ನಮ್ಮ ದೇಶದ ಸನಾತನ ಸಂಸ್ಕೃತಿಯಲ್ಲಿ ಸಾಕಷ್ಟು ವಿಧಗಳು ಮತ್ತು ವೈವಿಧ್ಯತೆಗಳು ಇವೆ. ಪ್ರತಿಯೊಂದು ಆಚರಣೆಗಳೂ ಕೂಡ ಅರ್ಥಪೂರ್ಣ ಕಾರಣಗಳು ಮತ್ತು ವಿಭಿನ್ನತೆಯನ್ನು ಒಳಗೊಂಡಿವೆ. ಅಂತಾ ಆಚರಣೆಗಳಲ್ಲಿ ಒಂದಾದ ಶ್ರಾದ್ಧ ಅಥವಾ ಪಿತೃಪಕ್ಷ ಪೂಜೆಯು ತನ್ನದೇ ಆದ ಮಹತ್ವ ಹೊಂದಿದೆ. ಪಿತೃಗಳು ಎಂದರೆ ನಮ್ಮ ಪೂರ್ವಜರು. ನಮ್ಮ ಜನ್ಮಕ್ಕೆ ಕಾರಣಕರ್ತರಾದ ಅಥವಾ ಈ ಭೂಮಿಯಲ್ಲಿ ನಮ್ಮ ಹುಟ್ಟಿಗೆ ಆಸರೆಯಾದ ಕುಟುಂಬದವರು, ತಂದೆ ತಾಯಿಗಳು ಮತ್ತು ಅವರ ಹಿಂದಿನ ತಲೆಮಾರು. ಹುಟ್ಟಿದ ಪ್ರತಿಯೊಂದು ಜೀವಿಗೂ ಕರ್ಮದ ನಂಟು ಇದ್ದೆ ಇರುತ್ತದೆ. ಅದೆಲ್ಲವನ್ನೂ ತೀರಿಸಿಕೊಂಡರೆ ಜನನ ಮರಣಗಳ ಜಂಜಾಟಗಳಿಂದ ಮುಕ್ತಿ ಸಾಧ್ಯ ಎಂಬ ನಂಬಿಕೆಯಿದೆ. ಹಾಗೆಯೇ ಮನುಜನಾಗಿ ಹುಟ್ಟಿದಮೇಲೆ ನಿಭಾಯಿಸಲೇ ಬೇಕಾದ ಒಂದಷ್ಟು ಕರ್ತವ್ಯಗಳು, ವಿಧಿ ವಿಧಾನಗಳು ಇವೆ ಎಂದು ನಮ್ಮ ಶಾಸ್ತ್ರಗಳು ಹೇಳುತ್ತವೆ. ಮನುಷ್ಯ ಮುಖ್ಯವಾಗಿ 5 ಋಣಗಳಿವೆ ತಾನು ತೀರಿಸಲೇ ಬೇಕಾದ್ದು. ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ, ಭೂತಋಣ. 

ಇವುಗಳಲ್ಲಿ ಪಿತೃಋಣವು ಬಹಳ ಮಹತ್ವ ಪಡೆದಿದೆ. ಈ ಕುರಿತು ಒಂದು ಕಥೆ ಪ್ರಚಲಿತದಲ್ಲಿದೆ. ಮಹಾಭಾರತದ ಪ್ರಕಾರ, ಕರ್ಣ ತನ್ನ ಜೀವಿತಾವಧಿಯಲ್ಲಿ ಸಾಕಷ್ಟು ಚಿನ್ನ ಬೆಳ್ಳಿ ವಜ್ರ ವೈಡೂರ್ಯಗಳನ್ನು ದಾನ ಮಾಡಿರುತ್ತಾನೆ. ಸತ್ತಮೇಲೆ ಮೇಲಿನ ಲೋಕದಲ್ಲಿ ಅವನಿಗೆ ತಿನ್ನಲು ಚಿನ್ನವನ್ನೇ ಕೊಟ್ಟರು. ಆದರೆ ಅವನಿಗೆ ಹಸಿವಾಗಿದ್ದರಿಂದ ನಿಜವಾದ ಅನ್ನ ಬೇಕಾಗಿತ್ತು. ಅದಕ್ಕೆ ಇಂದ್ರನನ್ನು ಕೇಳಿದಾಗ, " ನೀನು ಬದುಕಿರುವಾಗ ಬೇಕಾದಷ್ಟು ಚಿನ್ನ ಸಂಪತ್ತುಗಳನ್ನು ದಾನ ಮಾಡಿರುವೆ. ಆದರೆ ನಿನ್ನ ಪಿತೃಗಳಿಗಾಗಿ ಯಾವ ಶ್ರಾದ್ಧ ತರ್ಪಣಗಳನ್ನು ನೀಡಿಲ್ಲ. ಆದ್ದರಿಂದ ಅನ್ನ ಸಿಗ್ತಿಲ್ಲ" ಎನ್ನುತ್ತಾನೆ. " ನನಗೆ ನನ್ನ ಪಿತ್ರುಗಳ ಬಗ್ಗೆ ಗೊತ್ತಿಲ್ಲವಾಗಿ ನಾನದನ್ನು ಕೊಟ್ಟಿಲ್ಲ. ಒಂದು ಅವಕಾಶ ಕೊಡಿ" ಎಂದು ಬೇಡಿಕೊಂಡಂನಂತೆ ಕರ್ಣ. ಆದ ಕಾರಣವಾಗಿ ಅವನನ್ನು 'ನಿನ್ನ ಪಿತೃಗಳಿಗಾಗಿ ಏನಾದರು ಮಾಡಿ ಬಾ' ಎಂದು ಒಂದು ಅವಕಾಶ ಕೊಟ್ಟು ಭೂ ಲೋಕಕ್ಕೆ ಕಳುಹಿಸಿದರಂತೆ. ಅದುವೇ ಭಾದ್ರಪದ ಮಾಸ, ಕೃಷ್ಣ ಪಕ್ಷದಲ್ಲಿ. ಹಾಗಾಗಿ ಈ ಮಾಸದ 15 ದಿನಗಳು ಪಿತೃಕಾರ್ಯಕ್ಕೆ ಮೀಸಲು. ಈ ಸಮಯದಲ್ಲಿ ನಮ್ಮ ಪಿತ್ರುಗಳು ಭೂ ಲೋಕಕ್ಕೆ ಬಂದು, ತಮ್ಮ ಕುಟುಂಬದವರು ಅವರ ನೆನಪಿಗಾಗಿ ಕೊಡುವ ದಾನ, ತರ್ಪಣ, ಎಲ್ಲವನ್ನೂ ಸ್ವೀಕರಿಸಿ ಕುಲೋದ್ದಾರಕ್ಕಾಗಿ ಸಂತೃಪ್ತಿಯಿಂದ ಹರಸಿ ಹೋಗುತ್ತಾರೆ ಎಂಬ ನಂಬಿಕೆಯಿದೆ. ಈ ಆಚರಣೆಗೆ ಯಾವುದೇ ಮತಭೇದವಿಲ್ಲ. ಎಲ್ಲರೂ ಮಾಡಲೇಬೇಕಾದ ಕಾರ್ಯವಿದು.

