ಆರೋಗ್ಯ-ಅನಾರೋಗ್ಯ, ರೋಗ-ನಿರೋಗ, ಕಷ್ಟ-ಪರಿಹಾರ, ದುಡಿಮೆ-ವಿಶ್ರಾಮ, ಸಶ್ವರ-ನಶ್ವರ, ಸತ್ಯ-ಮಿಥ್ಯೆ, ಸತ್ವ-ಜೊಳ್ಳು ಗಳೆಂಬ ಭಾಸ-ವಿರೋಧಾಭಾಸಗಳ ನಡುವೆಯೂ ಬದುಕು ಜಟಕಾ ಬಂಡಿಯಂತೆ ನಡೆಯುತ್ತಲೇ ಇದೆ, ನಡೆಯುತ್ತಲೇ ಇರುತ್ತದೆ. ಅಥವಾ ಸಮರ್ಪಕವಾಗಿ ಹೇಳಬೇಕೆಂದರೆ ಎಳೆದೊಯ್ಯಲ್ಪಡುತ್ತಿದೆ. ಕಳೆದ ಒಂದು ವರ್ಷದಿಂದ ಮಹಾ ಮಾರಿ ಕೊರೊನಾ ತನ್ನ ಎರಡೆರಡು ಅಲೆಗಳಲ್ಲಿ ಲಕ್ಷಗಟ್ಟಲೆ ಉಸಿರನ್ನು ಹಿಡಿದು ಆಮ್ಲಜನಕದ ಶ್ರೇಷ್ಠತೆಯ ಬಗೆಗೆ ಪಾಠವನ್ನು ಕಲಿಸಿದೆ. ಪ್ರಕೃತಿಯ ಎಲ್ಲವೂ ತನ್ನ ಅಧೀನ ಎಂದು ಬೀಗುತ್ತಿದ್ದ ಮಾನವ ತನ್ನ ಬದುಕಿಗಾಗಿ ಆಮ್ಲಜನಕ ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎಂದು ತಿಳಿಯ ಹತ್ತಿದ್ದಾನೆ.

ಪ್ರಕೃತಿಯ ಗಿಡ, ಮರ, ಹಸಿರು-ಹೊನ್ನನ್ನು ಕಡಿದು ನಿರ್ನಾಮ ಮಾಡಿ ಸಿಮೆಂಟಿನ ಬೆಂಗಾಡು ಮಾಡಿದ ಮನುಷ್ಯ ಇದೀಗ ಇದ್ದ-ಬದ್ದ ಎಲ್ಲಾ ಕಾರ್ಖಾನೆಗಳಲ್ಲಿ ಕೃತಕ ಆಮ್ಲಜನಕವನ್ನು ಉತ್ಪಾದಿಸುವ ಪ್ರಯತ್ನ ಮಾಡುತ್ತಿದ್ದಾನೆ. ಅದಕ್ಕಾಗಿ ಲಕ್ಷ-ಕೋಟಿಗಳಲ್ಲಿ ಹಣವನ್ನು ವ್ಯಯಿಸುತ್ತಿದ್ದಾನೆ ಅಥವಾ ವ್ಯಯಿಸುವಂತೆ ಮಾಡಿದ್ದಾನೆ. ಪ್ರಕೃತಿಯಲ್ಲಿರುವ ಗಿಡ-ಮರಗಳು ಕೋಟಿಗಟ್ಟಲೆ ಹಣದಷ್ಟು ನೈಸರ್ಗಿಕ ಆಮ್ಲಜನಕವನ್ನು ಪ್ರತೀ ದಿನ ನೀಡುತ್ತಿವೆ. ವಾತಾವರಣದಲ್ಲಿರುವ ಇಂಗಾಲದ ಡೈ ಆಕ್ಸೈಡ್ ನ್ನು ಹೀರಿ ನಮಗಾಗಿ ಆಮ್ಲಜನಕವನ್ನು ಅವು ನೀಡುತ್ತಿವೆ. ಅಂತಹ ಉದಾರ ಹೃದಯದ ಗಿಡ-ಮರಗಳನ್ನು ನಾವು ಎಗ್ಗಿಲ್ಲದೆ ಕಡಿದು ನಾಶ ಮಾಡುತ್ತಿದ್ದೇವೆ.

