ಭೂಮಂಡಲದ ಪ್ರಕೃತಿಯ ಮಡಿಲಿನಲ್ಲಿ ಹತ್ತು ಹಲವು ವಿಧದ ಮರ-ಗಿಡಗಳು ಮತ್ತು ಸಸ್ಯ ಸಂಪತ್ತು ಅಡಗಿದೆ. ಅವುಗಳಲ್ಲಿ ಕೆಲವು ಔಷಧೀಯ ಗುಣಗಳುಳ್ಳ ಮರ-ಗಿಡಗಳು, ಕೆಲವು ಬೆಲೆಬಾಳುವ ಮರ-ಗಿಡಗಳು, ಕೆಲವು ಉರುವಲಿಗಾಗಿ ಉಪಯೋಗಿಸುವ ಮರ-ಗಿಡಗಳು ಇವೆ. ಇಂತಹ ವಿವಿಧ ರೀತಿಯ ಮರ-ಗಿಡಗಳಲ್ಲಿ ಔಷಧೀಯ ಗುಣ ಹಾಗೂ ದೇವತಾ ಕಾರ್ಯಗಳಿಗೆ ಉಪಯೋಗಿಸುವ ಅತೀ ಅಪರೂಪದ ಗಿಡ ಅಥವಾ ಮರಗಳಲ್ಲಿ ಬಿಲ್ವ ಪತ್ರೆಯೂ ಒಂದು. ಬಿಲ್ವ ಪತ್ರೆಗೆ ಸಂಸ್ಕೃತದಲ್ಲಿ ‘ಬಿಲ್ವಾ’ ಅಥವಾ ‘ಶ್ರೀಫಲ’ ಎನ್ನುತ್ತಾರೆ. ಬಿಲ್ವ ಪತ್ರೆಯು ಮಧ್ಯಮ ಪ್ರಮಾಣದ ಒಂದು ಮರ. ಪುರಾಣಗಳ ಪ್ರಕಾರ ಬಿಲ್ವ ಪತ್ರೆ ಮರವು ಪಾರ್ವತಿ ದೇವಿಯ ಬೆವರ ಹನಿಗಳಿಂದ ಹುಟ್ಟಿಕೊಂಡಿತಂತೆ. ಈ ಮರವು ಪಾರ್ವತಿ ದೇವಿಯ ಆವಾಸ ಸ್ಥಾನವಾಗಿರುವುದರಿಂದ ಇದು ಶಿವನಿಗೆ ಅತೀ ಪ್ರೀತಿ ಪಾತ್ರ ಮರ ಎಂದು ಪುರಾಣಗಳು ಹೇಳುತ್ತವೆ. ಅದರಲ್ಲೂ ಸ್ವತ: ಪಾರ್ವತಿಯೇ ಈ ಮರದ ಎಲೆಗಳಾಗಿರುವುದರಿಂದ ಆ ಎಲೆಗಳೆಂದರೆ ಶಿವನಿಗೆ ಇನ್ನೂ ಅಚ್ಚುಮೆಚ್ಚು. ದಕ್ಷಿಣ ಏಷ್ಯಾ ಪ್ರದೇಶಗಳಲ್ಲಿ ದೇವಸ್ಥಾನಗಳ ಪಕ್ಕ, ಉದ್ಯಾನವನಗಳಲ್ಲಿ ಸಾಮಾನ್ಯವಾಗಿ ಬೆಳೆಸಲಾಗುತ್ತದೆ. ಬಿಲ್ವವು ಭಾರತದ ಹಲವಾರು ಭಾಗಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ವೃಕ್ಷವಾಗಿದೆ. ಇದು ಪರ್ಣಪಾತಿ ಮರ, ಕೊಂಬೆಗಳಲ್ಲಿ ಮುಳ್ಳುಗಳಿದ್ದು, ತೊಗಟೆ ಬೂದು ಬಣ್ಣದ್ದಾಗಿ ಬೆಂಡು ಬೆಂಡಾಗಿರುತ್ತದೆ. ಎಲೆಗಳು ತ್ರಿಪರ್ಣಿ ಅಂದರೆ ಮೂರು ಎಲೆಗಳು. ಈ ಎಲೆಗಳು ಸುವಾಸಿತವಾಗಿರುವುವು. ಎಲೆಗಳಲ್ಲಿ ಸುಗಂಧ ತೈಲಯುಕ್ತ ಪಾರದರ್ಶಕ ಗ್ರಂಥಿಗಳ ಚುಕ್ಕಿಗಳಿವೆ. 

