ಪುತ್ತೂರು: ಕರಾವಳಿಯ ಗಂಡು ಕಲೆಯೆಂದು ಹೆಸರುವಾಸಿಯಾಗಿರುವ ಯಕ್ಷಗಾನವೆಂದಾಕ್ಷಣ ಕಲಾಸಕ್ತರ ಯೋಚನೆಗೆ ಬರುವುದು ರಂಗವೇದಿಕೆಯ ಕೇಂದ್ರ ಬಿಂದು ಭಾಗವತರು. ಹಿಮ್ಮೇಳದ ಚೆಂಡೆ ಮದ್ದಳೆ, ಮುಮ್ಮೇಳದ ವಿವಿಧ ಪಾತ್ರಧಾರಿಗಳ ಸಂಭಾಷಣೆಯನ್ನು ನಿಯಂತ್ರಿಸುವುದರೊಂದಿಗೆ ತನ್ನ ಸಂಗೀತಮಯ ಹಾಡುಗಾರಿಕೆಯ ಮೂಲಕ ಕಲಾಸಕ್ತರ ಮನಸೂರೆಗೊಳಿಸಬಲ್ಲ ಸಾಮಥ್ರ್ಯವಿರುವ ಭಾಗವತರು ಎಲ್ಲರ ಪ್ರಶಂಸೆಗೆ ಪಾತ್ರರಾಗುತ್ತಾರೆ. ಅಂತಹ ವಿಶೇಷ ಕಲಾಸಾಮಥ್ರ್ಯವನ್ನು ಮೈಗೂಡಿಸಿಗೊಂಡಿರುವವರಲ್ಲಿ ಪ್ರಶಾಂತ ರೈ ಮುಂಡಾಲಗುತ್ತು ಒಬ್ಬರಾಗಿರುತ್ತಾರೆ.

ಪುತ್ತೂರು ತಾಲೂಕಿನ ಪ್ರತಿಷ್ಠಿತ ಮುಂಡಾಲಗುತ್ತು ಮನೆತನದ ಹೆಮ್ಮೆಯ ಪ್ರಶಾಂತ್‍ ರೈ ಇವರು ಬಾಲ್ಯದಿಂದಲೇ ಪ್ರತಿಭಾನ್ವಿತರಾಗಿ ಬೆಳೆದವರು. ಸಂಗೀತ ಕ್ಷೇತ್ರದಲ್ಲಿ ಅತೀವ ಆಸಕ್ತಿ ಹೊಂದಿರುವ ಇವರು ಪ್ರಸ್ತುತ ಯಕ್ಷಗಾನ ಹವ್ಯಾಸಿ ಭಾಗವತರಾಗಿ ವಿಶೇಷ ಜನಮನ್ನಣೆಯನ್ನು ಗಳಿಸಿರುತ್ತಾರೆ. 

ಶ್ರೀ ಮೋಹನ ಬೈಪಾಡಿತ್ತಾಯರಲ್ಲಿ ಪ್ರಾಥಮಿಕ ಹಂತವನ್ನುಅಭ್ಯಾಸ ಮಾಡಿ, ತೆಂಕುತಿಟ್ಟು ಯಕ್ಷಗಾನ ಭಾಗವತಿಕೆಯ ಹೆಸರಾಂತ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್‍ ಇವರಲ್ಲಿ ಉನ್ನತ ಅಭ್ಯಾಸವನ್ನು ಮಾಡಿದರು. ಬಳಿಕ ಸುಭಾಸ್ ಪಂಜ ಮತ್ತು  ಕುಮಾರ ಸುಬ್ರಹ್ಮಣ್ಯ ವಳಕ್ಕುಂಜ ಇವರಿಂದ ರಂಗ ನಡೆಯನ್ನು ಕರಗತ ಮಾಡಿಕೊಂಡರು. ಸಾಹಿತ್ಯದ ಸ್ಪಷ್ಟತೆ ಮತ್ತು ರಾಗಗಳ ಬದ್ಧತೆ ಇವರ ಹಾಡುಗಾರಿಕೆಯ ವಿಶೇಷತೆಗಳು.

