ಮಂಗಳೂರು, ಎಪ್ರಿಲ್ 19: ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್‌ರಿಗೆ ದೇಶ ಮುಖ್ಯವಾಗಿತ್ತು, ಈಗಿನ ಮೋದಿಯವರಿಗೆ ಚುನಾವಣೆ ಮುಖ್ಯವಾಗಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ವಚನಭ್ರಷ್ಟ ಬಿಜೆಪಿ ಆಡಳಿತ ಇದೆ ಎಂದು ಮಾಜೀ ಮಂತ್ರಿ ರಮಾನಾಥ ರೈ ಅವರು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಆರೋಪಿಸಿದರು.
ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೊರೋನಾ ವಿಚಾರದಲ್ಲಿ ಬಾಯಿಮಾತಿನ ಉಪಚಾರ ನಡೆಸಿವೆ, ವೈಜ್ಞಾನಿಕ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಬಿಟ್ಟರೆ ಮಂಗಳೂರಿನಲ್ಲಿ ಮುನ್ನೆಚ್ಚರಿಕೆ ಅಗತ್ಯ. ಜನರಿಗೆ ತೊಂದರೆ ಆಗದ ಕಟ್ಟುನಿಟ್ಟು ಬೇಕು. ಇಲ್ಲಿ ಉಸ್ತುವಾರಿ ಮಂತ್ರಿ, ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಸಮನ್ವಯ ಇಲ್ಲ. ವಾಹನ ತಪಾಸಣೆ ಟ್ರಾಫಿಕ್ ಜಾಮ್ ತರುತ್ತಿದೆ. ಆಸ್ಪತ್ರೆಗೆ ಹೋಗುವವರು ಒದ್ದಾಡಿದ್ದು ನೋಡಿದೆ. ಪರ್ಯಾಯ ವ್ಯವಸ್ಥೆ ಅಗತ್ಯ. ಪ್ರತಿ ಜಿಲ್ಲಾ ಮಟ್ಟದಲ್ಲಿ ಸರ್ವ ಪಕ್ಷಗಳ ಸಭೆ ಕರೆದು ಚರ್ಚಿಸಬೇಕು ಎಂದು ರೈ ಹೇಳಿದರು.
ಕೊರೋನಾ ಮೊದಲ ಅಲೆಯಲ್ಲಿ ಜನರನ್ನು ರಕ್ಷಿಸಿದ್ದು ಸಿದ್ದರಾಮಯ್ಯ ಸರಕಾರದ ಅನ್ನ ಭಾಗ್ಯ ಮತ್ತು ಇಂದಿರಾ ಕ್ಯಾಂಟೀನ್‌ಗಳು. ಮನಮೋಹನ್ ಸಿಂಗ್ ಕಾಲದ ಆಹಾರ ಭದ್ರತೆ, ಮಹಾತ್ಮಾ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಹಾಗೂ ಆರೋಗ್ಯ ಸೇವೆಗಳು ಹೊರತು ಮೋದಿ ಇಲ್ಲವೇ ಯಡಿಯೂರಪ್ಪ ಸರಕಾರದ ಕಾರ್ಯಕ್ರಮಗಳಲ್ಲ. ಈ ಬಾರಿಯಾದರೂ ಈ ಜವಾಬ್ದಾರಿ ಇಲ್ಲದ ಸರಕಾರಗಳು ಎಚ್ಚೆತ್ತುಕೊಳ್ಳಲಿ ಎಂದು ರಮಾನಾಥ ರೈ ಹೇಳಿದರು.
