ಶಿಕ್ಷಣ ಹೊರಳು ಹಾದಿಯಲ್ಲಿ ಮುನ್ನಡೆಯುತ್ತಿದೆ. ಇದುವರೆಗಿನ ಶಿಕ್ಷಣ ನೀತಿಯನ್ನು, ವಿಧಾನವನ್ನು, ಕ್ರಮವನ್ನು ತರ್ಜುಮೆಗೊಳಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಏಕ ಪ್ರಕಾರವಾಗಿ ಇಡೀ ದೇಶದಲ್ಲಿ ಒಂದೇ ತೆರನಾಗಿ ಅಳವಡಿಸಿ ಜಾರಿಗೊಳಿಸಲು ಯೋಜಿಸಿ ಕಾನೂನಾತ್ಮಕವಾಗಿ ಸ್ವೀಕರಿಸಲಾಗಿದೆ. ಅದನ್ನು ಅನುಷ್ಠಾನಗೊಳಿಸಲು ನಿಧಾನವಾಗಿ ಒಂದೊಂದೇ ರಾಜ್ಯಗಳು ಸೂಕ್ತ ಸಂದರ್ಭದಲ್ಲಿ, ಯೋಗ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಏಕೆಂದರೆ ಶಿಕ್ಷಣದ ಜಾರೀಕರಣ ಕೇಂದ್ರ ಹಾಗೂ ರಾಜ್ಯ ಎರಡರ ಮಧ್ಯೆ ಹಂಚಲ್ಪಟ್ಟಿದೆ. ಇಂತಹ ಹೊರಳು ಹಾದಿಯಲ್ಲಿರುವಾಗಲೇ ದೇಶದೆಲ್ಲೆಡೆ ವ್ಯಾಪಿಸಿದ ಕೊರೊನಾದ ಹೊಡೆತ ಇನ್ನಿಲ್ಲದಂತೆ ಮಕ್ಕಳನ್ನು ಶಾಲಾ ದೇಗುಲದಿಂದ ದೂರವಿರಿಸಿದೆ. ಕೆಲವಾರು ಶಿಕ್ಷಕರು ಕೊರೊನಾದ ಹಿಡಿತದಿಂದ ಜೀವ ಕಳೆದುಕೊಂಡರೆ, ಇನ್ನು ಕೆಲವರು ಪಾರಾಗಿ ನವಜೀವನವನ್ನು ಪಡೆದಿದ್ದಾರೆ. ಹೀಗಾಗಿ ಇನ್ನಷ್ಟು ತೊಂದರೆ, ಶಿಕ್ಷಕರ ಜೀವದ ಮೇಲೆ ಆಗಬಾರದೆಂಬ ದೃಷ್ಟಿಯಿಂದ ಸರಕಾರ ಅನಿವಾರ್ಯವಾಗಿ ಶಿಕ್ಷಕರಿಗೆ ಶಾಲೆಗೆ ಬರುವುದಕ್ಕೆ ಮಾತ್ರ ಶೈಕ್ಷಣಿಕ ರಜೆಯನ್ನು ಘೋಷಿಸಿದೆ. ಇಷ್ಟಾದರೂ ಕೂಡಾ ರಾಜ್ಯ ಸರಕಾರ ಹತ್ತನೇ, ಪಿ.ಯು., ಹಾಗೂ ದೇಶಾದ್ಯಂತ ಪಿ.ಯು. ತರಗತಿ ಪರೀಕ್ಷೆಗಳನ್ನು ಜೀವಂತವಾಗಿರಿಸಿದ್ದರಿಂದ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಜಾರಿಯಲ್ಲಿದೆ. ಹತ್ತನೇ ಹಾಗೂ ಪಿ.ಯು. ಪಾಠಮಾಡುವ ಶಿಕ್ಷಕರು ಆನ್ ಲೈನ್ ನಲ್ಲಿ ನಿರಂತರ ವಿದ್ಯಾರ್ಥಿಗಳ ಸಂಪರ್ಕದಲ್ಲಿದ್ದಾರೆ.