ಹಿಂದೂ ಧರ್ಮದಲ್ಲಿ ಬಿಲ್ವಪತ್ರೆ ಒಂದು ಪವಿತ್ರವಾದ ಮರ, ಶಿವನಿಗೆ ಪ್ರತಿದಿನ ಮತ್ತು ವಿಶೇಷವಾಗಿ ಮಹಾ ಶಿವರಾತ್ರಿಯ ದಿವಸ ಬಿಲ್ವಪತ್ರ್ರೆಯಿಂದ ಶಿವನನ್ನು ಪೂಜಿಸಿದರೆ, ಶಿವನ ವಿಶೇಷ ಅನುಗ್ರಹ ಸಿಗುತ್ತದೆ ಎಂದು ನಂಬಿಕೆಯಿದೆ. ಆಯುರ್ವೇದದ ಔಷಧಿಯ ಉಪಯೋಗ ಮನಗಂಡ ಹಿರಿಯರು ದೇವರ ಪೂಜೆಯ ನೆಪದಲ್ಲಿ ನಮ್ಮೊಂದಿಗೆ ಬೆರೆಸಿ, ಬೆಳಸಿ ವನದ ರೂಪ ಕೊಟ್ಟಿದ್ದಾರೆ ಎಂದು ಅನಿಸುತ್ತದೆ. ಇದರ ಎಲೆ, ಹೂವು, ಕಾಯಿ ಬೇರುಗಳನ್ನು ಔಷಧಿಯಾಗಿ ಉಪಯೋಗಿಸಬಹುದು. ಊಟದ ನಂತರ ಬಿಲ್ವದ ಹಣ್ಣಿಗೆ ಸ್ವಲ್ಪ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿ ತಿಂದರೆ ಕಫ ನೀರಾಗುತ್ತದೆ.  ನೆಗಡಿಯಾದಾಗ ಬಿಲ್ವಪತ್ರೆಯ ರಸವನ್ನು ಸ್ವಲ್ಪ ಸ್ವಲ್ಪ ಕುಡಿಯುತ್ತಿದ್ದರೆ ಪ್ರಯೋಜನವಾಗುತ್ತದೆ.  ಅಸ್ತಮಾ ಸಮಸ್ಯೆಯಿಂದ ಬಳಲುತ್ತಿರುವವರು ಪ್ರತಿದಿನ ಮುಂಜಾನೆ ಎದ್ದ ಕೂಡಲೇ ಒಂದು ಬಿಲ್ವದ ಎಲೆಯನ್ನು 2-3 ಕಾಳುಮೆಣಸಿನೊಂದಿಗೆ ಬಾಯಿಗೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನಬೇಕು.  ಅರ್ಧ ಗಂಟೆಯ ಮೊದಲು ಬಿಲ್ವಪತ್ರೆ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ತಲೆಹೊಟ್ಟು, ಅಕಾಲ ನರೆಕೂದಲು ಸಮಸ್ಯೆ ಮತ್ತು ಹೇನು ನಿವಾರಣೆಯಾಗುತ್ತದೆ. ವಾತದ ದೋಷಗಳನ್ನು ನಿವಾರಿಸುವ ಗುಣ ಬೇರಿನಲ್ಲಿದೆ.  ಬಿಲ್ವದ ಹಣ್ಣು ಹಸಿವು ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ. ಪಕ್ವವಾದ ಬಿಲ್ವಪತ್ರೆಯ ಹಣ್ಣಿನ ಸೇವನೆ ಮಾಡಿದರೆ ಅಜೀರ್ಣ, ಅತಿಸಾರ, ರಕ್ತದಿಂದಾಗುವ ತೊಂದರೆಗಳು ಪಿತ್ತ, ವಾತ, ಕಫ ಕಡಿಮೆಯಾಗುತ್ತದೆ.  