ಇತ್ತೀಚೆಗೆ ನಮ್ಮೂರ ತುಂಬಟ್ಟೆ ಕೆರೆಯ ದಡದಲ್ಲಿ ಈ ನೋನಿ ಮರವನ್ನು ಕಂಡೆ. ಸಣ್ಣವನಿದ್ದಾಗ ತೊಟ್ಟಂ, ಮಲ್ಪೆ, ಕಡೆಕಾರ್ ತೋಡುಗಳ ಪಕ್ಕ ತುಂಬ ನೋಡಿದ್ದೆ. ಒಂದು ಜಾತಿಯ ಬಾವಲಿ ಮತ್ತು ಒಂದು ಜಾತಿಯ ಇರುವೆಗಳು ಮಾತ್ರ ತಿನ್ನುತ್ತಿದ್ದವು.

ನೂರಾರು ಹೆಸರಿನ ಇದನ್ನು  ವಾಕರಿಕೆ ಹಣ್ಣು, ಚೀಸ್ ಹಣ್ಣು, ಹೊಯ್ಗೆಯಂಗಳ ಹಣ್ಣು ಮೇಲಾಗಿ ಬರಗಾಲದ ರೊಟ್ಟಿ, ಬಡವರ ಬ್ರೆಡ್ ಹಣ್ಣು ಎಂದಿತ್ಯಾದಿಯಾಗಿ ಕರೆಯುತ್ತಾರೆ. ಕೊಂಗಣ ಏಶಿಯಾ ಆಸ್ಟ್ರೇಲಿಯಾ ಮೂಲದ ಇದನ್ನು ಪಾಲಿನೇಶಿಯನ್ ನಾವಿಕರು ಪೆಸಿಫಿಕ್ ಸಾಗರದ ಎಲ್ಲ ಕಡೆ ದ್ವೀಪಗಳಿಗೆ ಹರಡಿದ್ದಾರೆ.

ಮೊರಿಂಡಾ ಸಿಟ್ರಿಪೋಲಿಯಾ ಎನ್ನುವ ಇದು ರೂಬಿಯೇಸೀ ಕಾಫಿ ಕುಟುಂಬಕ್ಕೆ ಸೇರಿದೆ.

ಪೆಸಿಫಿಕ್ ಸಾಗರದ ದ್ವೀಪದವರು ಆಹಾರದ ಕೊರತೆಯಾದಾಗ ಇದನ್ನು ಬೇಯಿಸಿ ಸೇವಿಸುತ್ತಾರೆ. ಕೆಲವು ಬಡವರು ತಮ್ಮ ಬದಲಿ ದೃಢ ಆಹಾರವಾಗಿಯೂ ಬಳಸುತ್ತಾರೆ. ಪರಂಪರೆಯಾಗಿ ಅಲ್ಲೆಲ್ಲ ಇದನ್ನು ಔಷಧಿಯಾಗಿ ಬಳಸುತ್ತಾರೆ. ಮುಖ್ಯವಾಗಿ ಜ್ವರ, ಮೈಕೈ ನೋವು, ಹೊಟ್ಟೆ ಬಾಧೆಗಳಿಗೆ ಇದು ಔಷಧಿ ಎನ್ನಲಾಗಿದೆ.

ಇಡೀ ವರುಷ ಹೂ ಹಣ್ಣು ಬಿಡುವ ಇದು ಕಡಲಿಗೆ ಹತ್ತಿರದ ಎಲ್ಲ ಮಣ್ಣುಗಳಲ್ಲಿ ಬೆಳೆಯುತ್ತದೆ. ಹಣ್ಣು ವಾಕರಿಕೆ ಬರಿಸಬಹುದಾದ ವಾಸನೆ ಹೊಂದಿದೆ. ಹಾಗಾಗಿ ‌ನಮ್ಮಲ್ಲಿ ಬಳಕೆ ಇರಲಿಲ್ಲ. ಇದನ್ನು ಇಂಡಿಯನ್ ಮಲ್ಬೆರಿ ಎಂದು ಕೂಡ ಕರೆದಿದ್ದರು.

ಈಗ ಇದು ಮದ್ದಾಗಿ ಹೆಸರು ಪಡೆದಿದ್ದು, ಕೆಲವರ ಕಸುಬಾಗಿ ಬೆಳೆದಿದೆ. ಹಾಗಾಗಿ ನಾನಾ ಕಡೆ ಬೆಳೆಸುತ್ತಾರೆ.

Article by