ಬಂಟ್ವಾಳ ಆ.30 ತುಳು ಭಾಷೆಯ ಎರಡು ಸಾವಿರ ವರ್ಷಗಳ ದೀರ್ಘ ಇತಿಹಾಸವಿರುವ ಭಾಷೆಯಾಗಿದೆ. ಇಂತಹ ತುಳು ಭಾಷೆಯು, ತುಳು ನಾಡಿನ ಸಂಸ್ಕ್ರತಿಯು ವಿಶೇಷ ಐತಿಹ್ಯವುಳ್ಳದ್ದು . ಇಲ್ಲಿ ಆಟಿ ತಿಂಗಳು ತನ್ನದೇ ಆದ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ. ಧಾರ್ಮಿಕವಾಗಿ, ಸಾಮಾಜಿಕವಾಗಿ ವಿಶೇಷತೆಗಳನ್ನು ಹೊಂದಿದ ನಾಡು ತುಳು ನಾಡಾಗಿದೆ ಎಂದು ಸಾಹಿತಿ, ರಂಗ ಭೂಮಿ ಕಲಾವಿದ ಚಂದ್ರಹಾಸ ಕಣತೂರು ಹೇಳಿದರು.
ಅವರು ಇಂದು ಬಂಟ್ವಾಳದ ವೆಂಕಟರಮಣ ಸ್ವಾಮಿ ಕಾಲೇಜಿನಲ್ಲಿ ಆಟಿಡೊಂಜಿ ದಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತಿದ್ದರು. ಇಲ್ಲಿನ ಆಚರಣೆಗಳು, ಅದರ ಮಹತ್ವಗಳನ್ನು ಇಂದಿನ ಜನಾಂಗ ಅರಿತುಕೊಳ್ಳಬೇಕು. ಆಗ ಮಾತ್ರ ಒಂದು ಭಾಷೆ ಸಂಸ್ಕ್ರತಿ ಬೆಳೆಯಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ| ಸುಯೋಗ ವರ್ಧನ್ ಡಿ.ಎಂ ರವರು ತುಳು ಭಾಷೆ ಈ ಮಣ್ಣಿನ ಭಾಷೆಯಾಗಿದೆ. ಈ ಭಾಷೆ ಮತ್ತು ಸಂಸ್ಕ್ರತಿಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಇಲ್ಲಿನ ವಿವಿಧ ಆಚರಣೆಗಳನ್ನು ನಾವಿಂದು ಅರಿತುಕೊಳ್ಳಬೇಕಾಗಿದೆ. ಆದರೆ ಆಧುನಿಕತೆಯ ಪರಿಣಾಮವಾಗಿ ಇಂತಹ ದಿನ ಮತ್ತು ಆಚರಣೆಗಳ ಮಹತ್ವ ಮರೆಯಾಗುತ್ತಿರುವುದು ವಿಷಾಧನೀಯ ಎಂದು ಹೇಳಿದರು.
ಕನ್ನಡ ವಿಭಾಗದ ಮುಖ್ಯಸ್ಥ ಶಿವಣ್ಣ ಪ್ರಭು ಕೆ ಸ್ವಾಗತಿಸಿದರು. ಐಕ್ಯೂಎಸಿ ಸಂಯೋಜಕರಾದ ಡಾ.ಟಿ.ಕೆ.ರವೀಂದ್ರನ್ ವಂದಿಸಿದರು. ಕನ್ನಡ ಉಪನ್ಯಾಸಕಿ ಅಪರ್ಣ ಕಾರ್ಯಕ್ರಮ ನಿರೂಪಿಸಿದರು.