ಮುಂಬಯಿ:  ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್  ಇಂಡಿಯಾ ಮತ್ತು ಗ್ಲೋಬಲ್ ಪೀಸ್ ಫೌಂಡೇಶನ್ ಸಂಯುಕ್ತವಾಗಿ ಇತ್ತೀಚೆಗೆ (ಜ.19) ಇಂಡೋನೇಷ್ಯಾದ  ಬಾಲಿಯಲ್ಲಿನ ಅಷ್ಟೂನ್ ಸಭಾಂಗಣದಲ್ಲಿ 47ನೇ ಅಂತರಾಷ್ಟ್ರೀಯ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಆಯೋಜಿಸಿದ್ದವು. ಹೂವಿನ ಕುಂಡಕ್ಕೆ ನೀರನ್ನೇರಿಯುವ ಮೂಲಕ ಸಮಾರಂಭಕ್ಕೆ  ರಾಯಚೂರುನ ಕುಬೇರ ಪ್ಯಾಲೇಸ್‍ನ ಆಡಳಿತ ನಿರ್ದೇಶಕ  ಡಾ| ಈ. ಆಂಜನೇಯ ಚಾಲನೆ ನೀಡಿದರು. 

ಆಂಜನೇಯ ಮಾತನಾಡಿ, ಹಚ್ಚ ಹಸುರಿನಿಂದ ಕೂಡಿರುವ ಬಾಲಿ ದ್ವೀಪ ನಿಸರ್ಗದ ಕೊಡುಗೆಯಾಗಿದೆ. ಇಲ್ಲಿಯ ಜನರು  ಸ್ನೇಹ ಮಯಿಗಳು ಮತ್ತು ಸದಾ ಹಸನ್ಮುಖಿಗಳು. ಇಂತಹ ಪರಿಸರದಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಗಳು ಯಶಸ್ವಿ ಆಗುವುದರಲ್ಲಿ ಸಂಶಯವಿಲ್ಲ ಎಂದು  ಅಭಿಪ್ರಾಯಪಟ್ಟರು.

ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಪರಿಷತ್ ಇಂಡಿಯಾ ಸ್ಥಾಪಕ ಅಧ್ಯಕ್ಷ ಕೆ.ಪಿ ಮಂಜುನಾಥ್ ಸಾಗರ್ ಭಾಷಣಗೈದು 2004 ರಿಂದ ವಿವಿಧ ದೇಶಗಳ ಕನ್ನಡ ಸಂಘಗಳು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೆ ನೀಡಿದ ಬೆಂಬಲ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಈ ಕಾರ್ಯಕ್ರಮದ ಅನನ್ಯತೆಯನ್ನು ಅರಿತ  ವಿದೇಶಿ ಸಂಘಟನೆಗಳು ಸಹಯೋಗ ನೀಡುತ್ತಿರುವುದು ನಮ್ಮ ಪ್ರಯತ್ನಕ್ಕೆ ದೊರೆತ ಜಯವಾಗಿದೆ ಹಾಗೂ ಸಾಂಸ್ಕೃತಿಕ ಸೌಹಾರ್ದತೆಗೆ ಗಟ್ಟಿತನವಿರುತ್ತದೆ  ಎಂದರು.

ಗೌರವ ಆಮಂತ್ರಿತರಾದ ನಿವೃತ್ತ ಜಿಲ್ಲಾಧಿಕಾರಿ ಡಾ| ಡಿ.ಎಸ್ ವಿಶ್ವನಾಥ್  ಮಾತನಾಡಿ ನಮ್ಮ ಜೀವನದಲ್ಲಿ ತಂದೆ ತಾಯಿ ಶಿಕ್ಷಕರು ಆದಿ ಗುರುಗಳಾಗಿರುತ್ತಾರೆ. ಸ್ನೇಹಿತರು ಮತ್ತು ಸಹೋದ್ಯೋಗಿಗಳು ಕಾರಣ ಗುರುಗಳಾಗುತ್ತಾರೆ ಮತ್ತು ಬದುಕಿಗೆ ಪರಿಪೂರ್ಣತೆಯ  ಮಾರ್ಗದರ್ಶನ ಕೊಡುವ ಹಿತೈಷಿಗಳು ಆದ್ಯ ಗುರುಗಳಾಗುತ್ತಾರೆ. ಈ ಮೂವರನ್ನು ನಾವು ಎಂದೂ ಮರೆಯಬಾರದು ಎಂದರು.

ವಿಶೇಷ ಆಮಂತ್ರಿತರಾದ  ಇಂಡೋನೇಷ್ಯಾ ಬಾಲಿಯ ಬಿಜಿನೆಸ್  ಅಡ್ವೈಸರ್  ನ್ಯೂ ಮ್ಯಾನ್ ಸ್ರಿ ಮಾತನಾಡಿ, ಇಂಡ್ಯನೇಷಿಯಾ ಮತ್ತು ಇಂಡಿಯಾದ ಬಾಂಧವ್ಯಕ್ಕೆ ಬಹಳ ಪುರಾತನವಾದ ಇತಿಹಾಸವಿದೆ. ಮತ್ತು ಈ ಎರಡು ದೇಶಗಳ ನಡುವಿನ ಕಲೆ ಮತ್ತು ಸಂಸ್ಕೃತಿಗಳಲ್ಲಿ ಹೆಚ್ಚಿನ ಸಾಮ್ಯತೆ ಕಂಡು ಬರುತ್ತದೆ ಎಂದರು.