ನಮ್ಮ ಪೂರ್ವಜರು ಇದ್ದಾಗ ಅವರನ್ನು ಶ್ರದ್ದೆಯಿಂದ ನೋಡಿಕೊಂಡು, ಅವರು ನಮ್ಮನ್ನಗಲಿ ಹೋದಮೇಲೂ, ಅವರು ನಮಗಾಗಿ ಕೊಟ್ಟಿರುವ ಜನ್ಮ, ನಾಮ, ಆಸರೆ, ಎಲ್ಲದಕ್ಕೂ ಕೃತಜ್ಞತೆ ತಾಳಿ ಕೆಲವು ವಿಧಾನಗಳ ಮೂಲಕ, ನಮ್ಮ ಶಕ್ತ್ಯಾನುಸಾರ ಧನ್ಯವಾದ ಅರ್ಪಿಸುವ ವಿದಿಯೇ ಶ್ರಾದ್ದ. ಯಾವ ವ್ಯಕ್ತಿಯು ತನ್ನ ಜೀವನದಲ್ಲಿ ಪಿತೃಕಾರ್ಯವನ್ನು ಮಾಡುವುದಿಲ್ಲವೋ, ಅವನು ಮಾಡುವ ಬೇರಾವುದೇ ಯಜ್ಞ ಅಥವಾ ದೇವತಾ ಕಾರ್ಯಗಳು ಯಶಸ್ವಿಯಾಗುವುದಿಲ್ಲ, ದೇವತೆಗಳು ಅವನ ಪೂಜೆಯನ್ನು ಸ್ವೀಕರಿಸುವುದಿಲ್ಲ ಎನ್ನುತ್ತದೆ ಶಾಸ್ತ್ರ. ಇಷ್ಟು ಮಹತ್ವವಿರುವ ಈ ಆಚರಣೆಯನ್ನು ನಾವೆಲ್ಲರೂ ಪಾಲಿಸಿ ಧನ್ಯತೆ ಹೊಂದೋಣ. ಜೀವನದಲ್ಲಿ ದಕ್ಕಿದ ಪ್ರತಿಯೊಂದಕ್ಕೂ ಕೃತಜ್ಞರಾಗಿರೋಣ. ಹಸುವು ಎಷ್ಟೇ ದೊಡ್ಡ ಹಿಂಡಿನೊಳಗಿದ್ದರು, ಕರು ತನ್ನ ತಾಯಿಯನ್ನೇ ಹುಡುಕಿಕೊಂಡು ಹೋಗಿ ಹಾಲು ಕುಡಿಯುವಂತೆ, ನಾವು ಮಾಡುವ ಕರ್ಮಗಳು, ನಾವು ಎಲ್ಲಿ ಯಾವ ರೂಪದಲ್ಲಿದ್ದರು ಬಂದು ಅವುಗಳ ಫಲವನ್ನು ನೀಡಿ ಹೋಗುತ್ತವೆ. ಅವಿನಾಶಿ ಆತ್ಮ ತನ್ನ ಕರ್ಮಫಲಗಳನ್ನು ಭೋಗಿಸಿ ಕಳೆದುಕೊಳ್ಳುವುದಕ್ಕೆ ಒಂದು ಸಾಧನ ಬೇಕು. ಅದುವೇ ಈ ದೇಹ. ಈ ದೇಹಕೊಟ್ಟ ನಮ್ಮ ಪಿತೃಗಳು ಮತ್ತು ಪರಮಾತ್ಮನಿಗೆ ಧನ್ಯವಾದ ಅರ್ಪಿಸುತ್ತ, ಬಂಧಮುಕ್ತಾರಾಗೋಣ.

_ಪಲ್ಲವಿ ಚೆನ್ನಬಸಪ್ಪ