ಹೊಸ ಶಿಕ್ಷಣ ನೀತಿ ಜಾರಿಯಲ್ಲಿ ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಗುಣ ಮಟ್ಟದ ಪ್ರಯೋಗಾತ್ಮಕ ಹಾಗೂ ಸ್ವತ: ನೋಡಿ, ಮಾಡಿ, ಅರಿತು, ಕಲಿಯುವ ಶಿಕ್ಷಣಕ್ಕೆ ಪ್ರಾಧsÁನ್ಯತೆಯನ್ನು ನೀಡಲಾಗಿದೆ. ಎಂದರೆ ಮಕ್ಕಳ, ಹಕ್ಕುಗಳಿಗೆ ರಕ್ಷಣೆ ನೀಡಲು ಒತ್ತು ಕೊಡಲಾಗಿದೆ. ಸಾಮಾನ್ಯವಾಗಿ ಕೆಲವಾರು ಶಾಲೆ, ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ. ಹಲವಾರು ಕಡೆ ಅವಶ್ಯಕ ಉತ್ತಮ ಪಾಠೋಪಕರಣ, ಪೀಠೋಪಕರಣ ಸಾಮಾಗ್ರಿಗಳ ಕೊರತೆ ಇದೆ. ಕೆಲವಾರು ಕಡೆ ಸೂಕ್ತ ಸಂಖ್ಯೆಯ ಉತ್ತಮ ಬಹಿದೆರ್ಸೆಯ ಆಲಯಗಳ ಕೊರತೆ ಇವೆ. ಇನ್ನು ಕೆಲವು ಕಡೆ ವಿದ್ಯಾರ್ಥಿಗಳು ಸಲೀಸಾಗಿ ಹತ್ತಿ ಇಳಿಯಲು ಅಗಲವಾದ ಹಾಗೂ ಉತ್ತಮ ಮಟ್ಟದ ಮೆಟ್ಟಿಲುಗಳ ಕೊರತೆ. ಅಗಲ ಕಿರಿದಾದ ತರಗತಿ ಕೋಣೆಗಳು. ಇಂತಹ ಎಲ್ಲ ಕೊರತೆಗಳ ಪರಿಹಾರಕ್ಕಾಗಿ ಸಾರ್ವಜನಿಕರ ಸಹಕಾರ ಪಡೆಯಬೇಕಾಗುತ್ತದೆ. ಅಂತಹ ಎಲ್ಲವನ್ನೂ ಪೂರೈಸಿಕೊಂಡು ಮಕ್ಕಳ ಹಕ್ಕುಗಳ ರಕ್ಷಿಸುವ ಗುರುತರ ಜವಾಬ್ದಾರಿಯನ್ನು ಪೂರೈಸಲು ನೂತನ ಶಿಕ್ಷಣ ಕ್ರಮ ಜಾರಿಗೊಳ್ಳುತ್ತಿದೆ.

ಸರಕಾರ ಉತ್ತಮ ಗುಣಮಟ್ಟದ ಪಠ್ಯ ಪುಸ್ತಕಗಳನ್ನು ಉಚಿತವಾಗಿ ವಿದ್ಯಾರ್ಥಿಗಳಿಗೆ ಪೂರೈಸುತ್ತಿದೆ. ಆದರೆ ನಗರ-ಗ್ರಾಮಾಂತರ, ಸರಕಾರಿ-ಅನುದಾನಿತ ಎಂಬ ಹಣೆಪಟ್ಟಿಯನ್ನು ಅಳಿಸಿ ಹಾಕಿ ಸಮಾನತೆಯನ್ನು