರ್ಕ ಕೊಂಡಿಗಳು ಲಭಿಸಲು ಸಾಧ್ಯತೆಯಿದೆ. ಆದರೆ ತುಳುನಾಡಿನ ಐತಿಹ್ಯಗಳು ಸಂಪೂರ್ಣ ನಶಿಸುತ್ತಿರುವ ಸಂದರ್ಭದಲ್ಲಿ ಪುರಾತತ್ವ ಇಲಾಖೆಯು ಇವುಗಳ ಬಗ್ಗೆ ಅಸಡ್ಡೆ ತೋರಿಸಿರುವುದು ತುಂಬಾ ಖೇದಕರ ಸಂಗತಿ. ಈ ಬಗ್ಗೆ ಸ್ಥಳೀಯ ಆಡಳಿತ ಇಲಾಖೆಗಳು ತಕ್ಷಣ ಗಮನಹರಿಸಬೇಕಾಗಿದೆ. ತುಳುನಾಡಿನ ಪ್ರಾಚೀನ ಆರಾಧನಾ ಪದ್ಧತಿ, ಸಂಸ್ಕೃತಿ, ಸಾಹಿತ್ಯ ಹಾಗೂ ಶೈವ ಶಕ್ತ ಪರಂಪರೆಗಳ ಅಧ್ಯಯನಕ್ಕೆ ಪಡುಬಿದ್ರಿ ಅತ್ಯಂತ ಪ್ರಮುಖ ಕೇಂದ್ರವಾಗಬಹುದೆಂದು ತುಳುವರ್ಲ್ಡ್ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸ್ಥಾಪಿಸುವುದರೊಂದಿಗೆ, ಪಾಳು ಬಿದ್ದಿರುವ ಧಾರ್ಮಿಕ ಸಾಂಸ್ಕೃತಿಕ ಸಾನ್ನಿಧ್ಯಗಳ ಪುನರ್ವೈಭವಕ್ಕಾಗಿ ಪ್ರಾಮಾಣಿಕ ಹೆಜ್ಜೆ ಇಡಲು ಫೌಂಡೇಶನ್ ನಿರ್ಧರಿಸಿದೆ. ಇದಕ್ಕಾಗಿ ಸ್ಥಳೀಯರ ಸಹಕಾರವನ್ನು ಪಡೆಯುವ ದಿಶೆಯಲ್ಲಿ ಕಾರ್ಯಾರಂಭವಾಗಿದೆ.