ತೆಂಕಣ ಟರ್ಕಿ ಮತ್ತು ಬಡಗಣ ಸಿರಿಯಾ ಪ್ರದೇಶದಲ್ಲಿ ನಿನ್ನೆ ನಡೆದ ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆಯದಿದ್ದ ನೆಲನಡುಕದಲ್ಲಿ 2,300ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ.
ಡೆನ್ಮಾರ್ಕ್, ಗ್ರೀನ್‌ಲ್ಯಾಂಡ್‌ಗಳಲ್ಲೂ ಈ ಭೂಕಂಪದ ಭೂ ನಡುಗುವಿಕೆ ಅನುಭವಕ್ಕೆ ಬಂದಿದೆ. ಟರ್ಕಿ ಭಾಗದಲ್ಲಿ 1,212 ಮಂದಿ ಸಾವಿಗೀಡಾಗಿರುವುದಾಗಿ ಟರ್ಕಿಯ ಅಧ್ಯಕ್ಷರಾದ ರಿಸೆಪ್ ತಯ್ಯಿಬ್ ಎರ್ಡೋಗಾನ್ ತಿಳಿಸಿದರು. ಸಮರೋಪಾದಿಯಲ್ಲಿ ಪರಿಹಾರ ಕಾರ್ಯ ನಡೆದಿರುವುದಾಗಿಯೂ ಅವರು ತಿಳಿಸಿದರು. ಭಾರತ ಸಹಿತ 47 ದೇಶಗಳು ಪರಿಹಾರ ಘೋಷಿಸಿದ್ದು, ಇನ್ನೇನು ಅವೆಲ್ಲ ಟರ್ಕಿಯತ್ತ ಮುಖ ಮಾಡಿವೆ.
ಸಿರಿಯಾದ ಬಂಡುಕೋರರ ಹಿಡಿತದ ಪ್ರದೇಶದಲ್ಲಿ 783 ಜನರು ಸಾವಿಗೀಡಾಗಿರುವುದಾಗಿ ತಿಳಿದು ಬಂದಿದೆ. ಸತ್ತಿರುವವರಲ್ಲಿ ಸಿರಿಯನರ ಸಂಖ್ಯೆಯೇ ಹೆಚ್ಚು. ನೆಲನಡುಕ ನಡೆದ ದಕ್ಷಿಣ ಟರ್ಕಿ ಪ್ರದೇಶದಲ್ಲಿ ಸಿರಿಯಾದಿಂದ ನಿರಾಶ್ರಿತರಾಗಿ ಬಂದವರು, ಓಡಿ ಬಂದವರೇ ಬಹುತೇಕ ವಾಸ ಮಾಡುತ್ತಿದ್ದರು.
ಮೊದಲು ಒಂದು ಭೂಕಂಪ ಕುಲುಕಿದ ಬಳಿಕ ಅರ್ಧ ಗಂಟೆಯಲ್ಲಿ ಮತ್ತೆರಡು ನೆಲನಡುಕಗಳು ನಡುಗಿಸಿವೆ. ಅವು ಕೂಡ 7 ತೀವ್ರತೆಗೆ ಹತ್ತಿರದಲ್ಲಿದ್ದವು. ಅಲ್ಲದೆ ಅರ್ಧ ಗಂಟೆಯ ಅವಧಿಯಲ್ಲಿ 50ಕ್ಕೂ ಹೆಚ್ಚು ಬಾರಿ ಭೂಮಿಯು ಭೀಕರವಾಗಿ ತೊಟ್ಟಿಲು ತೂಗಿದೆ.