ಮಂಗಳೂರು: ಸಿಟಿ ಆಸ್ಪತ್ರೆಗೆ ಸೇರಿದ ನರ್ಸಿಂಗ್ ಕಾಲೇಜಿನಲ್ಲಿ ವಿಷಾಹಾರ ಸೇವನೆಗೆ ಸಿಕ್ಕ 130 ವಿದ್ಯಾರ್ಥಿನಿಯರು ಆರೋಗ್ಯ ಬಿಗಡಾಯಿಸಿದ್ದರಿಂದ ಫಾದರ್ ಮುಲ್ಲರ್, ಎಜೆ, ಕೆಎಂಸಿ ಆಸ್ಪತ್ರೆಗಳಿಗೆ ಸೇರ್ಪಡೆಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿದ್ಯಾರ್ಥಿನಿಯರ ಪ್ರಕಾರ ಎರಡು ದಿನಗಳಿಂದ ಆಹಾರದಲ್ಲಿ ವ್ಯತ್ಯಯ ಕಂಡು ಬಂದಿತ್ತು; ನೀರು ಶುದ್ಧ ಇರಲಿಲ್ಲ. ಫೆಬ್ರವರಿ 6ರ ಮುಂಜಾವ ಹೊಟ್ಟೆ ನೋವು, ಭೇದಿ, ತಲೆ ಸುತ್ತುವಿಕೆ ಮೊದಲಾದ ತೊಂದರೆ ಕಾಣಿಸಿಕೊಂಡುದರಿಂದ ವಿದ್ಯಾರ್ಥಿನಿಯರು ಆಸ್ಪತ್ರೆಗಳಿಗೆ ಸೇರತೊಡಗಿದರು.
ಸಂಜೆಯ ಹೊತ್ತಿಗೆ ಆ ಸಂಖ್ಯೆ 130 ದಾಟಿತು. ದಕ್ಷಿಣ ಕನ್ನಡ ಜಿಲ್ಲೆ, ಕೇರಳ ಅಲ್ಲದೆ ಬೇರೆ ರಾಜ್ಯಗಳ ವಿದ್ಯಾರ್ಥಿನಿಯರೂ ಅದರಲ್ಲಿ ಇದ್ದರು. ಸಂಜೆ ಕೆಲವು ಪೋಷಕರು ಆಹಾರದ ವಿರುದ್ಧ ಪ್ರತಿಭಟನೆ ನಡೆಸಿದರು.
ಸೋಮವಾರ ರಾತ್ರಿ ಪೋಲೀಸು ಕಮಿಶನರ್ ಎನ್. ಶಶಿಕುಮಾರ್ ಆಸ್ಪತ್ರೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು. ವಿಷಾಹಾರದ ಬಗೆಗೆ ವಿಚಾರಣೆ ನಡೆದಿದೆ.