ಜಾರಿಗೊಳಿಸಲು ರಾಷ್ಟ್ರೀಯಕರಣ ಅನಿವಾರ್ಯವಾಗಿದೆ. ಅಂತಹ ರಾಷ್ಟ್ರೀಯಕರಣದಿಂದ ಶಿಕ್ಷಕರ ನಡುವಿರುವ ಹಲವಾರು ತಾರತಮ್ಯಗಳು ನಿವಾರಣೆಗೊಂಡು ಉತ್ತಮ, ನುರಿತ ಶಿಕ್ಷಕರು ಸಾಕಷ್ಟು ಸಂಖ್ಯೆಯಲ್ಲಿ ಸರಕಾರಕ್ಕೆ ದೊರಕುವ ಸಾಧ್ಯತೆ ಇರುತ್ತದೆ. ಇದು ಇನ್ನೊಂದು ರೀತಿಯಲ್ಲಿ ಸರಕಾರೀ ಶಾಲೆ-ಕಾಲೇಜುಗಳ ಗುಣಮಟ್ಟದ ವೃದ್ಧಿಗೂ ಕಾರಣವಾಗಬಹುದೇನೋ. ಮಾತ್ರವಲ್ಲ ಮಕ್ಕಳ ಹಕ್ಕಿನ ರಕ್ಷಣೆಗೂ ಪರೋಕ್ಷ ಕಾರಣವಾಗುವ ಸಾಧ್ಯತೆ ಇರುತ್ತದೆ. ಏಕೆಂದರೆ ಉತ್ತಮ ಪಾಠ ಮಾಡುವ ಶಿಕ್ಷಕರುಗಳು ಎಲ್ಲಾ ಸರಕಾರೀ ಶಾಲೆಗಳಿಗೂ ಸಮಾನವಾಗಿ ಹಂಚಲ್ಪಡುವುದರಿಂದ ಮಕ್ಕಳ ಉತ್ತಮ ಶಿಕ್ಷಣ ಪಡೆಯುವ ಹಕ್ಕು ಸಾಕಾರಗೊಳ್ಳುತ್ತದೆ.

ರಾಷ್ಟ್ರದೆಲ್ಲೆಡೆ ಏಕ ಪ್ರಕಾರ ನೂತನ ಶಿಕ್ಷಣ ನೀತಿ ಜಾರಿಗೊಳ್ಳುವುದು ರಾಷ್ಟ್ರೀಯಕರಣ ಹಾಗೂ ಗುಣಮಟ್ಟದ ಸಾರ್ವತ್ರೀಕರಣಕ್ಕೆ ಕಾರಣವಾಗಲಿದೆ. ಆದರೆ ಇಲ್ಲಿ ಪ್ರಶ್ನೆ ಉದ್ಭವವಾಗುವದು-ಶಿಕ್ಷಕರನ್ನು ಹಾಗೂ ಶಾಲೆಗಳನ್ನು ಆ ಮಟ್ಟಕ್ಕೆ ಸಜ್ಜುಗೊಳಿಸುವುದು. ಈ ಪ್ರಶ್ನೆ ಏನೂ ಸಾಮಾನ್ಯದ್ದಲ್ಲ. ಏಕೆಂದರೆ ಇಡೀ ರಾಷ್ಟ್ರದಲ್ಲಿರುವ ಎಲ್ಲಾ ಶಾಲೆಗಳನ್ನು ಸದೃಢ ಮೂಲಭೂತ ಸೌಕರ್ಯಗಳಿಂದ ಸಜ್ಜುಗೊಳಿಸುವುದು. ಎಂದರೆ ಎಲ್ಲಾ ಪ್ರಕಾರದಲ್ಲೂ ಒಂದಿನಿತೂ ಕೊರತೆ ಎಲ್ಲೆಲ್ಲೂ ಕಾಣಬಾರದು. ಇಂತಹ ಕ್ರಮಕ್ಕಾಗಿ ಸಾಕಷ್ಟು ಹಣ, ಜನ, ಸಂಸ್ಥೆಗಳ ಬೆಂಬಲ ಅತ್ಯಗತ್ಯ.  