ಸಿ. ಟಿ. ರವಿ ಎಂಬ ಕುಲಗೋತ್ರವಿಲ್ಲದವ ಹೇಳುತ್ತಾನೆ ರಾಹುಲ್, ಪ್ರಿಯಾಂಕ, ಸೋನಿಯಾ ನಾಯಕರಲ್ಲ, ಮೋದಿ, ಯಡಿಯೂರಪ್ಪ ನಾಯಕರು ಎಂದು. ಪ್ರಿಯಾಂಕಾರು ಹಿರಿಯರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದವರು, ಈ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿ ಜೈಲಿಗೆ ಹೋದವರು. ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದೆ ಎಂದು ಸುಳ್ಳು ಹೇಳುವ ಮೋದಿ ಎಲ್ಲಿ? ಯುಪಿಎ ಅಂಗ ಪಕ್ಷಗಳೆಲ್ಲ ಪ್ರಧಾನಿಯಾಗಲು ಸೋನಿಯಾರನ್ನು ಕೇಳಿಕೊಂಡಾಗ ಅದನ್ನು ಬಿಟ್ಟ ತ್ಯಾಗಿ ಸೋನಿಯಾ ಗಾಂಧಿ ಎಲ್ಲಿ? ಇಂಥ ಉದಾಹರಣೆ ಜಗತ್ತಿನಲ್ಲಿಯೇ ಇಲ್ಲ. ಇಂದಿರಾ, ರಾಜೀವ್ ಗಾಂಧಿಯವರು ದೇಶಕ್ಕಾಗಿ ಪ್ರಾಣ ತೆತ್ತರು ಈ ಬಿಜೆಪಿ ನಾಯಕರು ತೆತ್ತದ್ದೇನು ಎಂದು ರೈ ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರ ರೈತರ ಸಾಲ ಮನ್ನಾ ಮಾಡಿದರೆ, ಮೋದಿ ಸರಕಾರ ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಹೆಲ್ತ್‌ವರ್ಕರ್‌ಗಳಿಗೆ, ಪ್ರವಾಹ ಬಾಧಿತರಿಗೆ, ರೈತರಿಗೆ ಮಾಡಿದ್ದ ವಾಗ್ದಾನ, ಯುವಕರಿಗೆ ಉದ್ಯೋಗ ಭರವಸೆ ಯಾವುದನ್ನೂ ಈಡೇರಿಸದ ಬಿಜೆಪಿ ಸರಕಾರಕ್ಕೆ ಮುಖ ಇದೆಯೇ? ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಾರೆ, ಕಾಂಗ್ರೆಸ್‌ನಲ್ಲಿ ಬೆಂಕಿ ಬಿದ್ದಿದೆ, ಅದು ಮುಳುಗುವ ಹಡಗು ಎಂದು. ಇವರ ಹಿರಿಯರೆಲ್ಲ ಹಳೆಯ ಕಾಂಗ್ರೆಸ್ ಹಡಗಿನಲ್ಲೇ ಬಂದವರು. ನಾನು ಹೇಳುತ್ತೇನೆ, ಬಿಜೆಪಿಯಲ್ಲಿ ಹೆಗ್ಗಣಗಳು ಸತ್ತು ವಾಸನೆ ಬರುತ್ತಿದೆ. ಮೊದಲು ಅದನ್ನು ಸರಿ ಮಾಡಲಿ, ನಮ್ಮ ಪಕ್ಷದ ವಿಚಾರ ಬೇಡ ಎಂದು ರಮಾನಾಥ ರೈ ಅಂದರು.
ಪತ್ರಿಕಾಗೋಷ್ಠಿಯಲ್ಲಿ ಶಶಿಧರ ಹೆಗ್ಡೆ, ಅಪ್ಪಿ, ಲುಕ್ಮಾನ್, ಟಿ. ಕೆ. ಸುಧೀರ್, ಸಾಹುಲ್ ಹಮೀದ್, ಹರಿನಾಥ್, ನೀರಜ್ ಪಾಲ್, ನವೀನ್ ಡಿಸೋಜಾ, ಪೃಥ್ವಿರಾಜ್ ಮೊದಲಾದವರು ಉಪಸ್ಥಿತರಿದ್ದರು.