ಪಕ್ವಗೊಂಡ ಹಣ್ಣುಗಳ ತಿರುಳು ತೆಗೆದು ಒಣಗಿಸಿ ಕಾಲು ಚಮಚ ಪುಡಿಯನ್ನು ಹಾಲು ಅಥವಾ ನೀರು ಸೇರಿಸಿ ಕುಡಿಯುವುದರಿಂದ ದೇಹಪುಷ್ಟಿ ಆಗುತ್ತದೆ.  ಇದರ ತಿರುಳನ್ನು ನುಣ್ಣಗೆ ರುಬ್ಬಿ ಎಳ್ಳೆಣ್ಣೆ ಸೇರಿಸಿ ತೆಳುವಾದ ಬಟ್ಟೆಯಲ್ಲಿ ಸೋಸಿ ಹತ್ತು ದಿನ ಬಿಸಿಲಿನಲ್ಲಿ ಗಾಳಿಯಾಡದಂತೆ ಇಡಬೇಕು.  ಇದು ಸುಟ್ಟ ಗಾಯಕ್ಕೆ ಒಳ್ಳೆಯ ಔಷದಿಯಾಗಿದೆ.  ಹಣ್ಣುಗಳ ಓಡುಗಳನ್ನು ಸಂಗ್ರಹಿಸಿ ಹೊಗೆ ಹಾಕುವುದರಿಂದ ಸೊಳ್ಳೆಗಳು ಮನೆಯಿಂದ ಹೊರಗೆ ಹೋಗುವುದು.  ಪತ್ರೆ ಮರದ ಅಂಟವನ್ನು ಪಾನಕ ಮಾಡಿ ಕುಡಿಯುವುದರಿಂದ ಅತಿಸಾರ ಗುಣವಾಗುತ್ತದೆ. ಅಂಟಿನೊಂದಿಗೆ ದನಿಯಾ ಮತ್ತು ಕಲ್ಲುಸಕ್ಕರೆ ಸೇರಿಸಿ ಕಷಾಯ ಮಾಡಿ ಕುಡಿದರೆ ಕಾಲರಾ ಗುಣವಾಗುತ್ತದೆ. ಪತ್ರೆಯ ರಸವನ್ನು ಅಕ್ಕಿ ತೊಳೆದ ನೀರಿನಲ್ಲಿ ಕಲ್ಲುಸಕ್ಕರೆ ಸೇರಿಸಿ ದಿನಕ್ಕೆ 2-3 ಬಾರಿ ಕುಡಿದರೆ ಗರ್ಭಿಣಿಯರ ವಾಂತಿ ನಿಲ್ಲತ್ತದೆ.  ಒಂದು ಚಮಚ ತಾಜಾ ಎಲೆಯ ರಸ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೆ ಸಕ್ಕರೆ ಕಾಯಿಲೆ ಸಾಮಾನ್ಯ ಸ್ಥಿತಿಗೆ ಬರುತ್ತದೆ. ತಾಜಾ ಎಲೆಯ ರಸ ಅರೆದು ಪೇಸ್ಟ್ ಮಾಡಿ ಗಾಯಕ್ಕೆ ಹಚ್ಚಿದರೆ ಗುಣವಾಗತ್ತದೆ. ತಾಜಾ ಎಲೆಯನ್ನು ಅರೆದು ಪೇಸ್ಟ್ ಮಾಡಿ ಕಣ್ಣಿಗೆ ಪಟ್ಟಿ ಕಟ್ಟಿದರೆ ಕಣ್ಣು ಉರಿ ನೋವು ಗುಣವಾಗುತ್ತದೆ. ಎಲೆಯ ರಸದಲ್ಲಿ ಶುದ್ದ ಆಕಳ ತುಪ್ಪವನ್ನು ಸೇರಿಸಿ ಸೇವಿಸಿದರೆ ಹೃದಯ ಬಲವಾಗುತ್ತದೆ.  ಮುಳ್ಳು. ಗಾಜು ದೇಹದ ಒಳಗೆ ಸೇರಿ ತೆಗೆಯಲು ಸಾಧ್ಯವಿಲ್ಲವಾದರೆ ಎಲೆಗಳನ್ನು ನುಣ್ಣಗೆ ಅರೆದು ಕಟ್ಟಿದರೆ ಕರಗಿ ಗಾಯ ಗುಣವಾಗುತ್ತದೆ.  