ವಿವಿಧ ಕಾರ್ಯ ಯೋಜನೆಗಳನ್ನು ಕಾರ್ಯ ರೂಪಕ್ಕೆ ತರುವಾಗ ಅತ್ಯಂತ ಕಡಿಮೆ ಪ್ರಮಾಣದ ಗಿಡ-ಮರಗಳು ನಾಶವಾಗುವಂತೆ ಯೋಜನೆ ರೂಪಿಸುವ ಬದಲು ಹಣ ಮಾಡುವ ದಂಧೆಗೆ ಇಳಿದ ಮನುಷ್ಯ ಅತ್ಯಂತ ಹೆಚ್ಚು ಮರಗಳು ಕಡಿಯಲ್ಪಡುವಂತಹ ಯೋಜನೆಗಳಿಗೆ ಒಪ್ಪಿಗೆ ನೀಡುತ್ತಿದ್ದಾನೆ. ಅಂತಹ ಯೋಜನೆಗಳಿಗೆ ಒಪ್ಪಿಗೆ ನೀಡುವ ಮೊದಲೇ ಇಂತಿಷ್ಟು ಮರಗಳನ್ನು ಇಂತಿಷ್ಟು ಎಕೆರೆ ಪ್ರದೇಶದಲ್ಲಿ ಬೆಳೆಸಿ ತೋರಿಸಿದ ತರುವಾಯವೇ ಒಪ್ಪಿಗೆ ಎಂದು ನಿರ್ದಿಷ್ಟ ಪಡಿಸಿರುತ್ತಿದ್ದಲ್ಲಿ ಹೆಚ್ಚಿನ ಯೋಜನೆಗಳು ಪ್ರಾರಂಭಗೊಳ್ಳುವ ಮೊದಲೇ ಸಾಕಷ್ಟು ಗಿಡ-ಮರಗಳ ಪ್ರಕೃತಿ ಭಾರತದಲ್ಲಿ ನೆಲೆಗೊಳಿಸಲ್ಪಡುತ್ತಿತ್ತು. ಆದರೆ ಅಂತಹ ನಿಷ್ಠತೆ, ಪ್ರಾಮಾಣಿಕತೆ, ದೃಢತೆ, ಕಾಳಜಿ, ಹೊಣೆಗಾರಿಕೆ ಯಾರಲ್ಲೂ ಕಂಡುಬರುತ್ತಿಲ್ಲ. ಎಲ್ಲರಲ್ಲೂ ‘ಸಿಕ್ಕಿದಷ್ಟು ಬಾಚಿಕೊಂಡವನೇ ಜಾಣ’ ಎಂಬ ಮನೋಭಾವ ಕಂಡುಬರುತ್ತಿದೆ.

ದೇಶದ ಎಲ್ಲಾ ಕಾರ್ಖಾನೆಗಳಲ್ಲೂ ಇದೀಗ ಕೃತಕ ಆಮ್ಲಜನಕ ಉತ್ಪಾದನೆ ಭರದಿಂದ ಸಾಗುತ್ತಿದೆ. ಇಷ್ಟಾದರೂ ಖಾಯಿಲೆಯಿಂದ ಬಳಲುತ್ತಿರುವವರ ಆವಶ್ಯಕತೆ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂದು ಗೋಗರೆಯುತ್ತಿದ್ದಾರೆ. ಹಾಗಿದ್ದರೆ ದೇಶದಲ್ಲಿರುವ ಎಲ್ಲರು ಉಪಯೋಗಿಸುತ್ತಿರುವ ಆಮ್ಲಜನಕದ ಮೌಲ್ಯ ಎಷ್ಟಾಗಬಹುದು? ಒಂದು ವೇಳೆ ದೇಶದಲ್ಲಿರುವ ಎಲ್ಲರಿಗೂ ಆಮ್ಲಜನಕದ ಅವಶ್ಯಕತೆ ಬಿದ್ದಲ್ಲಿ ಪರಿಸ್ಥಿತಿ ಹೇಗಿರಬಹುದು? ಊಹಿಸುವುದೂ ಅಸಾಧ್ಯ. ಆದುದರಿಂದ ದೇಶದ ಪ್ರತಿಯೊಬ್ಬರೂ ತಮ್ಮ ಅಗತ್ಯದ  ಸ್ಥಳಗಳಲ್ಲಿ, ತಮಗಿರುವ ಲಭ್ಯತೆಯ ಪ್ರದೇಶಗಳಲ್ಲಿ, ಪ್ರತಿಯೊಂದೂ ಊರಿನ ಎಲ್ಲಾ ಖಾಲಿ ಪ್ರದೇಶಗಳಲ್ಲಿ ಆಯಾ ಊರಿನ ಪ್ರಮುಖರು, ಸ್ಥಳೀಯ ಸ್ವ-ಸರ್ಕಾರಗಳ ಪ್ರಜಾ ಪ್ರತಿನಿಧಿಗಳು, ಶಾಸಕರು, ಸಂಸದರು ಸೇರಿಕೊಂಡು ಗಿಡ-ಮರ ಬೆಳೆಸಿ, ಉಳಿಸುವ ಪ್ರತಿಜ್ಞೆ ಮಾಡಬೇಕು. ಇದು ಒಂದು ಹಂತವಾದರೆ ಇನ್ನೊಂದು ಹಂತದಲ್ಲಿ- ಇರುವ ಎಲ್ಲಾ ಪ್ರದೇಶಗಳೂ ಸ್ವಚ್ಛ-ಸುಂದರ-ಸುಮನೋಹರ ಆಗಿರುವಂತೆ ನೋಡಿಕೊಳ್ಳಬೇಕು.

