ಮಾರ್ಚ್ 31ರ ಬೆಳಿಗ್ಗೆ 8 ಗಂಟೆಗೆ ಮಂಡ್ಯದಿಂದ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ಸಾತನೂರು ಬಳಿ ತಡೆದು, ಚಾಲಕ ಇರ್ದಿಶ್ ಪಾಶಾರಿಗೆ ಚಿತ್ರಹಿಂಸೆ ಕೊಟ್ಟು ಕೊಲೆ ಮಾಡಿದ್ದ ಸಂಬಂಧ ಪೋಲೀಸರು ಸಂಘ ಪರಿವಾರದ ಐವರನ್ನು ಬಂಧಿಸಿದರು.
ತಲೆ ಮರೆಸಿಕೊಂಡಿದ್ದ ಮುಖ್ಯ ಆರೋಪಿ ಪುನೀತ್ ಕೆರೆಹಳ್ಳಿ, ಆತನ ಸಹಚರರಾದ ರಾಮನಗರದ ಗೋಪಿ, ತೀರ್ಥಹಳ್ಳಿ ಪವನ್ ಕುಮಾರ್, ಬಸವನಗುಡಿ ಪಿಲಿಂಗ್ ಅಂಬಿಗಾರ್, ರಾಯಚೂರಿನ ಸುರೇಶ್ ಕುಮಾರ್ ಬಂಧಿತರು. ಆರೋಪಿಗಳು ರಾಜಸ್ತಾನದ ಬನಸ್ವಾಡಕ್ಕೆ ಪರಾರಿಯಾಗಿದ್ದರು. ರಾಜಸ್ತಾನದ ಪೋಲೀಸರ ಸಹಾಯದಿಂದ ಕರ್ನಾಟಕದ ಪೋಲೀಸರು ಅವರನ್ನು ಬಂಧಿಸಿದರು.
ಏನೇ ನಡೆದರೂ ಪೋಲೀಸರಿಗೆ ಕರೆ ಮಾಡಿ, ಮಾಹಿತಿ ನೀಡಿ. ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಮನಗರ ಎಸ್‌ಪಿ ಕಾರ್ತಿಕ್ ರೆಡ್ಡಿ ಹೇಳಿದರು. ಆರೋಪಿಗಳನ್ನು ಚಾಕಚಕ್ಯತೆಯಿಂದ ಬಂಧಿಸಿದ ಪೋಲೀಸರಿಗೆ ಎಸ್‌ಪಿ ರೂ. 1 ಲಕ್ಷ ಬಹುಮಾನ ಘೋಷಿಸಿದರು.