ಆದುದರಿಂದ ನಾವು ನಮ್ಮ ಮನೆಯ ವಠಾರದಲ್ಲಿ ಬಿಲ್ವ ಪತ್ರೆಯಂತಹ ಔಷಧೀಯ ಗುಣಗಳುಳ್ಳ ಹಾಗೆಯೇ ದೇವತಾ ಕಾರ್ಯಗಳಿಗೆ ಉಪಯೋಗಿಸಲ್ಪಡುವ ಮರ-ಗಿಡಗಳನ್ನು ಬೆಳೆಸುವ ಹವ್ಯಾಸವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಮಗೂ ನಮ್ಮ ಪರಿಸರಕ್ಕೂ, ಪರಿಶುದ್ಧವಾದ ಗಾಳಿ ದೊರಕುತ್ತದೆ. ಇದರಿಂದ ರೋಗ-ರುಜಿನಗಳು ದೂರವಾಗುತ್ತದೆ. ಬಿಲ್ವ ಪತ್ರೆಯ ಎಲೆಗಳನ್ನು ಯಾರು ಸ್ವರ್ಶಿಸುತ್ತಾರೋ ಅವರಿಗೆ ಈ ಎಲೆಗಳಲ್ಲಿರುವ ಧನಾತ್ಮಕ ಶಕ್ತಿಯು ಸಂಚಯವಾಗುತ್ತದೆ. ವೇದಗಳ ಕಾಲದಲ್ಲಿ ಹಾಗೆಯೇ ಆಧುನಿಕ ಯುಗದಲ್ಲಿ ಬಿಲ್ವ ಪತ್ರೆಯ ಪ್ರಾಮುಖ್ಯತೆಯನ್ನು ಸಂಸ್ಕೃತ ಭಾಷೆಯಲ್ಲಿ ಉಲ್ಲೇಖಿಸಲಾಗಿದೆ.  ಈ ಮರವು ಲಕ್ಷ್ಮೀ, ಪ್ರಜಾಪತಿ, ಸೂರ್ಯ, ಶಿವ ಹಾಗೂ ಪಾರ್ವತಿ ದೇವರುಗಳ ಪವಿತ್ರ ಮೂಲಸ್ಥಾನವೂ ಹೌದು. ಆದ್ದರಿಂದಲೇ ಭಾರತೀಯ ಪದ್ದತಿಯಲ್ಲಿ ಈ ಮರಕ್ಕೆ ಅತ್ಯಂತ ಮಹತ್ವವನ್ನು ನೀಡುತ್ತಾರೆ. ಈ ಮರದ ಎಲೆಯನ್ನು ದೇವತಾ ಕಾರ್ಯಗಳಿಗೆ ಉಪಯೋಗಿಸಿದರೆ ಅವರಿಗೆ ಪುಣ್ಯ ಪ್ರಾಪ್ತಿಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮರವನ್ನು ಕಡಿಯುವುದು ಅಥವಾ ಹಾಳು ಮಾಡುವುದನ್ನು ನಿಷೇಧಿಸಲಾಗಿದೆ. ಆದ್ದರಿಂದ ನಾವು ಕೂಡಾ ಈ ಮರವನ್ನು ಬೆಳೆಸುವ ಪ್ರಯತ್ನವನ್ನು ಮಾಡೋಣವೇ! 

Article By

Prakrathi Nayak

II B.Ed

St. Aloysius Institute of Education