ಲೇಖನ ರಾಯಿ ರಾಜಕುಮಾರ ಮೂಡುಬಿದಿರೆ
ಕಂಡ ಕಂಡಲ್ಲಿ ಗುಡ್ಡಗಳ ಕೆರೆತ :-ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಇತ್ಯಾದಿ ಜಿಲ್ಲೆಗಳ ಪರಿಸ್ಥಿತಿ ಗಮನಿಸಿದರೆ ಯಾರಿಗೂ ಈ ಸಂಗತಿ ತಿಳಿದು ಬರುತ್ತದೆ. ಆದರೆ ನಮ್ಮ ಶಾಸಕರು, ಸಂಸದರು, ಅಧಿಕಾರಿಗಳು ಪ್ರಕೃತಿಯ ಪ್ರಾಕೃತಿಕ ರಚನೆಗಳನ್ನು ವಿರೂಪಗೊಳಿಸಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂದು ಜನ ಸಾಮಾನ್ಯರು ಆಡಿಕೊಳ್ಳುತ್ತಿದ್ದಾರೆ. ಜನರ ಈ ಮಾತಿಗೆ ಸಾಕಷ್ಟು ಪರೋಕ್ಷ ಮಾಹಿತಿಯೂ ದೊರಕುತ್ತಿದೆ.
ರಸ್ತೆ ಬದಿಯ ತೋಡುಗಳೇ ಮಾಯ :-ರಾಷ್ಟ್ರೀಯ ಹೆದ್ದಾರಿಯ ರಚನೆಯ ಸಂದರ್ಭದಲ್ಲಿ ಸ್ವಲ್ಪ ತೊಂದರೆಗಳು ಆಗಿರಬಹುದು. ಆದರೆ ಸಂಪೂರ್ಣವಾಗಿ ರಚನೆಯ ತರುವಾಯ ಎಲ್ಲಾ ರೀತಿಯ ಸಮರ್ಪಕತೆ ಗೋಚರಿಸುತ್ತದೆ. ಆದರೆ ರಾಜ್ಯ, ಜಿಲ್ಲಾ, ತಾಲೂಕು ಹೆದ್ದಾರಿಗಳನ್ನು ನೋಡಿಕೊಳ್ಳಬೇಕಾದ ಲೋಕೋಪಯೋಗಿ ಇಲಾಖೆ ಎಲ್ಲಿದೆ ಎಂದು ಭೂತಗನ್ನಡಿ ಹಿಡಿದು ಹುಡುಕಬೇಕೇನೋ. ಇಲ್ಲವಾದಲ್ಲಿ ಪುತ್ತಿಗೆಯಿಂದ ಪಾಲಡ್ಕ ತನಕದ ರಸ್ತೆ, ಪೇಪರ್ ಮಿಲ್ ನಿಂದ ಬಂಟ್ವಾಳ ತನಕದ ರಸ್ತೆ, ವಿಶಾಲ ನಗರದಿಂದ ಗುರುವಾಯನಕೆರೆ ತನಕದ ರಸ್ತೆಗಳೇ ಹೆಚ್ಚಿನ ಕಡೆಗಳಲ್ಲಿ ಚರಂಡಿಯಾಗಿದೆ. ಲೋಕೋಪಯೋಗಿ ಇಲಾಖೆ ಯಾವ ಲೋಕದ ಉಪಯೋಗಕ್ಕೆ ಇರುವುದು ಸ್ವಾಮಿ? ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್ ಗಳ ಅಧಿಕಾರಿಗಳಿಗೆ ಸೆಪ್ಟೆಂಬರ್ ತರುವಾಯ ಚರಂಡಿಗಳನ್ನು ಸರಿಪಡಿಸುವ ನಿಯತ್ತು ಲಕ್ಷ ಲಕ್ಷ ಎಣಿಸುವ, ಸಾರ್ವಜನಿಕರು ಸಾವಿರ-ಲಕ್ಷ ಲಂಚ ಪಡೆಯುತ್ತಾರೆ ಎಂದು ದೂರುವ ಇವರಿಗೆಲ್ಲಿಂದ ಬರಲು ಸಾಧ್ಯ? ಹಣ ಎಣಿಸಲೇ ಪುರುಸೊತ್ತೇ ಇಲ್ಲವಲ್ಲ.
