ತುಳು ಭವನ : ಹಿರಿಯರ ಸಾಧನೆಯ ಮೆಟ್ಟಿಲುಗಳೇ ನಮ್ಮ ಕಲಾ ಜೀವನಕ್ಕೆ ದಾರಿ ದೀಪವಾಗಿದೆ ಅವರ ಆದರ್ಶಗಳನ್ನು ಸಂಸ್ಮರಣೆಯ ಮೂಲಕ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಶಿವಾನಂದ ಕರ್ಕೇರ ಅವರ ದತ್ತಿನಿಧಿಯಿಂದ ಇನ್ನಷ್ಟು ಸಾಧಕರ ಸ್ಮರಣೆಯನ್ನು ಮಾಡಲು ಸಹಕಾರಿಯಾಗಿದೆ. ಅವರ ಪ್ರಾಮಾಣಿಕ ಸಮಾಜ ಸೇವೆಯ ತುಡಿತ ಮರೆಯಬಾರದು, ಅವರ ಬದುಕಿನ ಅಧ್ಯಾಯ ಪಾಠವಾಗಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದರು. ಅವರು  ಕರ್ನಾಟಕ ತುಳು ಸಾಹಿತ್ಯ  ಅಕಾಡೆಮಿಯ  ತುಳು ಭವನದ "ಸಿರಿ ಚಾವಡಿ"ಯಲ್ಲಿ ನಾಟಕಕಾರ, ಸಾಹಿತಿ, ಸಮಾಜ ಸೇವಕ ದಿ. ಎ. ಶಿವಾನಂದ ಕರ್ಕೇರಾ ಅವರ ಪ್ರಥಮ  ಸಂಸ್ಮರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಸಂಸ್ಮರಣಾ ಕಾರ್ಯಕ್ರಮವನ್ನು ಪ್ರಪುಲ್ಲ ಶಿವನಾಂದ ಕರ್ಕೇರ ಅವರು ಉದ್ಘಾಟಿಸಿ, ದಿ.ಶಿವಾನಂದ ಕರ್ಕೇರ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಯಿತು. ದಿ. ಶಿವಾನಂದ ಕರ್ಕೇರ ಅವರ ಸಂಸ್ಮರಣಾ ಭಾಷಣವನ್ನು ಮಾಡಿದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ  ಭಾಸ್ಕರ ರೈ ಕುಕ್ಕುವಳ್ಳಿ ಅವರು ಮಾತನಾಡಿ, ತನ್ನ ಬದುಕನ್ನು ತಾನೇ ಸೃಷ್ಟಿಸಿಕೊಂಡು, ಕಲೆಯನ್ನು ಆಸ್ವಾದಿಸಿಕೊಂಡು ಬೆಳೆದು, ಅದನ್ನು ಪ್ರೋತ್ಸಾಹಿಸುವ ಗುಣವಿಶೇಷತೆಯನ್ನು ಹೊಂದಿರುವ ಹಾಗೂ ಸಮಾಜದ ಎಲ್ಲಾ ವಿಭಾಗದಲ್ಲಿಯೂ ಕಾಳಜಿಯನ್ನು ಹೊಂದಿದ್ದ ಅಪರೂಪದ ವ್ಯಕ್ತಿತ್ವ ಶಿವಾನಂದ ಅವರದ್ದು ಅವರು ನಮಗೆಲ್ಲರಿಗೂ ಮಾದರಿ ಎಂದರು.

ಈ ಸಂದರ್ಭದಲ್ಲಿ ದಿ. ಶಿವಾನಂದ ಕರ್ಕೇರ ಅವರ ಸಂಸ್ಮರಣಾ ಪ್ರಶಸ್ತಿಯನ್ನು ಹಿರಿಯ ರಂಗ ಕಲಾವಿದ ವಸಂತ ವಿ. ಅಮೀನ್ ಅವರಿಗೆ ನೀಡಿ ಗೌರವಿಸಲಾಯಿತು.ದಿ.ಶಿವಾನಂದ ಕರ್ಕೇರ ಅವರ ಮೇಲಿನ ಅಭಿಮಾನದಿಂದ ನಳಿನಿ ಭಂಡಾರಿ ಅವರು ವಿಶೇಷವಾಗಿ ಗೀತ ಗಾಯನ ನಡೆಸಿದರು.  

ಮುಖ್ಯ ಅತಿಥಿಗಳಾಗಿ ಹಿರಿಯ ನಾಟಕಕಾರ ಡಾ| ಸಂಜೀವ ದಂಡಕೇರಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ತುಳು ಪೀಠ ಹಾಗೂ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಡಾ.ಮಾಧವ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ರವೀಂದ್ರ ಶೆಟ್ಟಿ ಬಳಂಜ, ದಿ. ಶಿವಾನಂದ ಕರ್ಕೇರ ಅವರ ಪುತ್ರ ಶಿಶಿರ್, ಸೊಸೆ ಸ್ವಪ್ನ ಉಪಸ್ಥಿತರಿದ್ದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈ ಸ್ವಾಗತಿಸಿದರು, ನಾಗೇಶ್ ಕುಲಾಲ್ ಕುಳಾಯಿ ವಂದಿಸಿದರು, ಸದಸ್ಯ ಸಂಚಾಲಕ ನರೇಂದ್ರ ಕೆರೆಕಾಡು ಸನ್ಮಾನಿತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು.

ಸಾಂಸ್ಕೃತಿಕ  ಕಾರ್ಯಕ್ರಮವಾಗಿ ಪ್ರಸಿದ್ಧ ಕಲಾವಿದರಿಂದ "ಸುಧನ್ವ ಮೋಕ್ಷ" ಯಕ್ವಗಾನ  ತಾಳಮದ್ದಳೆ ಕಾರ್ಯಕ್ರಮ ಜರಗಿತು.