ಸ್ವಚ್ಛ-ಸುಂದರ ಪರಿಸರವನ್ನು ಮನುಷ್ಯ ತನ್ನ ಕೊಳಕು-ಕಶ್ಮಲಗಳಿಂದ ಹಾಳು ಮಾಡಲು ಪ್ರಾರಂಭಿಸಿದನು. ಸಿಕ್ಕಾಪಟ್ಟೆ ತಿರುಗಾಡಿ, ಲಂಗು-ಲಗಾಮು ರಹಿತವಾಗಿ ಸಿಕ್ಕ-ಸಿಕ್ಕಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯಗಳನ್ನು ಎಸೆದು ಕೆರೆ, ಹಳ್ಳ, ಕೊಳ್ಳ, ತೋಡು, ನದಿ, ಕಾಲುವೆಗಳೆಲ್ಲದರನ್ನೂ ರಾಡಿ ಎಬ್ಬಿಸಿದನು. ಅಂತಹ ರಾಡಿ-ಕೆಸರು-ಕೊಳಕನ್ನು ಕಡಿಮೆಗೊಳಿಸಿಕೊಳ್ಳುವುದಕ್ಕಾಗಿ ಪ್ರಕೃತಿಯೇ ಇಂದು ಎಲ್ಲವನ್ನೂ ಬಂದ್ ಮಾಡಿಸಿದೆ ಎಂದುಕೊಳ್ಳಬಹುದೇನೋ ಎನ್ನುವಂತಾಗಿದೆ. ಮೋಜು-ಮಸ್ತಿಗಳೆಲ್ಲವೂ ಇಂದು ತಹಬಂದಿಗೆ ಬಂದಿದೆ. ಉಂಡು-ತಿಂದು-ಒಗೆದು-ಬಿಸುಟು ಮಾಡಿದ ರಂಪಾಟಗಳೆಲ್ಲವೂ ಇಂದು ಹಿಡಿತಕ್ಕೆ ಬಂದಿವೆ. ಪ್ರತಿಯೊಂದಕ್ಕೂ ಸರಕಾರ ಲಗಾಮು ಹಾಕಿದೆ. ಇಲ್ಲದಿದ್ದಲ್ಲಿ ಮನುಷ್ಯ ಕೇಳಲಾರ ಎಂದು ತಿಳಿದಿರುವ ಕಾರಣ ಕಫ್ರ್ಯೂ, ಲಾಕ್ ಡೌನ್ ನಂತಹ ಕ್ರಮಗಳನ್ನು ಅನಿವಾರ್ಯವಾಗಿ ಜಾರಿಗೆ ತಂದಿದೆ.

ಕೋಟಿಗಟ್ಟಲೆ ಜನರು ಕಷ್ಟ ಅನುಭವಿಸುತ್ತಿದ್ದರೂ ಕೂಡ ಇಂತಹ ಲಗಾಮು ಅನಿವಾರ್ಯ ಹಾಗೂ ಅತ್ಯಾವಶ್ಯಕ ಆಯಿತು. ಇಷ್ಟಿದ್ದರೂ ಕೂಡಾ, ಹಲವಾರು ಮಂದಿ ಬದುಕಿಗಾಗಿ ಒದ್ದಾಡುತ್ತಾ ಇರುವ ಇಂತಹ ಸಂದರ್ಭದಲ್ಲಿ ಕೂಡಾ ಅಂತಹವರಿಗೆ ಸಹಾಯ, ಸಹಕಾರ ಮಾಡುವ ಬದಲು ಕೆಲವರು ಮೋಜು, ಮಸ್ತಿಯಲ್ಲಿ ನಿರತರಾಗಿರುವದು ನಿಜಕ್ಕೂ ಆಶ್ಚರ್ಯವನ್ನು ಹುಟ್ಟಿಸುತ್ತದೆ. ಮಾಧ್ಯಮಗಳಲ್ಲಿ ಅಂತಹ ಹಲವಾರು ಘಟನೆಗಳು ನಿತ್ಯ ಬಿತ್ತರಗೊಳ್ಳುತ್ತಿವೆ. ಅದಕ್ಕಿಂತಲೂ ಬಹಳ ಆಶ್ಚರ್ಯವನ್ನು ಹುಟ್ಟಿಸುವ ಸಂಗತಿಗಳೆಂದರೆ ಸರಕಾರ ಜನರ ಜೀವ ಉಳಿಸುವುದಕ್ಕಾಗಿ ಉಚಿತವಾಗಿ ಆಸ್ಪತ್ರೆಗಳಿಗೆ ಒದಗಿಸಿದ ಇಂಜೆಕ್ಷನ್ ಇತ್ಯಾದಿ ಔಷಧೀಯ ಪರಿಕರಗಳನ್ನು ಕಾಳಸಂತೆಯಲ್ಲಿ ಮಾರಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವದು. ಸರಕಾರಗಳು ಎಷ್ಟೇ ಮುತುವರ್ಜಿ ವಹಿಸಿ ಏನೇ ಪ್ರಯತ್ನಗಳನ್ನು ಮಾಡಿದರೂ ಕೂಡಾ ಸ್ಥಳೀಯ ನಾಗರಿಕರು ಎಚ್ಚೆತ್ತುಕೊಳ್ಳದೆ ಹೊರತು ಇಂತಹ ಚೆಲ್ಲಾಟವಾಡುವವರನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಜನರ ಹಣದಲ್ಲಿ ಸರಕಾರ ಖರೀಧಿಸಿ ಆಸ್ಪತ್ರೆಗೆ ಉಚಿತವಾಗಿ ಒದಗಿಸಿದ ಔಷಧೀಯ ಸಲಕರಣೆಗಳನ್ನು ಸಮರ್ಪಕವಾಗಿ ವ್ಯವಸ್ಥೆಗೊಳಿಸದೇ ಇರುವದನ್ನು ಸ್ಥಳೀಯರು ಕಂಡು ಹಿಡಿದು ಪ್ರಶ್ನಿಸಬೇಕಾಗಿದೆ. ಆದರೆ ಅಂತಹ ಪ್ರಕ್ರಿಯೆ ನಡೆಯಬೇಕಿದ್ದರೆ ಯಾವ್ಯಾವಾಗ ಎಷ್ಟೆಷ್ಟು ಪರಿಕರಗಳು, ಸಲಕರಣೆಗಳು ಎಲ್ಲೆಲ್ಲಿಗೆ ಮಂಜೂರಾಗಿವೆ, ನೀಡಲ್ಪಟ್ಟಿವೆ ಎನ್ನುವ ಮಾಹಿತಿ ಸಾರ್ವಜನಿಕವಾಗಿ ಮಾಧ್ಯಮಗಳಲ್ಲಿ ಪ್ರಕಟಗೊಳ್ಳಬೇಕು. ಆಗ ಅಲ್ಲಲ್ಲಿಯ ಎಚ್ಚೆತ್ತ ನಾಗರಿಕರು, ಮಾಧ್ಯಮದ ಮಂದಿ ಆ ಬಗೆಗೆ ಜಾಗರೂಕರಾಗಿದ್ದು ಹದ್ದಿನ ಕಣ್ಣಿಡಲು ಸಾಧ್ಯ. ಸರಕಾರ, ಸಂಸ್ಥೆ ಯಾವುದೇ ಇರಲಿ, ಜನರ ಹಣ ವ್ಯರ್ಥವಾಗಿ ಪೋಲಾಗದಂತೆ ನಡೆಯುವ ಪಾಠವೇ ಮುಖ್ಯ.