ಈ ಸಂದರ್ಭದಲ್ಲಿ ನಮ್ಮನ್ನು ನಾವೇ ಎದೆ ಮುಟ್ಟಿ, ಮನಸ್ಸು ತಟ್ಟಿ ಪ್ರಶ್ನಿಸಿ ಕೊಳ್ಳ ಬೇಕು. ಏಕೆಂದರೆ ಹಣವಿರುವವರು ಯಾರನ್ನೂ ಲೆಕ್ಕಿಸದೆ ರಸ್ತೆ ಬದಿಯ ತೋಡುಗಳನ್ನು ಮುಚ್ಚಿ ಇಂಟರ್ ಲಾಕ್ ಹಾಕಿ ಸಮತಟ್ಟು ಗೊಳಿಸಿ ತಮ್ಮ ಅಂಗಡಿ, ಐಷಾರಾಮಿ ಮನೆಗಳಿಗೆ ನೇರ ಸಂಪರ್ಕ ಮಾಡಿಕೊಳ್ಳುತ್ತಾರೆ. ಇರುವ ನೀರೆಲ್ಲ ರಸ್ತೆಗೇ ಹೋಗಬೇಕು ತಾನೇ? ಬಡವರು ಈ ಪ್ರಕಾರ ಮಾಡಿದರೆ ಹೊಂಡ ಮುಚ್ಚುವಾಗಲೇ ಎಡತಾಕುವ ವಿವಿಧ ಅಧಿಕಾರಿಗಳು ಹಣವಂತರಿಂದ ಪಡೆದು ಕಣ್ಣು ಮುಚ್ಚಿ ಕುಳಿತು ಅಥವಾ ಪರ್ಯಾಯ ಮಾರ್ಗಗಳನ್ನು ಹೇಳಿಕೊಟ್ಟು ಬಚಾವಾಗಿಸುತ್ತಾರೆ. ಇಲ್ಲೆಲ್ಲ ಯಾರನ್ನು ದೂಷಿಸೋಣ, ಜನರನ್ನೇ, ಅಧಿಕಾರಿಗಳನ್ನೇ? ಯಾರನ್ನು?
ಜಲ ಜೀವನ ದಿಂದ ಜನ ಜೀವನ ದುಸ್ತರ:- ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲ ಜೀವನ ಮಿಷನ್ ಬಹಳ ಉತ್ತಮ ಯೋಜನೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವ ಜನರ ಬೇಕಾಬಿಟ್ಟಿ ಕಾರ್ಯ ವೈಖರಿ ಸಾರ್ವಜನಿಕ ದೂಷಣೆಗೆ ಒಳಗಾಗಿದೆ. ಆರೇಳು ಅಡಿ ಆಳದಲ್ಲಿ ಹಾಕಬೇಕಿರುವ ಪೈಪ್ ಗಳನ್ನು ಎರಡು -ಮೂರು ಅಡಿ ಆಳದಲ್ಲಿ ಅಳವಡಿಸಿರುವುದು. ಗುಂಡಿಯ ಮಣ್ಣನ್ನು ರಸ್ತೆಗೆ ಹಾಕಿದ ಕಾರಣ ಅಕಾಲಿಕ ಮಳೆಗೆ ರಸ್ತೆಗಳೆಲ್ಲ ಕೊಚ್ಚೆಯಲ್ಲಿ ರಾಡಿ ಎದ್ದು ಹೋಗಿದೆ. ಕಾಮಗಾರಿಯನ್ನು ವೀಕ್ಷಿಸಬೇಕಾದ ಜಿಲ್ಲಾ, ತಾಲೂಕು, ಪುರಸಭಾ ಅಧಿಕಾರಿಗಳು ತಮಗೆ ಸಂಬಂಧವೇ ಇಲ್ಲ ಎಂಬಂತೆ ಇದ್ದಾರೆ.
ಅಂತೂ ಪ್ರಕೃತಿಯ ಮೇಲೆ ಮನುಷ್ಯನ ಅಮಾನುಷ ಹೊಡೆತಗಳಿಂದ ಸ್ವತಃ ಮನುಷ್ಯನೇ ಒದ್ದಾಡುತ್ತಿದ್ದಾನೆ.