ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ, ಡಿ. 12: ಹಲವಾರು ವರ್ಷಗಳ ತಿಕ್ಕಾಟದ ತರುವಾಯ ಕೊನೆಗೂ ಮಂಗಳೂರಿನಿಂದ ಮೂಡುಬಿದಿರೆ ಮಾರ್ಗವಾಗಿ ಕಾರ್ಕಳಕ್ಕೆ ಡಿಸೆಂಬರ್ 12ರಂದು ರಾಜ್ಯ ರಸ್ತೆ ಸಾರಿಗೆ ಬಸ್ಸು ಸಂಚರಿಸಲು ಪ್ರಾರಂಭವಾಗಿದೆ.
ಇಂದು ಸುಮಾರು ಅರ್ಧ ಗಂಟೆ ವಿಳಂಬವಾಗಿ ಮಂಗಳೂರಿನಿಂದ ಪ್ರಾರಂಭವಾದ ಬಸ್ಸು ಈಗಾಗಲೇ ಐದು ಟ್ರಿಪ್ಗಳನ್ನು ಮುಗಿಸಿರುತ್ತದೆ. ಜನರ ಸ್ಪಂದನೆಯೂ ಕೂಡ ಉತ್ತಮವಾಗಿದೆ ಎಂದು ಚಾಲಕ ನಿರ್ವಾಹಕರು ತಿಳಿಸಿರುತ್ತಾರೆ.
ಆದರೆ ಈಗಾಗಲೇ ಮಾಧ್ಯಮದಲ್ಲಿ ಪ್ರಕಟಿಸಿರುವಂತೆ ರಸ್ತೆ ಸಾರಿಗೆ ಬಸ್ಸುಗಳು ರಾಜ್ಯ ಹೆದ್ದಾರಿಯ ಬದಿಯಲ್ಲಿಯೇ ನಿಲ್ಲಿಸಿ ಮುಂದುವರೆಯುತ್ತಿರುವುದು ಪ್ರಯಾಣಿಕರಿಗೆ ಬಹಳ ತೊಂದರೆದಾಯಕವಾಗಿದೆ. ಆದುದರಿಂದ ರಾಜ್ಯ ರಸ್ತೆ ಸಾರಿಗೆಯ ಎಲ್ಲ ಬಸ್ವನ್ ಅವರು ಕೂಡ ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್ ನ ಒಳಗೆ ನಿಲ್ಲಿಸಿ ನಿಯಂತ್ರಣ ಕಚೇರಿಯ ಉಪಯೋಗವನ್ನು ಮಾಡುವುದು ಯುಕ್ತ. ಮೂಡುಬಿದಿರೆ ಪುರಸಭೆ ಹಾಗೂ ಪೊಲೀಸ್ ಇಲಾಖೆಯವರು ಅಲ್ಲಿರುವ ಇತರ ವಾಹನಗಳನ್ನು ನಿವಾರಿಸಿ ರಾಜ್ಯ ರಸ್ತೆ ಸಾರಿಗೆ ಹಾಗೂ ಹೊರ ರಾಜ್ಯದ ಬಸ್ಸುಗಳಿಗಾಗಿಯೇ ಇರುವ ಸ್ಥಳವನ್ನು ಒದಗಿಸಿಕೊಡುವುದು ಯೋಗ್ಯ ಎಂದು ಪ್ರಯಾಣಿಕರು ಪ್ರತಿಕ್ರಿಯಿಸಿದ್ದಾರೆ.