ಪುತ್ತೂರು, ಮೇ 29: ಸಂತ ಫಿಲೋಮಿನಾ ಕಾಲೇಜಿನ ಗಣಕ ವಿಜ್ಞಾನ ವಿಭಾಗ ಹಾಗೂ ಪಿನ್ಯಾಕಲ್ ಐಟಿ ಕ್ಲಬ್ಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಇಂಟ್ರಾ ಡಿಪಾರ್ಟ್ಮೆಂಟ್ ಐಟಿ ಫೆಸ್ಟ್ ವಿಶನ್ ೨೪ನ ಸ್ಪರ್ಧೆಗಳಿಗೆ ಇಂದು ನೀಡಲಾಯಿತು. ಕಾಲೇಜಿನ ಬೆಳ್ಳಿ ಹಬ್ಬ ಸಭಾಭವನದಲ್ಲಿ ಜರುಗಿದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟನೆ ಮಾಡಿದರು. 

ನಂತರ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು “ ನಮ್ಮ ಅನುಭವಗಳು ಜೀವನದಲ್ಲಿ ಹೆಚ್ಚಿನ ಪಾಠ ಕಲಿಸುತ್ತವೆ. ನಮ್ಮನ್ನು ಕೆಣಕುವವರು, ಟೀಕಿಸುವವರು ಸಮಾಜದಲ್ಲಿ ಸಾಕಷ್ಟು ಜನರಿರುತ್ತಾರೆ. ಅವರ ಟೀಕೆಟಿಪ್ಪಣಿಗಳನ್ನು ನಮ್ಮಲ್ಲಿ ಧನಾತ್ಮಕ ಬದಲಾವಣೆಗಳನ್ನು ತರುವುದಕ್ಕೆ ಮಾತ್ರವೇ ಬಳಸಿಕೊಳ್ಳಬೇಕು. ಅತ್ಯಂತ ಉತ್ತುಂಗಕ್ಕೇರಿದ ವ್ಯಕ್ತಿಗಳು ವಿನಮ್ರರಾಗಿರುತ್ತಾರೆ. ರೂಪವು ನಮಗೆ ದೇವರು ಕೊಟ್ಟ ಕೊಡುಗೆಯಾಗಿದ್ದರೆ ನಮ್ಮ ವ್ಯಕ್ತಿತ್ವವನ್ನು ರೂಪಿಸುವುದು ನಮ್ಮ ಕೈಯಲ್ಲಿದೆ. ವಿದ್ಯಾರ್ಥಿಗಳಲ್ಲಿ ಕರುಣೆ ಆತ್ಮವಿಶ್ವಾಸ ಹಾಗೂ ಧೈರ್ಯಗಳಿದ್ದಲ್ಲಿ ಜೀವನದಲ್ಲಿ ಯಶಸ್ಸನ್ನು ಕಾಣಬಹುದು. “ಎಂದು ಹೇಳಿ ಸ್ಪರ್ಧೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶುಭಕೋರಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಗಣಕವಿಜ್ಞಾನ ವಿಭಾಗದ ಮುಖ್ಯಸ್ಥರಾದ ವಿನಯಚಂದ್ರರವರು “ಕಾಲೇಜಿನಲ್ಲಿ 2012ರಿಂದ ವಿಶನ್ ಇಂಟ್ರಾ ಡಿಪಾರ್ಟ್ಮೆಂಟ್ ಐಟಿ ಫೆಸ್ಟ್ ಆಯೋಜಿಸಲಾಗುತ್ತಿದ್ದು ನಿಗದಿತ ಪಾಠ ಪ್ರವಚನಗಳ ಜೊತೆಗೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಕೌಶಲ್ಯವರ್ಧನೆಗಾಗಿ ಈ ಫೆಸ್ಟ್ನ್ನು ಆಯೋಜಿಸುತ್ತಿದ್ದೇವೆ. ವಿಷನ್ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಕಾಲೇಜಿನ ಗಣಕವಿಜ್ಞಾನ ವಿಭಾಗವು ಕಲ್ಪಿಸುವ ವೇದಿಕೆಯಾಗಿದೆ. ವಿಶನ್ ಸ್ಪರ್ಧೆಗಳ ಆಯೋಜನೆ ಪ್ರಕಟವಾದಂದಿನಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾನಮೋಭಾವ, ಆತ್ಮವಿಶ್ವಾಸ  ಹಾಗೂ ತಂಡಸ್ಪೂರ್ತಿ ಪ್ರಕಟಗೊಂಡಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ದೊರೆತ ಅವಕಾಶಗಳು ವಿದ್ಯಾರ್ಥಿಗಳ ಮನೋಬಲವನ್ನು ಇನ್ನಷ್ಟು ಹೆಚ್ಚಿಸಲಿ” ಎಂದು ಹೇಳಿದರು. 