ಪುತ್ತೂರಿನ ಪ್ರಖ್ಯಾತ ಶಿಕ್ಷಣ ಸಂಸ್ಥೆಯಾದ ಸಂತ ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕ ವೃತ್ತಿಯನ್ನು ನಡೆಸುತ್ತಿರುವ ಇವರು ಸಂಸ್ಥೆಯಲ್ಲಿರುವ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರವಾದ ಯಕ್ಷಕಲಾ ಕೇಂದ್ರದ ನಿರ್ದೇಶಕರಾಗಿ ಅನೇಕ ವಿನೂತನ ಕಾರ್ಯಕ್ರಮಗಳನ್ನು ಸಂಯೋಜಿಸುವಲ್ಲಿ ಯಶಸ್ವಿಯಾಗಿರುತ್ತಾರೆ. ಯಕ್ಷ ಪಠ್ಯ ಗಾಯನ, ಯಕ್ಷ ಸಂವಾದ ಸರಣಿ, ಯಕ್ಷ ವಾಹಿನಿ ಸರಣಿ, ಕಲಾಕ್ಷೇತ್ರದ ಸ್ಪರ್ಧಾ ಕಾರ್ಯಕ್ರಮಗಳು ಮೊದಲಾದವುಗಳನ್ನು ಹಮ್ಮಿಕೊಳ್ಳುವ ಮೂಲಕ ಸಂಸ್ಥೆಯಲ್ಲಿ ಅಧ್ಯಯನ ನಡೆಸುತ್ತಿರುವ ಕಲಾಸಕ್ತ ವಿದ್ಯಾರ್ಥಿಗಳಿಗೆ ಸ್ಪೂರ್ತಿಯ ಚಿಲುಮೆಯಾಗಿದ್ದಾರೆ. ತನ್ನ ಸಹದ್ಯೋಗಿ ಮಿತ್ರರು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹಲವಾರು ವಿಶೇಷ ಸಂದರ್ಭಗಳಲ್ಲಿ ಯಕ್ಷ ಪ್ರದರ್ಶನವನ್ನು ನೀಡಿ, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ. ಕಾಲೇಜಿನ ಪ್ರಾಂಶುಪಾಲರಾದ ವಂ. ಡಾ. ಆ್ಯಂಟನಿ ಪ್ರಕಾಶ್‍ ಮೊಂತೆರೊರವರ ಕಲಾಸಕ್ತಿಯ ಪ್ರತೀಕವಾಗಿ ಯಕ್ಷಕಲಾಕೇಂದ್ರವು ದೇಶಭಕ್ತ ಎನ್‍ ಎಸ್‍ಕಿಲ್ಲೆ ಪ್ರತಿಷ್ಥಾನದೊಂದಿಗೆ ಒಡಂಬಡಿಕೆಯನ್ನು ಮಾಡಿ, ಸಾಂಸ್ಕ್ರತಿಕ  ಮತ್ತು ಸಾಹಿತ್ಯಿಕ ಚಟುವಟಿಕೆಗಳಿಗೆ ಭದ್ರಬುನಾದಿಯನ್ನು ಹಾಕಿದೆ. 

