ಮಂಗಳೂರು, ಫೆಬ್ರವರಿ 25:- ತಂಬಾಕು ಉತ್ಪನ್ನಗಳ ಸೇವನೆಯಿಂದ ಮನುಷ್ಯನ ದೇಹದ ಮೇಲೆ ದುಷ್ಪರಿಣಾಮ ಉಂಟಾಗುವುದರ ಮಾರಣಾಂತಿಕ ಕಾಯಿಲೆಗಳು ಬರುವ ಸಾಧ್ಯತೆ ಇರುವ ಹಿನ್ನೆಲೆ ಪ್ರತಿಯೊಬ್ಬರು ಅವುಗಳಿಂದ ದೂರವಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಹೇಳಿದರು.
ಅವರು ಫೆಬ್ರವರಿ 24 ಜಿಲ್ಲಾಧಿಕಾರಿ ಕಛೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ತಂಬಾಕು ನಿಯಂತ್ರಣ ಘಟಕ ದ.ಕ ಮಂಗಳೂರು ಹಾಗೂ ತಾಲೂಕು ಆರೋಗ್ಯಾಧಿಕಾರಿ ಕಛೇರಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ತಂಬಾಕು ನಿಯಂತ್ರಣ ಕುರಿತಂತೆ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗಿ, ಮನುಷ್ಯನ ದೇಹದ ಭಾಗಗಳಿಗೆ ಹಾನಿ ಉಂಟಾಗಿ ಸಾವು ಉಂಟಾಗುವ ಸಾಧ್ಯತೆ ಇದೆ ಎಂದರು.
ಯುವ ಜನರು ತಂಬಾಕು ವ್ಯಸನಕ್ಕೆ ಬಲಿಯಾಗದೇ ಇವುಗಳಿಂದ ದೂರವಿರಬೇಕು ಎಂದ ಅವರು, ಶಾಲಾ-ಕಾಲೇಜುಗಳ ಆವರಣದಿಂದ 100 ಅಡಿ ಅಂತರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಸಂಪೂರ್ಣವಾಗಿ ನಿಷೇಧಿಸಿದ್ದು, ಇವುಗಳನ್ನು ಉಲ್ಲಂಘಿಸಿದವರಿಗೆ ದಂಡ ವಿಧಿಸಲಾಗುವುದು ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಿಸಲಾಗಿದೆ. ತಂಬಾಕು ಉತ್ಪನ್ನಗಳ ಜಾಹೀರಾತನ್ನು ಪ್ರದರ್ಶಿಸುವುದು ಸಹ ಅಪರಾಧವಾಗಿದೆ ಎಂದರು.
ಕಾಲೇಜು ವಿದ್ಯಾರ್ಥಿಗಳ ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲಿಕರಿಗೆ ಗುಲಾಬಿ ಹೂವುಗಳನ್ನು ನೀಡುವ ಮೂಲಕ ತಂಬಾಕು ಉತ್ಪನ್ನ ಬಳಕೆಯಿಂದಾಗುವ ದುಷ್ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಚಂದ್ರ ಬಾಯಾರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಜಯ್ ಭಂಡಾರಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ಕೆ., ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಡಾ. ಹನುಮಂತರಾಯಪ್ಪ, ಕಛೇರಿ ಸಹಾಯಕಿ ವಿದ್ಯಾ ಕುಮಾರಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.