ದೀಪಾವಳಿ ಪ್ರಮುಖ ಹಬ್ಬಗಳಲ್ಲಿ ಒಂದು. ಹಿಂದೂ, ಸಿಖ್, ಜೈನ, ಬೌದ್ಧ ಧರ್ಮದವರೂ ಮತಭೇದವಿಲ್ಲದೆ ಆಚರಿಸುವ ದೊಡ್ಡ ಹಬ್ಬ. 'ಅಸತೋಮ ಸದ್ಗಮಯ ತಮಸೋಮ ಜ್ಯೋತಿರ್ಗಮಯ' ಎಂದರೆ, ಅಸತ್ಯದಿಂದ ಸತ್ಯದೆಡೆಗೆ ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದು ಎಂದರ್ಥ. ದೀಪ ಎಂದರೆ ಸೊಡರು. ಆವಳಿ ಎಂದರೆ ಸಮೂಹ. ದೀಪಾವಳಿ ಎಂದರೆ ದೀಪಗಳ ಸಮೂಹ ಅಂದರೆ ಬೆಳಕಿನ ಪ್ರತೀಕ. ಅಜ್ಞಾನದ ತಮಸ್ಸನ್ನು ಕಳೆದುಕೊಂಡು ಜ್ಞಾನದ ಜ್ಯೋತಿಯೆಡೆಗೆ ನಡೆಯುತ್ತಾ ಅರ್ಥಪೂರ್ಣ ಬದುಕನ್ನು ಕಂಡುಕೊಳ್ಳುವುದು. ಸ್ಕಂದ ಪುರಾಣ ಮತ್ತು ಪದ್ಮ ಪುರಾಣಗಳಲ್ಲಿ ಈ ಹಬ್ಬ ಮತ್ತು ಆಚರಣೆಗಳ ಉಲ್ಲೇಖವಿದೆ.
Representational image
ನರಕ ಚತುರ್ದಶಿ ಎಂದರೆ, ನರಕಾಸುರನನ್ನು ಕೃಷ್ಣ ಸಂಹರಿಸಿದ ದಿನ. ನಮ್ಮನ್ನು ನರಕದಿಂದ ಪಾರು ಮಾಡಲು ಇರುವ ಹಬ್ಬ ಎಂಬ ನಂಬಿಕೆಗಳೂ ಇವೆ. ಬಲಿಪಾಡ್ಯಮಿ ಎಂದರೆ, ಅಸುರರ ಒಡೆಯನಾದ ಬಲಿಚಕ್ರವರ್ತಿಯನ್ನು ನಾರಾಯಣ ವಾಮನನ ಅವತಾರವೆತ್ತಿ ಬಂದು ಸುತಳಕ್ಕೆ ತಳ್ಳಿ, ದೇವತೆಗಳಿಗೆ ಮತ್ತೆ ಅಧಿಕಾರ ಕೊಡಿಸಿದ ದಿನ. ಅರ್ಥಾತ್ ಕೆಟ್ಟದ್ದರ ಅಂತ್ಯ ಮತ್ತು ಒಳಿತಿಗೆ ಜಯ ಎಂದು ಸಾರಿದ ದಿನ. ವಿಶೇಷವಾಗಿ ಈ ಎರಡೂ ದಿನಗಳಂದು ತಲೆಗೆ ಎಳ್ಳೆಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ನಮ್ಮ ಸಾಕಷ್ಟು ಪ್ರಾರಬ್ಧ ಕ್ಲೇಶಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಈ ದಿನಗಳಂದು ಕೃಷ್ಣ ಮತ್ತು ವಾಮನನ ರೂಪದಲ್ಲಿಯ ನಾರಾಯಣನನ್ನು ಹೆಚ್ಚು ಆರಾಧಿಸುವುದು ಮಹತ್ವಪೂರ್ಣ.