ಶ್ರೀ ಪ್ರಶಾಂತ ರೈಯವರು ವಿಶೇಷ ಗುಣ ಸಾಮಥ್ರ್ಯಗಳನ್ನು ಮೈಗೂಡಿಸೊಂಡಿರುವುದು ಈಗಾಗಲೇ ಬೆಳಕಿಗೆ ಬಂದಿರುವ ವಿಚಾರ. ಇವರು ಅಮೃತಧಾರೆ ಮತ್ತು ಶಾಖ್ಯಮುನಿ ಬುದ್ಧ ಎಂಬ ಯಕ್ಷಗಾನ ಪ್ರಸಂಗ ಸಾಹಿತ್ಯವನ್ನು ರಚಿಸಿದ್ದಾರೆ. ಹಾಗೆಯೇ ನಾನಾ ಸಮಾವೇಶಗಳಲ್ಲಿ ನಿರ್ವಹಣೆಯನ್ನು ಅಚ್ಚು ಕಟ್ಟಾಗಿ ನಡೆಸಿ, ಕಾರ್ಯಕ್ರಮದ ಯಶಸ್ಸಿಗೆ ಕಾರಣೀ ಭೂತರಾಗಿದ್ದಾರೆ. ಮಂಗಳೂರು ಆಕಾಶವಾಣಿ ಮತ್ತು ವಿವಿಧದೃಶ್ಯ ಮಾಧ್ಯಮಗಳಲ್ಲಿ ಕಾರ್ಯಕ್ರಮ ನೀಡಿರುವ ಹೆಗ್ಗಳಿಕೆ ಇವರಿಗಿದೆ. ದೇಶಭಕ್ತ ಎನ್‍ಎಸ್‍ಕಿಲ್ಲೆ ಪ್ರತಿಷ್ಥಾನದ ಕಾರ್ಯದರ್ಶಿಯಾಗಿ ಅನೇಕ ಸಾಂಸ್ಕ್ರತಿಕ  ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಂಯೋಜಿಸಿದ್ದಾರೆ. ವಿವಿಧ ಶೈಕ್ಷಣಿಕ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿ ಹಾಗೂ ಅನೇಕ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತೀರ್ಪುಗಾರರಾಗಿಯೂ ಭಾಗವಹಿಸಿರುತ್ತಾರೆ. 

ಪ್ರಶಸ್ತಿ ಗೌರವಗಳು: 2014ರಲ್ಲಿ ಲಯನ್ಸ್‍ ಅಂತರಾಷ್ಟ್ರೀಯ ಸಂಸ್ಥೆಯಿಂದ ಉದಯೋನ್ಮುಖ ಕಲಾವಿದ ಪ್ರಶಸ್ತಿ, 2016ರಲ್ಲಿ ಕನಕ ಕೀರ್ತನರಾಷ್ಟ್ರೀಯ ಪ್ರಶಸ್ತಿ, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಪುರಸ್ಕಾರಗಳು ಪ್ರಾಪ್ತವಾಗಿವೆ. 

‘ಕೆರೆಯ ನೀರನ್ನು ಕೆರೆಗೆಚೆಲ್ಲಿ ವರವ ಪಡೆದಂತೆ’ ಎಂಬ ದಾಸವಾಣಿಯ ತೆರದಲ್ಲಿ, ದೈವದತ್ತವಾಗಿ ಪ್ರಾಪ್ತಿಸಿದ ಕಲಾಪ್ರತಿಭೆಯನ್ನು ಮುಂದಿನ ಪೀಳಿಗೆಗೆ ಪಸರಿಸುವುದರ ಮೂಲಕ ವಿದ್ಯಾರ್ಥಿಗಳ ಭವಿಷ್ಯವನ್ನುರೂಪಿಸುವ ಕನಸನ್ನು ಹೊಂದಿದ್ದಾರೆ.  ಪ್ರಶಾಂತ ರೈ ಮುಂಡಾಲಗುತ್ತುರವರು ಭವಿಷ್ಯದಲ್ಲಿ  ಅಪೂರ್ವವಾದ ಸಾಧನೆಯನ್ನು ಮಾಡಲಿ ಎಂಬುದು ನಮ್ಮ ಶುಭ ಹಾರೈಕೆ.

Article By

ಸಹನಾ ರಾವ್,

ದ್ವಿತೀಯ ಬಿ.ಎಡ್,

ಸಂತ ಅಲೋಶಿಯಸ್‍ ಶಿಕ್ಷಣ ತರಬೇತಿ ಸಂಸ್ಥೆ, ಮಂಗಳೂರು