ಹಳೆಯಂಗಡಿ: ರಾಜ್ಯದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರ ಹಿಂದುಳಿದ ವರ್ಗದವರ ಮೇಲೆ ದೌರ್ಜನ್ಯ ಎಸಗುತ್ತಿದ್ದು, ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ನೀಡಿದ ಸವಲತ್ತುಗಳನ್ನು ಹಿಂತೆಗೆದುಕೊಂಡು ಬೆಲೆ ಏರಿಕೆ ಮೂಲಕ ಜನತೆಯ ಮೇಲೆ ಸವಾರಿ ಮಾಡುತ್ತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರೋಪಿಸಿದರು.

ಅವರು ಹಳೆಯಂಗಡಿಯ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಬಿಜೆಪಿ ಸರಕಾರ ಹಿಂದುಳಿದ ವರ್ಗ ಅದರಲ್ಲೂ ಬಿಲ್ಲವ ಮತ್ತು ಈಡಿಗ ಸಮುದಾಯಕ್ಕೆ ಅನ್ಯಾಯ ಮಾಡಿದ್ದು ಗಣರಾಜ್ಯೋತ್ಸವ ಪರೇಡ್ ನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ನಿರಾಕರಿಸಿದ್ದೂ ಅಲ್ಲದೆ, ನಾರಾಯಣ ಗುರುಗಳ ವಿಚಾರಧಾರೆ ತಿಳಿಸಲು ಹಿಂದೇಟು ಹಾಕಿದ್ದಾರೆ.

ರಾಜ್ಯ ಸರಕಾರದ ನಿಗಮ ಮಂಡಳಿಯಲ್ಲಿ ಬಿಲ್ಲವ ನಿಗಮ ಮಾಡಲು ಹಿಂಜರಿದಿದ್ದು, ಕೊನೆ ಕ್ಷಣದಲ್ಲಿ ಚುನಾವಣೆ ದೃಷ್ಟಿಯನ್ನು ಇಟ್ಟುಕೊಂಡು ನಿಗಮ ನೀಡಿದ್ದರೂ ಬಜೆಟ್ ನಲ್ಲಿ ಅನುದಾನ ನೀಡದೆ ಯಾಮಾರಿಸಲಾಗಿದೆ ಎಂದು ಹೇಳಿದ ಅವರು, ಮಂಗಳೂರಿನ ವಿಮಾನ ನಿಲ್ದಾಣಕ್ಕೆ ಕೋಟಿ- ಚೆನ್ನಯ ಹೆಸರಿಡಲು ಹೋರಾಟ ಮಾಡಿದ್ದರೂ ಬಿಜೆಪಿ ಸರಕಾರ ನಿರ್ಲಕ್ಷ್ಯ ವಹಿಸಿದೆ.

ಬಳ್ಳುಂಜೆ ಕಾಂತಾಬಾರೆ- ಬೂದಾಬಾರೆ ಜನ್ಮಕ್ಷೇತ್ರವಿರುವ ಕೃಷಿ ಪ್ರದೇಶದಲ್ಲಿ ಸ್ಥಾಪಿಸುವ ಕೈಗಾರಿಕೆಗಳಿಗೆ ಶಾಸಕರ ಕುಮ್ಮಕ್ಕು ಜಗಜ್ಜಾಹೀರಾಗಿದ್ದು, ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕಾಂಗ್ರೆಸ್ ನಾಯಕರಾದ ಗುರುರಾಜ್ ಎಸ್. ಪೂಜಾರಿ, ದೀಪಕ್ ಪೆರ್ಮುದೆ, ಜನಾರ್ದನ್ ಬಂಗೇರ, ಯೋಗೀಶ್ ಕೋಟ್ಯಾನ್, ಪ್ರವೀಣ್ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.