ದೀಪಾವಳಿ ಆಚರಣೆಯಲ್ಲಿ ಬರುವ ಪ್ರಮುಖ ಹಂತ ಲಕ್ಷ್ಮೀ ಪೂಜೆ. ದಕ್ಷಿಣಾಯಣ ದೇವತೆಗಳಿಗೆ ರಾತ್ರಿಯ ಕಾಲ ಎನ್ನುತ್ತಾರೆ. ಅಂದರೆ ಆಶಾಢ ಶುಕ್ಲ ಏಕಾದಶಿಯಂದು ನಾರಾಯಣ ಯೋಗನಿದ್ರೆಗೆ ಜಾರುತ್ತಾರೆ. ಜೊತೆಗೆ ಲಕ್ಷ್ಮಿಯು ಕೂಡ. ನಂತರ ಬರುವ ಉತ್ಥಾನ ದ್ವಾದಶಿಯಂದು ಏಳುತ್ತಾನೆ. ಪತಿಗಿಂತ ಮೊದಲು ಪತ್ನಿ ಏಳಬೇಕು ಎನ್ನುತ್ತದೆ ಶಾಸ್ತ್ರಗಳು. ಹಾಗಾಗಿ ನಾರಾಯಣನಿಗಿಂತ ಮೊದಲು ಲಕ್ಷ್ಮಿ ಎದ್ದು ನರಕ ಚತುರ್ದಶಿಯಂದು ಭೂಮಿಗೆ ಬರುತ್ತಾಳೆ. ಆದ್ದರಿಂದ ಅಂದು ಸಂಜೆ ದೀಪಗಳನ್ನು ಬೆಳಗಿಸುವುದು ವಾಡಿಕೆ. ಅಂದು ಯಾರ ಮನೆಗಳಲ್ಲಿ ದೀಪ ಬೆಳಗಿರುತ್ತದೆಯೊ ಅವರ ಮನೆಯಲ್ಲಿ ವರ್ಷ ಪೂರ್ತಿ ಜ್ಞಾನ ಮತ್ತು ಸಮೃದ್ಧಿಯ ದೀಪ ಬೆಳಗುತ್ತಿರಲಿ ಎಂದು ಲಕ್ಷ್ಮಿ ಹರಸುತ್ತಾಳಂತೆ.
ಬಲಿಪಾಡ್ಯದ ದಿನ ಬೆಳಗ್ಗೆ ವಿಶೇಷವಾಗಿ ಗೋಪೂಜೆ ಆಚರಣೆಯಿದೆ. ಅಂದು ಲಕ್ಷ್ಮಿಯ ಸನ್ನಿಧಾನ ಗೋವಿನಲ್ಲಿ ಹೆಚ್ಚು ಪ್ರಕಟಗೊಳ್ಳುತ್ತದೆ. ಆಗ ಗೋಮಾತೆಯ ಪೂಜಿಸಿ ಪ್ರಾರ್ಥನೆ ಮಾಡಿದಗ ಹೆಚ್ಚು ಅವಳ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಹೇಳುತ್ತಾರೆ. ಮತ್ತು ಅಂದು ಸಂಜೆ ಬಲಿ ಚಕ್ರವರ್ತಿಯು ಭೂಮಿಗೆ ಬರುತ್ತಾನೆ. ಅವನೊಳಗೆ ವಾಮನನನ್ನು ಅಂದು ಆರಾಧಿಸಬೇಕು. ಅಂದೂ ಕೂಡ ಮನೆಗಳಲ್ಲಿ ದೀಪಗಳನ್ನು ಬೆಳಗಿಸಬೇಕು. ಬಲಿಚಕ್ರವರ್ತಿ ಅಸುರನಾದರು ಮಹಾ ದೈವಭಕ್ತ. ಬಲಿಪಾಡ್ಯದಂದು ದೀಪ ಬೆಳಗಿಸುವ ಮನೆಯಲ್ಲಿ ಲಕ್ಷ್ಮಿ ಸ್ಥಿರವಾಗಿ ನೆಲೆಸಲಿ ಎಂದು ವಾಮನ ರೂಪಿ ಭಗವಂತನ ಬಳಿ ಬಲಿಯು ಕೇಳಿಕೊಂಡು ಆಶೀರ್ವದಿಸಿ ಹೋಗುತ್ತಾನಂತೆ.