ಬೆಳಗಾವಿಯ ಲೇಖಕಿ ಅರ್ಚನಾ ಅಥಣಿ ಅವರ ಪ್ರವಾಸ ಕಥನ ಮೋಹಕ ಮಾಲ್ಡೀವ್ಸ್ ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅಂತರಾಷ್ಟ್ರೀಯ ಸಾಂಸ್ಕೃತಿಕ ಸೌರಭ ಸಮಿತಿಯ ಗೌರವಾಧ್ಯಕ್ಷ ಡಾ| ಪಲ್ಲವಿ ಮಣಿ (ಸುಬ್ರಮಣಿ ) ವಿದೇಶಿ ನೆಲದಲ್ಲಿ ಉತ್ತಮ ಕೃತಿ ಒಂದನ್ನು ಬಿಡುಗಡೆ ಮಾಡುವ ಅವಕಾಶ ದೊರಕಿದ್ದು ನನ್ನ ಸೌಭಾಗ್ಯ, ಇತ್ತೀಚಿನ ವರ್ಷಗಳಲ್ಲಿ ಪ್ರವಾಸ ಕಥನಗಳು ಸಾಕಷ್ಟು ಸಂಖ್ಯೆಯಲ್ಲಿ ಹೊರ ಬರುತ್ತಿವೆ. ಇದೊಂದು ಉತ್ತಮ ಬೆಳವಣಿಗೆ. ಈ ಮೂಲಕ ಜಗತ್ತನ್ನು ಸುತ್ತುವ ಪ್ರವಾಸಿಗಳಿಗೆ ನಮ್ಮದೇ ಭಾಷೆಯಲ್ಲಿ ಮಾಹಿತಿ ಸಿಕ್ಕರೆ ಹೆಚ್ಚು ಅನುಕೂಲವಾಗುತ್ತದೆ ಎಂದರು.

ವಿಜಾಪುರದ  ಡಾ| ನಾಗೂರ್ ಎಜ್ಯುಕೇಶನ್ ಟ್ರಸ್ಟ್‍ನ ಅಧ್ಯಕ್ಷ ಡಾ| ಕೆ.ಬಿ ನಾಗೂರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಲೆ, ಸಂಸ್ಕೃತಿ, ಶಾಂತಿ ಮತ್ತು ಸೌಹಾರ್ತೆಯನ್ನು ಘೋಷಿಸುವ ಸಂಘಟನೆಗಳ ಬೆಳವಣಿಗೆಗೆ ನಾವೆಲ್ಲರೂ ಸಹಕಾರ ನೀಡೋಣ ಎಂದು ಕರೆ ಕೊಟ್ಟರು.

ಅತಿಥಿü ಅಭ್ಯಾಗತರುಗಳಾಗಿ ಸೂರತ್ ಕನ್ನಡ ಸಂಘದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ, ಮೈಸೂರ್‍ನ ಚಿತ್ರ ಕಲಾವಿದ ಡಾ| ಪ್ರಶಾಂತ್, ಶೃಂಗೇರಿಯ ಶ್ರೀ ಶಂಕರ ಶಿಲ್ಪ ಕಲಾ ಕೇಂದ್ರದ ಮುಖ್ಯಸ್ಥ ಮಹೇಶ್ ಭಟ್ ಹುಲುಗಾರು ಮತ್ತು ಲೇಖಕಿ ಡಾ| ಅರ್ಚನಾ ಅಥಣಿ ಬೆಳಗಾವಿ ಸಾಂದರ್ಭಿಕವಾಗಿ ಮಾತನಾಡಿದರು.

ವಿವಿಧ ಕ್ಷೇತ್ರದ ಸಾಧಕ ಮಹನೀಯರುಗಳಾದ ಪ್ರಭಾ ಶಾಸ್ತ್ರಿ ಶಿವಮೊಗ್ಗ, ರಾಧಾಕೃಷ್ಣ ಶೆಟ್ಟಿ ಸೂರತ್, ಚಿಂತಾ ರವೀಂದರ್ ಹೈದರಾಬಾದ್, ಕೊಸುರು ರತ್ನಂ, ಪ್ರಶಾಂತ್ ಮೈಸೂರು ಮತ್ತು ವಿದುಷಿ ಮಾಧವಿ ಡಿ.ಕೆ ದಾವಣಗೆರೆ ಇವರಿಗೆ ಏಷ್ಯಾ ಪೆಸಿಫಿಕ್ ಐಕಾನಿಕ್ ಅವಾರ್ಡ್  ಪ್ರಧಾನ ಮಾಡಲಾಗಿ ಅಭಿನಂದಿಸಲಾಯಿತು.  

ಬಾಲಿಯ ಸ್ಥಳೀಯ ಕಲಾವಿದರ ಸಾಂಪ್ರದಾಯಿಕ ನೃತ್ಯ ಬರೊಂಗ್, ದಾವಣಗೆರೆಯ ನಮನ ಅಕಾಡೆಮಿ ನಿರ್ದೇಶಕಿ  ವಿದುಷಿ ಮಾಧವಿ ಡಿ.ಕೆ ಅವರು ಕುವೆಂಪು ರಚನೆ ಎಲ್ಲಾದರೂ ಇರು ಸಾಹಿತ್ಯಕ್ಕೆ  ಸಂಯೋಜಿಸಿದ ನೃತ್ಯ ರೂಪಕ ಪ್ರದರ್ಶಿಸಿದರು. ಪೂರ್ಣಿಮಾ ಸತೀಶ್ ಮತ್ತು ಆರತಿ ಸುರೇಶ್ ಅವರು ನೃತ್ಯ,   ಪ್ರೊ| ಬಿಂಡಿಗ ನವಿಲೇ ಭಗವಾನ್  ಕವನ ವಾಚಿಸಿದ್ದು ಪ್ರಶಾಂತ್ ಮೈಸೂರು ಅವರು ವಿಶ್ವ ಸೌಹಾರ್ದತೆ ಕುರಿತ ಸಂದೇಶ ನೀಡಿದರು.