ಮಂಗಳೂರು: ರೈತರ ಒಂದು ವರುಷದ ಹೋರಾಟ ಹಾಗೂ ಸಂಯುಕ್ತ ಹೋರಾಟಗಳಿಗೆ ತಲೆಬಾಗಿದ ಪ್ರಧಾನಿ ಮೋದಿಯವರು ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ತೀರ್ಮಾನ ಘೋಷಣೆ ಮಾಡಿದ್ದಾರೆ. ಇದು ಸ್ವಾಗತಾರ್ಹ ಎಂದು ದಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಅವರು ಪತ್ರಿಕಾಗೋಷ್ಠಿ ನಡೆಸಿ ಹೇಳಿದರು.
700 ಮುಗ್ಧ ರೈತರು ಈ ಹೋರಾಟದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ನೋವಿಗೆ ಸಾವಿಗೆ ಹೊಣೆ ಯಾರು? ಸತ್ತ ರೈತರಿಗೆ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಕೊಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಒತ್ತಾಯ ಎಂದು ಹರೀಶ್ ಕುಮಾರ್ ಒತ್ತಾಯಿಸಿದರು.
ಈಗ ಕೃಷಿ ಮಸೂದೆ ವಾಪಸಾತಿಯ ಘೋಷಣೆ ಆಗಿದೆ. ಆದರೆ ವಾಪಸಾತಿ ಬಗೆಗೆ ರೈತರಿಗೆ ನಂಬಿಕೆ ಇಲ್ಲ. ಕಲ್ಲಡ್ಕದಿಂದ ದೆಹಲಿಯವರೆಗೆ ಈಗಲೂ ಮಸೂದೆ ಚೆನ್ನಾಗಿದೆ ಎಂಬ ಹೇಳಿಕೆ ಬಿಜೆಪಿಯವರಿಂದ ಬರುತ್ತಿದೆ. ಇದು ದ್ವಂದ್ವ ನಿಲುವು. ಈ ಮಸೂದೆಗಳನ್ನು ಚರ್ಚಿಸದೆ, ಸುಗ್ರೀವಾಜ್ಞೆ ಮೂಲಕ ತಂದಿದ್ದಾರೆ. ಹಾಗಾದರೆ ಇದನ್ನು ವಾಪಾಸು ಪಡೆಯುವವರೆಗೆ ಪ್ರಧಾನಿ ಮಾತಿನ ಬಗೆಗೆ ಜನರಿಗೆ ನಂಬಿಕೆ ಇಲ್ಲ ಎಂದು ಹರೀಶ್ ಕುಮಾರ್ ಹೇಳಿದರು.
ಇದರ ನಡುವೆ ಬಿಜೆಪಿ ಪರ ಇರುವ ಕೆಲವರು ಕಬರಸ್ತಾನಕ್ಕೆ ಕಳುಹಿಸುತ್ತೇವೆ, ಜಿಲ್ಲಾ ಮುಖ್ಯರ ಕೊರಳ ಪಟ್ಟಿ ಹಿಡಿಯುತ್ತೇವೆ ಎಂದಿತ್ಯಾದಿಯಾಗಿ ಹೇಳುತ್ತಾರೆ. ಬಿಜೆಪಿ ಆಡಳಿತದಲ್ಲಿ ಕಾನೂನಿಗೆ ರಕ್ಷಣೆ ಇಲ್ಲವೆ, ಜನರಿಗೆ ರಕ್ಷಣೆ ಇಲ್ಲವೆ? ಪೋಲೀಸರನ್ನು ಬೆತ್ತಲಾಗಿಸುವ, ಜಿಲ್ಲಾಧಿಕಾರಿಯ ಕೊರಳ ಪಟ್ಟಿ ಹಿಡಿಯುತ್ತೇನೆ ಎಂದವರನ್ನು ಕೂಡಲೆ ಬಂಧಿಸಬೇಕು, ಇಲ್ಲವೆ ಹೇಡಿ ಸರಕಾರ ರಾಜೀನಾಮೆ ಕೊಟ್ಟು ಹೋಗಬೇಕು ಎಂದು ಹರೀಶ್ ಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಜುನಾಥ ಭಂಡಾರಿ, ಸದಾಶಿವ ಉಲ್ಲಾಳ್, ಲಾರೆನ್ಸ್, ನೀರಜ್ ಪಾಲ್, ಸಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.