ಇನ್ನೂ ಈ ಹಬ್ಬದಲ್ಲಿ ತರಹೇವಾರಿ ಸಿಹಿ ತಿನಿಸುಗಳನ್ನು ತಯಾರಿಸಿ ದೇವರಿಗೆ ನೈವೇದ್ಯ ಮಾಡಿ ನಂತರ ಎಲ್ಲರೂ ಸ್ವೀಕರಿಸುತ್ತಾರೆ. ದೀಪ ಬೆಳಗಿಸಲು ಎಳ್ಳೆಣ್ಣೆ, ತುಪ್ಪ ಮತ್ತು ಕೊಬ್ಬರಿ ಎಣ್ಣೆ ಶ್ರೇಷ್ಠವಾದದ್ದು. ದೀಪಗಳ ಬೆಳಕು ಮತ್ತು ಶಾಖ ನಕಾರಾತ್ಮಕತೆಯನ್ನು ತೊಲಗಿಸಿ, ಧನಾತ್ಮಕತೆಯನ್ನು ಪಸರಿಸುತ್ತದೆ. ಇಂದಿನ ದಿನಗಳಲ್ಲಿ ದೀಪಗಳ ಜಾಗವನ್ನು ಮೊಂಬತ್ತಿ ಮತ್ತು ವಿದ್ಯುತ್ ಅಲಂಕಾರಿಕ ಬೆಳಕುಗಳು ಆಕ್ರಮಿಸಿಕೊಂಡಿವೆ. ಇವುಗಳಿಗೆ ಶಾಸ್ತ್ರಗಳಲ್ಲಿ ಯಾವ ಮಹತ್ವವು ಇಲ್ಲ. ಮಣ್ಣಿನ / ಹಿತ್ತಾಳೆ ದೀಪಗಳನ್ನು ಹಚ್ಚುವುದು ಅರ್ಥಪೂರ್ಣ. ಬರಿ ಶೋಕಿಗಾಗಿಯಲ್ಲದೆ ಸಂಪ್ರದಾಯಗಳನ್ನು ಶಾಸ್ತ್ರಬದ್ದವಾಗಿ ಆಚರಿಸುವುದು ಮುಖ್ಯ.
ಆಚರಣೆಗಳು ಆಡಂಬರವಾಗುತ್ತಿವೆ. ಇಂತಹ ಆಧುನಿಕ ಮಾಯಾಜಾಲಕ್ಕೆ ಬಿದ್ದು ಎಲ್ಲೋ ನಮ್ಮ ಮನಶ್ಯಾಂತಿ ಸಂಬಂಧಗಳೊಳಗಿನ ಸಾಮರಸ್ಯತೆಯನ್ನು ನಾವೆಲ್ಲರೂ ಕಳೆದುಕೊಳ್ಳುತ್ತಿದ್ದೇವಾ ? ಹಿತಮಿತವಾಗಿ ಇತರರಿಗೆ ತೊಂದರೆಯಾಗದಂತೆ, ಪರಿಸರ ಕಾಳಜಿಯನ್ನೂ ಮನದಲ್ಲಿಟ್ಟುಕೊಂಡು ಹಬ್ಬವನ್ನು ಮಧುರವಾಗಿ ಆಚರಿಸೋಣ. ಹೆಚ್ಚೆಚ್ಚು ಪಟಾಕಿ ಸುಡುವ ಬದಲು ಹೆಚ್ಚೆಚ್ಚು ಹಣತೆಗಳನ್ನು ಬೆಳಗಿಸೋಣ. ಮನದ ಮೌಢ್ಯಾಂಧಕಾರಗಳನ್ನು ಕಳೆದುಕೊಂಡು ಬೆಳಕಿನ ನವ ಬದುಕಿನೆಡೆಗೆ ನಡೆವ ಸಂಕಲ್ಪ ಮಾಡೋಣ.
ಬೆಳಕಿನ ಹಬ್ಬದ ಶುಭಾಶಯಗಳು...
_ಪಲ್ಲವಿ ಚೆನ್ನಬಸಪ್ಪ