ಪುತ್ತೂರು ಏ. 21: ಸಂತ ಫಿಲೋಮಿನಾ ಕಾಲೇಜಿನಲ್ಲಿ ತೃತೀಯ ಬಿಸಿಎ ವ್ಯಾಸಂಗ ಮಾಡುತ್ತಿರುವ  41 ವಿದ್ಯಾರ್ಥಿನಿಯರು ಪೇ ಪಾಲ್ ಬಹುರಾಷ್ಟ್ರೀಯ ಕಂಪನಿಯ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ.  2023-24-ನೇ ಶೈಕ್ಷಣಿಕ ವರ್ಷದ ಪ್ರಾರಂಭದಲ್ಲಿ ಕಾಲೇಜಿನಲ್ಲಿ ಅಂತಿಮ ಬಿಸಿಎ ವಿದ್ಯಾರ್ಥಿಗಳಿಗಾಗಿ ಹನಿವೆಲ್ ಕಂಪನಿಯಿಂದ ಪ್ರಾಯೋಜಿಸಲ್ಪಟ್ಟ ಕಸ್ಟಮರ್ ರಿಲೇಶನ್ಶಿಪ್ ಮ್ಯಾನೇಜ್ಮೆಂಟ್ ಸರ್ಟಿಫಿಕೇಟ್ ಕೋರ್ಸನ್ನು ಆಯೋಜಿಸಲಾಗಿತ್ತು. 

ಸರ್ಟಿಫಿಕೇಟ್ ಕೋರ್ಸ್ ನ ಕೊನೆಯಲ್ಲಿ ಕಂಪನಿಯ ವತಿಯಿಂದ ನಾಲ್ಕು ಹಂತಗಳ ಪರೀಕ್ಷೆಗಳನ್ನು ನಡೆಸಲಾಗಿತ್ತು. ಭಾಗವಹಿಸಿದ 118 ವಿದ್ಯಾರ್ಥಿಗಳೂ ಈ ನಾಲ್ಕು ಹಂತಗಳ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದು ಅವರಿಗೆ ಕಂಪನಿಯ ವತಿಯಿಂದ ಪ್ರಮಾಣಪತ್ರಗಳನ್ನು ನೀಡಲಾಗಿದೆ. ಈ ಪೈಕಿ 41ವಿದ್ಯಾರ್ಥಿನಿಯರು  ಪೇಪಾಲ್ ಕಂಪನಿಯ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ. “ನಮ್ಮ ಕಾಲೇಜಿನ ಅಂತಿಮ ಬಿಸಿಎಯ 41 ಮಂದಿ ವಿದ್ಯಾರ್ಥಿನಿಯರು ಬಹುರಾಷ್ಟ್ರೀಯ ಕಂಪನಿಯಾದ ಪೇಪಾಲ್ನ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿರುವ ವಿಷಯ ಬಹಳ ಸಂತಸ ತಂದಿದೆ. 

ಇನ್ನು ಎರಡು ಸುತ್ತಿನ ಸಂದರ್ಶನವಿದ್ದು ಅಂತಿಮವಾಗಿ ಆಯ್ಕೆಗೊಂಡ ವಿದ್ಯಾರ್ಥಿನಿಯರಿಗೆ ವಾರ್ಷಿಕ 6 ಲಕ್ಷರೂಪಾಯಿಗಳ ಪ್ಯಾಕೇಜ್ ಇರುವ ಕಸ್ಟಮರ್ ಸೊಲ್ಯುಶನ್ ಹುದ್ದೆಗಳನ್ನು ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಬಹುರಾಷ್ಟ್ರೀಯ ಕಂಪನಿಗಳೊಡನೆ ಒಡಂಬಡಿಕೆ ಮಾಡಿಕೊಂಡು ಸರ್ಟಿಫಿಕೇಟ್ ಕೋರ್ಸ್ ಹಾಗೂ ಕ್ಯಾಂಪಸ್ ನೇಮಕಾತಿಗಳನ್ನು ಆಯೋಜಿಸಲಾಗುವುದು.  ಈಗಾಗಲೇ ಸೈಬರ್ ಸೆಕ್ಯುರಿಟಿಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಪಾಲೊಆಲ್ಟೋ ಕಂಪನಿಯೊಂದಿಗೆ ಒಡಂಬಡಿಕೆ ಮಾಡಲಾಗಿದ್ದು ವಿದ್ಯಾರ್ಥಿಗಳಿಗೆ ಇಂಟರ್ನ್ಶಿಪ್ ನೀಡುವ ಇತರ ಕಂಪನಿಗಳೊಡನೆ ಒಡಂಬಡಿಕೆ ಮಾಡುವ ಅಂತಿಮ ಹಂತದ ಕಾರ್ಯಗಳು ನಡೆಯುತ್ತಿವೆ. ಪೇಪಾಲ್ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಅವರು ಅಂತಿಮ ಘಟ್ಟದ ಸಂದರ್ಶನವನ್ನು ಯಶಸ್ವಿಯಾಗಿ ಪೂರೈಸಲಿ. ಸಂದರ್ಶನವನ್ನು ಎದುರಿಸಲು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು” ಎಂದು ಕಾಲೇಜಿನ ಪ್ರಾಂಶುಪಾಲರಾದ ವಂ| ಡಾ| ಆ್ಯಂಟನಿ ಪ್ರಕಾಶ್ ಮೊಂತೇರೊರವರು ಹೇಳಿದ್ದಾರೆ. ಇದಲ್ಲದೆ ಕಾಲೇಜಿನ 6  ಮಂದಿ ಬಿಸಿಎ ವಿದ್ಯಾರ್ಥಿಗಳು ಹಾಗೂ 2 ಮಂದಿ ಬಿ ಕಾಂ ವಿದ್ಯಾರ್ಥಿಗಳು ಪಲ್ಲೆ ಟೆಕ್ನಾಲಜೀಸ್ ಕಂಪನಿಯ ಅಂತಿಮ ಹಂತದ ಸಂದರ್ಶನಕ್ಕೆ ಆಯ್ಕೆಯಾಗಿರುತ್ತಾರೆ.