ಹೋರಾಟ, ಆಂದೋಲನ, ಸಮ್ಮೇಳನ, ಸಭೆ, ಎಂಬಿತ್ಯಾದಿ ಹೆಸರಲ್ಲಿ ಜನರ ದಿಕ್ಕು ತಪ್ಪಿಸಿ ಮಹಾ ಮಾರಿ ರೋಗ-ರುಜಿನಗಳನ್ನು, ಸಾಂಕ್ರಾಮಿಕಗೊಳಿಸುವದು ಸಲ್ಲದು. ಏಕೆಂದರೆ ಕೊರೊನಾದಂತಹ ರೋಗಕ್ಕೆ ಯಾವುದೂ ತಡೆ ಒಡ್ಡದು. ಅದರೊಂದಿಗೆ ಒಳನುಗ್ಗಲು ಪ್ರಯತ್ನಿಸುತ್ತಿರುವ ಫಂಗಸ್ ಖಾಯಿಲೆಗಳು ಮತ್ತಷ್ಟು ಅಪಾಯಕಾರಿ ಎಂದು ವೈದ್ಯ ಜಗತ್ತು ಸಾರುತ್ತಿದೆ. ಇಂತಹ ಸಂದರ್ಭದಲ್ಲಿ ವಿನಾ ಕÁರಣ ‘ಕಾಲ ಮೇಲೆ ಚಪ್ಪಡಿ ಕಲ್ಲು ಎಳೆದುಕೊಳ್ಳು’ವ ಬದಲು ಸರಕಾರದೊಂದಿಗೆ ಸಹಕರಿಸಿ ಮಾರಿ ಮೂಲೋತ್ಪಾಟನೆಗೊಂಡ ತರುವಾಯವೇ ಎಲ್ಲದರ ಬಗೆಗೆ ಯೋಚಿಸಬೇಕಾಗಿದೆ ಎಂಬ ಪಾಠ ಪ್ರತಿಯೊಬ್ಬರಿಗೂ ಅವಶ್ಯಕ.

ಕಲಿಯುವವರ, ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ರಮಗಳು ಕಳೆದ ಎರಡು ವರ್ಷಗಳಿಂದ ದಾರಿ ತಪ್ಪಿದೆ. ಮಕ್ಕಳು ಒಟ್ಟಾಗಿ ಸೇರಲಾಗದೇ, ಕೂಡಿ ನಲಿಯಲಾಗದೇ, ಒಂಟಿತನದಿಂದ ಬಳಲಿ ಒದ್ದಾಡುತ್ತಿದ್ದಾರೆ. ಮತ್ತೆ ಅಂತಹ ಕೂಡಿ-ನಲಿದು-ಸೇರಿ-ಕುಣಿದು-ಕಲಿಯುವ ಪರಿಸ್ಥಿತಿ ಬರಬೇಕಿದ್ದರೆ ಖಂಡಿತವಾಗಿಯೂ ಕೊರೊನಾ ಮತ್ತೆಂದೂ ಒಕ್ಕರಿಸದಂತಹ ಹಂತಕ್ಕೆ ಭಾರತ ಬೆಳೆಯಬೇಕಾಗಿದೆ. ಅಂತಹ ಹಂತ ಬರಬೇಕಿದ್ದರೆ ಪ್ರತಿಯೊಬ್ಬರೂ ಸರಕಾರದೊಂದಿಗೆ ಕೈಜೋಡಿಸಿ ಉಳಿದೆಲ್ಲಾ ಕಾರ್ಯಕ್ರಮಗಳಿಗೂ ಸಂಪೂರ್ಣ; ಪೂರ್ಣ ವಿರಾಮ ನೀಡಬೇಕಾಗಿದೆ. ಬದುಕಿಗಾಗಿ, ಮುಂದಿನ ಪೀಳಿಗೆಯ ಉಳಿವಿಗಾಗಿ, ಪ್ರತಿಯೊಬ್ಬರೂ ಕೇವಲ, ಕೇವಲ ಆರೋಗ್ಯ ಕಾರ್ಯಕ್ರಮ ಒಂದೇ ಮಂಚೂಣಿಯಲ್ಲಿದ್ದು ಪ್ರತಿಯೊಬ್ಬರೂ ಲಸಿಕೆ ಪಡೆದು, ವೈರಾಣು ಹರಡದಂತೆ ಮಾಸ್ಕ್ ಧರಿಸಿ, ಅಂತರ ಕಾಪಾಡಿ ಕೊಂಡು ಇತರರಿಗೆ ಮಾರ್ಗದರ್ಶನದ ಪಾಠವನ್ನು ವೈಚಿತ್ರ್ಯಕರವಾಗಿ ಮಾಡಬೇಕಾದ ಅನಿವಾರ್ಯತೆ ಬಂದಿದೆ.

ಲೇಖನ: ರಾಯೀ ರಾಜಕುಮಾರ್,ಮೂಡುಬಿದಿರೆ

(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,)