ದಿಶಾ ಮತ್ತು ಬಳಗದವರು ಪ್ರಾರ್ಥಿಸಿದರು. ಪಿನ್ಯಾಕಲ್ ಐಟಿ ಕ್ಲಬ್ನ ಅಧ್ಯಕ್ಷರಾದ ಅಭಿಷೇಕ್ ಕಾಮತ್ ಸ್ವಾಗತಿಸಿದರು. ನಿತಿಸ್ ಸೈಮನ್ ವಂದಿಸಿದರು.  ಸಮೃದ್ಧಿ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಪಿನ್ಯಾಕಲ್ ಐಟಿ ಕ್ಲಬ್ನ ಸಂಯೋಜಕರಾದ ಸೌಮ್ಯ, ಉಪಾಧ್ಯಕ್ಷ ಆದಿತ್ಯ ದಿನೇಶ್ ಹಾಗೂ ಕಾರ್ಯದರ್ಶಿ ಫರ್ವೇಜ್ ಅಕ್ತರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ವಿಶನ್ 2024ರಲ್ಲಿ ಡಾಕ್ಯುಮೆಂಟರಿ, ಪೇಪರ್ ಪ್ರೆಸೆಂಟೇಶನ್, ಕೊಲ್ಯಾಜ್ ಮೇಕಿಂಗ್, ಐಡಿಯೇಶನ್, ಕೋಡ್ ವಾರ್, ಹ್ಯಾಕಥಾನ್, ವೆಬ್ ಸೈಟ್ ಡಿಜೈನ್, ಫೋಟೋಗ್ರಫಿ, ರೆಮಿನಿಸೆನ್ಸ್, ಐಒಟಿ ಮೋಡೆಲ್ ಡಿಸೈನ್, ಬ್ರೇಕ್ ದ ಕ್ವೆರಿ, ಐಟಿ ಮ್ಯಾನೇಜರ್, ಗ್ರೂಪ್ ಡ್ಯಾನ್ಸ್, ಫ್ಯಾಶನ್ ಶೋ, ಇ-ಗಾಮ್ಸ್ ಎಂಬ ೧೫ ಸ್ಪರ್ಧೆಗಳನ್ನು ಒಳಗೊಂಡಿದೆ. ಕೋಡ್ ವಾರ್, ವೆಬ್ ಸೈಟ್ ಡಿಸೈನ್ ಮುಂತಾದ ಸ್ಪರ್ಧೆಗಳು ಓರ್ವ ಸ್ಪರ್ಧಾಳುವನ್ನೊಳಗೊಂಡಿದ್ದರೆ ಇತರ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಳು ತಂಡವಾಗಿ ಭಾಗವಹಿಸಲಿದ್ದಾರೆ. ಈಗಾಗಲೇ ಹಲವು ಸ್ಪರ್ಧೆಗಳ ಪ್ರಾರಂಭಿಕ ಸುತ್ತುಗಳು ಮುಗಿದಿದ್ದು ಅಂತಿಮ ಹಂತದ ಸ್ಪರ್ಧೆಗಳನ್ನು ಈ ವೇದಿಕೆಯಲ್ಲಿ ಆಯೋಜಿಸಲಾಗುವುದು. ವಿಜೇತರಿಗೆ ಬಹುಮಾನಗಳನ್ನು ಸಾಯಂಕಾಲ ನಡೆಯುವ ಸಮಾರೋಪ ಸಮಾರಂಭದಲ್ಲಿ ನೀಡಲಾಗುವುದು. ಪಾಠಪ್ರವಚನಗಳ ಸಂದರ್ಭದಲ್ಲಿ ಎಲೆಮರೆಯ ಕಾಯಿಗಳಂತಿದ್ದ ಹಲವಾರು ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವುದಕ್ಕೆ ವಿಶನ್ ಕಾರಣೀಭೂತವಾಗಿದೆ ಎಂದರೆ ತಪ್ಪಾಗಲಾರದು.