ಸಮಗ್ರ ರಾಷ್ಟ್ರೀಯಕರಣ ಎಂದಾಕ್ಷಣ ಅಲ್ಲಿ ಖಂಡಿತ ಸ್ಥಳೀಯ ಸಾಹಿತ್ಯ, ಸಂಸ್ಕøತಿಗಳಿಗೆ ಪ್ರಾಧಾನ್ಯತೆ ಇರುತ್ತದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆಗಳಿಗೆ, ಶಿಕ್ಷಕರಿಗೆ ಅವರವರ ಸ್ಥಳೀಯ ಮಾನ್ಯತೆಗಳು, ಪ್ರತಿಭೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಅವಕಾಶ ದೊರಕುತ್ತದೆ. ಆದರೆ ಅದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರನ್ನು ಶೋಷಣೆಯಿಂದ ರಕ್ಷಿಸುತ್ತದೆ. ಯಾವುದೇ ಒಂದು ಸಂಸ್ಥೆಯಲ್ಲಿ ನಿಗದಿಗಿಂತ ಹೆಚ್ಚು ಶುಲ್ಕ ವಸೂಲಿ ನಡೆಯುತ್ತಿದ್ದಲ್ಲಿ, ಇರುವ ಶಿಕ್ಷಕರು ನಿರಾಸಕ್ತಿ ತೋರುತ್ತಿದ್ದಲ್ಲಿ ಅಂತಹ ಸಂಸ್ಥೆಯನ್ನು ತ್ಯಜಿಸಿ ಉತ್ತಮ ಶಿಕ್ಷಕರಿರುವ, ಹಾಗೂ ನಿಗದಿತ ಅಥವಾ ಕಡಿಮೆ ಶುಲ್ಕ ಪಡೆಯುವ ಉತ್ತಮ ಶಿಕ್ಷಣ ಸಂಸ್ಥೆಗೆ ಸೇರ್ಪಡೆಗೊಳ್ಳುವ ಅವಕಾಶ ಸಮಗ್ರ ರಾಷ್ಟ್ರೀಯಕರ್ರಣದಿಂದ ಸಾಧ್ಯವಿದೆ. ಮೇಲ್ಕಂಡ ಹಲವಾರು ಭೃಷ್ಟ ವ್ಯವಸ್ಥೆಗಳು ಲಗಾಮಿಗೆ ಬಂದಾವು. ಅಥವಾ ನಿಂತು ಹೋಗುವ ಸಂಭವನೀಯತೆ ಇದೆ. ಉತ್ತಮ ಶಿಕ್ಷಣ ಪಡೆದ, ಪ್ರತಿಭಾವಂತ ಶಿಕ್ಷಕರು ಸಮಗ್ರ ರಾಷ್ಟ್ರೀಯಕರಣದಿಂದ ಮೇಲ್ಪಂಕ್ತಿಗೆ ಬಂದು ಹೆಚ್ಚಿನ ಮಾನ, ಸ್ಥಾನ ಪಡೆಯಲು ಸಾಧ್ಯವಿದೆ.

ಸೂಕ್ತ, ಸಂದರ್ಭ, ವೇಳೆ: ವಿವಿಧ ಹಂತದ ಶಿಕ್ಷಣದಲ್ಲಿರುವ ಎಲ್ಲಾ ರೀತಿಯ ಸಂಸ್ಥೆಗಳನ್ನೂ ದೇಶ ವ್ಯಾಪಿ ಒಂದೇ ಸೂರಿನಡಿ ತರುವುದರಿಂದಾಗಿ ಸಂವಿಧಾನದ ಆಶಯವಾದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಬಹಳ ಸುಲಭವಾಗಿ ಕಾರ್ಯರೂಪಕ್ಕೆ ಬರಲಿದೆ. ಹಲವಾರು ಇಂತಹ ಪೂರಕÀ ಮಕ್ಕಳ ಹಕ್ಕುಗಳು ಪರಿಹಾರಗೊಳ್ಳಲಿವೆ. ದೇಶದಾದ್ಯಂತದ ಎಲ್ಲಾ ಶಿಕ್ಷಣ ಸಂಸ್ಥೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಇಂತಹ ನೂತನ, ಶಿಕ್ಷಣ ಪೂರಕ ಶಿಕ್ಷಣ ನೀತಿಯನ್ನು ದೇಶದೆಲ್ಲಡೆ ರಾಷ್ಟ್ರೀಯಕರಣದೊಂದಿಗೆ ಜಾರಿಗೆ ತರುವುದಕ್ಕೆ ಇದು ಸೂಕ್ತ ಕಾಲ. ಏಕೆಂದರೆ ಪೋಷಕರು, ಪಾಲಕರು, ಕಲಿತವರು ಉದ್ಯೋಗ ಇಲ್ಲದೆ ಪರಿತಪಿಸುತ್ತಿದ್ದಾರೆ. ಶಿಕ್ಷಕರೂ ಕೂಡಾ ಕೆಲಸ ಇಲ್ಲದೆ ಒದ್ದಾಡುತ್ತಿದ್ದಾರೆ. ಶುಲ್ಕ ಕಟ್ಟಲು ಹಣ ಇಲ್ಲದೆ ಹಿಂದಿನ ವರ್ಷವೇ ಒದ್ದಾಡಿದ ಹೆತ್ತವರು, ಪಾಲಕರು, ಪುನರಪಿ ಕೊರೊನಾದ ಹೊಡೆತದಿಂದ ಮತ್ತಷ್ಟು ಜರ್ಝರಿತರಾಗಿದ್ದಾರೆ. ತಮ್ಮ ಮಕ್ಕಳ ಮುಂದಿನ ಶಿಕ್ಷಣದ ಬಗೆಗೆ ಆಸೆಯ ಕಂಗಳಿಂದ ಚಾತಕರಾಗಿದ್ದಾರೆ. ಇಂತಹ ಕಾಲಘಟ್ಟದಲ್ಲಿ ಶಾಲೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಆದ್ದರಿಂದ ಈ ಸಮಯದಲ್ಲಿ ನೂತನ ಶಿಕ್ಷಣ ಕ್ರಮವನ್ನು ರಾಷ್ಟ್ರೀಯಕರಣದೊಂದಿಗೆ ಜಾರಿಗೊಳಿಸಲು ಇದೇ ಸೂಕ್ತ ಸಮಯ. ಸಂವಿಧಾನದ ಆಶಯವೂ ಇದರಿಂದ ಸಾಕಾರಗೊಳ್ಳಲಿದೆ. ಶಿಕ್ಷಣ ಸಂಸ್ಥೆಗಳು ಪುನರಪಿ ಪ್ರಾರಂಭಗೊಳ್ಳುವ ಮೊದಲು ಎಲ್ಲ ಸಿದ್ಧತೆಯೊಂದಿಗೆ ನೂತನ ಶಿಕ್ಷಣ ನೀತಿ ಮೇಲ್ಕಂಡ ರೀತಿಯಲ್ಲಿ ಜಾರಿಗೆ ಬಂದಲ್ಲಿ ಯಾವುದೇ ತೊಳಲಾಟ ಇಲ್ಲದೆ ನೂತನ ಕ್ರಮ ಸಮಗ್ರ ಹಕ್ಕು ರಕ್ಷಣೆಯೊಂದಿಗೆ ಕಾರ್ಯ ರೂಪಕ್ಕೆ ಇಳಿಯಲಿದೆ. ಎಲ್ಲವೂ ಕೊರೊನಾ ನಂತರದ ಕಾಲಘಟ್ಟದಲ್ಲಿ ಸುಖಾಂತಗೊಳ್ಳಲಿದೆ. ನವ ಭಾರತದ, ನವ ಶಿಕ್ಷಣ ನೀತಿ, ನವ ದಿಕ್ಕನ್ನು ಪ್ರಾಪಂಚಿಕ ಮಟ್ಟದಲ್ಲಿ ಭಾರತಕ್ಕೆ ಒದಗಿಸಲಿದೆ ಎಂಬ ಮಹದಾಸೆಯೊಂದಿಗೆ ಶುಭಸ್ಯ ಶೀಘ್ರಂ.

ಲೇಖನ: ರಾಯೀ ರಾಜಕುಮಾರ್,ಮೂಡುಬಿದಿರೆ

(ಲೇಖಕರು: ಹಿರಿಯ ಶಿಕ್ಷಕರು, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು, ಸಂಪನ್ಮೂಲ ವ್ಯಕ್ತಿ, ಸಮಾಜ ಚಿಂತಕರು, ಲೇಖಕರು,)