ಕೊರೊನಾ ಸಂಕಷ್ಟದ ಕಾಲದಲ್ಲೂ ಧರ್ಮ ರಾಜಕಾರಣ ಮಾಡುತ್ತಿರುವ ಹೊಣೆಗೇಡಿ ರಾಜಕಾರಣಿಗಳು ಒಂದೆಡೆಯಾದರೆ, ಕೊರೊನಾ ಸೋಂಕಿತ ಮೃತದೇಹದ ಬಳಿ ಆಪ್ತ ಸಂಬಂಧಿಕರೂ ಸುಳಿದಾಡದ ಸನ್ನಿವೇಶದಲ್ಲಿ ಮೃತರ ಅಂತ್ಯ ಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುವ ಮೂಲಕ ಮಂಗಳೂರಿನ ಟೀಂ- ಬಿ ಹ್ಯೂಮನ್  ಹಾಗೂ ಟೀಂ ಐ ವೈ ಸಿ ಯೂತ್ ತಂಡ ಮಾನವೀಯತೆ ಮೆರೆದಿದೆ.

ಇಂದು ನಗರದ ವೆನ್ಲಾಕ್ ಆಸ್ಪತ್ರೆ ಯಲ್ಲಿ ಕೊರೊನಾ ಪೀಡಿತರಾಗಿ ಮೃತಪಟ್ಟವರ ದೇಹವನ್ನು ಸಂಬಂಧಿಕರೇ ಮುಟ್ಟಲು ಭಯಪಟ್ಟಾಗ, ಅಲ್ಲಿಗೆ ಧಾವಿಸಿದ ಟೀಂ - ಬಿ ಹ್ಯೂಮನ್ ನ ಆಸಿಫ್ ಡೀಲ್ಸ್ ಮತ್ತು ಅವರ ಸಹೋದರ ಐವೈಸಿ ಯೂತ್  ತಂಡದ ಸುಹೈಲ್ ಕಂದಕ್ ನಾಲ್ಕು ಮೃತದೇಹಗಳನ್ನು  ಬೊಲೂರು, ಕದ್ರಿ, ನಂದಿಗುಡ್ಡೆಯ ಸ್ಮಶಾನದಲ್ಲಿ ಗೌರವಪೂರ್ಣವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ.

ಕೊರೊನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಟೀಂ ಬಿ ಹ್ಯೂಮೆನ್ ತಂಡವು ನಗರದ ಆಸ್ಪತ್ರೆಗಳು ಮತ್ತು ರೋಗಿಗಳೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರಿಗೆ ಅಗತ್ಯ ನೆರವು ನೀಡುತ್ತಿದೆ. ಪ್ರತೀ ದಿನ ಮೃತರಾಗುತ್ತಿರುವವರ ಅಂತ್ಯಕ್ರಿಯೆಯನ್ನು ಜಾತಿ, ಮತ, ಧರ್ಮ ಭೇದವಿಲ್ಲದೆ ನಡೆಸುತ್ತಿದೆ.

ಮಂಗಳೂರಿನಲ್ಲಿ ಕೊರೊನಾದ ಆತಂಕ ದಿನೇ ದಿನೇ ಹೆಚ್ಚುತ್ತಿದ್ದು, ಮೃತರ ಸಂಖ್ಯೆಯು ಅಧಿಕವಾಗುತ್ತಿದೆ. ಐಸಿಯು ಮತ್ತು ವೆಂಟಿಲೇಟರ್ ಇಲ್ಲದೇ ಆಂಬುಲೆಂನ್ಸ್ ನಲ್ಲಿ ಉಸಿರಾಡಲು ಸಾಧ್ಯವಾಗದೆ ಕೊನೆಯುಸಿರೆಳೆಯುವ ದುರಂತವೂ ನಡೆಯುತ್ತಿದೆ. ಹಾಗಾಗಿ ಜನರು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕಾದ ಅಗತ್ಯವಿದೆ. 

ಮೃತಪಟ್ಟ ವ್ಯಕ್ತಿಗಳ ಶವವನ್ನೂ ಅವರ ಸಂಬಂಧಿಕರು‌ ಮುಟ್ಟಲು ಭಯಪಡುವಂತಹ ಕರುಣಾಜನಕ ಸ್ಥಿತಿ ನಿರ್ಮಾಣ ವಾಗಿದೆ. ಇಂತಹ ಪರಿಸ್ಥಿತಿಯಲ್ಲಿ  ಪ್ರತಿಯೊಬ್ಬರೂ ತಮ್ಮ ಬದುಕನ್ನು ಸುರಕ್ಷಿತಗೊಳಿಸಬೇಕಾದ ಅಗತ್ಯವಿದೆ ಎಂದು ಆಸಿಫ್ ಡೀಲ್ಸ್ ತಿಳಿಸಿದ್ದಾರೆ