ಬದಲಾವಣೆ.. ಎಲ್ಲದರೊಳಗು, ಎಲ್ಲರೊಳಗು ನಿರಂತರವಾಗಿ ಘಟಿಸುವ ಸಂಗತಿ. ಅರ್ಥಾತ್ ಬದಲಾವಣೆ ಸೃಷ್ಟಿಯ ನಿಯಮ. ನಾವೆಲ್ಲರೂ ಹುಟ್ಟಿದಂದಿನಿಂದ ನಿರಂತರ ಬದಲಾವಣೆಗೆ ನಮ್ಮನ್ನು ಒಡ್ಡಿಕೊಳ್ಳುತ್ತಲೇ ಇರುತ್ತೇವೆ. ಹಾಗಾದಾಗ ಮಾತ್ರ ಬೆಳವಣಿಗೆ ಸಾಧ್ಯ. ಚಲನಶೀಲತೆ ಇಲ್ಲದಿದ್ದರದೊಂದು ಬದುಕೇ ಅಲ್ಲ, ನಿಂತ ನೀರಂತೆ ಕೊಳಚೆಯಾಗುತ್ತದೆ ಅಷ್ಟೇ. ಎಷ್ಟೋ ವರ್ಷಗಳ ಹಳೆಯ ಗೆಳೆತನ, ಅಥವಾ ಹುಟ್ಟುತ್ತಲೇ ಜೊತೆಗೆ ಅಂಟಿಸಿಕೊಂಡು ಬಂದ ಬಂಧ, ಅಥವಾ ಸುತ್ತಲಿನ ವಾತಾವರಣದೊಟ್ಟಿಗೆ ಬೆಳೆದ ಸ್ನೇಹ, ಹೀಗೆ ಬದುಕಿನ ಹಾದಿಯಲ್ಲಿ ಅನೇಕರು ಎದುರಾಗುತ್ತಾರೆ. ನಮಗೆ ಅರಿವಿದ್ದೋ ಅಥವಾ ಇಲ್ಲದೆಯೋ ಅವರೆಡೆಗೊಂದು ನಿರೀಕ್ಷೆ ಅಥವಾ, ಅವರೆಂದರೆ ಹೀಗೆಯೇ ಅನ್ನೋ ಅಲಿಖಿತ ಸರ್ಟಿಫಿಕೇಟ್ ಗಳನ್ನು ತಲೆಯಲ್ಲಿ ತುಂಬಿಸಿಕೊಂಡಿರುತ್ತೇವೆ.
ನಮ್ಮ ಅನಿಸಿಕೆಗಳನ್ನು ಮೀರಿ ಅಥವಾ ನಿರೀಕ್ಷೆಗಳನ್ನು ತಪ್ಪಿ ಅವರೇನಾದರೂ ನಡೆದುಕೊಂಡರೆ, ನಮ್ಮೊಳಗೆ ನಾವು ಅರ್ಥವಿಲ್ಲದ ದೊಡ್ಡ ಕೋಲಾಹಲ ಅಥವಾ ವಿಪರೀತದ ಭಾವನೆಗಳನ್ನು ಸೃಷ್ಟಿಸಿಕೊಂಡು ನರಳುತ್ತೇವೆ. ಬದಲಾವಣೆಗಳನ್ನು ಒಪ್ಪಿಕೊಳ್ಳದಿರುವುದು ನಮ್ಮ ಮನಸ್ಸಿನ ದೌರ್ಬಲ್ಯ. ಮತ್ತೊಬ್ಬರ ಸಣ್ಣ ಸಣ್ಣ ವರ್ತನೆಗಳು, ಮಾತುಗಳು ನಡವಳಿಕೆಗಳೂ ನಮ್ಮನ್ನು ಅಷ್ಟು ಡಿಸ್ಟರ್ಬ್ ಮಾಡಿ, ಸಂಬಂಧಗಳೆಡೆಗೆ ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತೇವೆ ಅಂದರೆ ತಪ್ಪು ನಮ್ಮದಾ ಅಥವಾ ಎದುರಿನವರದ್ದ!? ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಸಿದ್ದರಿರದ ನಾವು ಮತ್ತೊಬ್ಬರ ತಪ್ಪು ಅಥವಾ ಬದಲಾವಣೆಗಳನ್ನು ಬೇಗ ಗುರುತಿಸುತ್ತೇವೆ..! ಹಾಗೂ ಅದಕ್ಕೆಲ್ಲ ನಾವು ಕೊಡುವ ಹೆಸರು ಅವನು/ಳು ನನಗೆ ಮೋಸ ಮಾಡಿದಳು/ನು, ನಾನಂದುಕೊಂಡಂತೆ ಅವರಿಲ್ಲ, ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದಾರೆ, ಊಸರವಳ್ಳಿ, ಮಿಂಚುಳ್ಳಿ ಮತ್ತೇನೇನೋ ಕೆಟ್ಟ ಪಟ್ಟಗಳಿಟ್ಟುಬಿಡುತ್ತೇವೆ. ಅಫ್ಕೋರ್ಸ್ ಕಾಲಕ್ಕೆ ತಕ್ಕಂತೆ ಬದಲಾಗಲೇಬೇಕು. ಅವಶ್ಯಕತೆಗೆ ತಕ್ಕಷ್ಟು ಸಾಕು. ಇಲ್ಲದಿದ್ದರೆ ಜಗತ್ತು ಓಡುತ್ತಿರುತ್ತದೆ. ನಾವು ನಿಂತಲ್ಲೇ ನಿಂತು ವಿಕಲರಾಗುತ್ತೇವೆ ಅಷ್ಟೇ. ಅಸಲಿಗೆ ಯಾರಾದರೂ ಯಾಕೆ ನಾವಂದುಕೊಂಡಂತೆ ಇರಬೇಕು.!?
ಇತ್ತೀಚಿನ ದಿನಗಳಲ್ಲಿ ಸಂಬಂಧಗಳು ಸ್ವಾದ ಕಳೆದುಕೊಳ್ಳುತ್ತಿರುವುದೆ ಇದಕ್ಕೇ ಅಂತ ನನಗನ್ನಿಸುತ್ತದೆ. ಅವರು, ಹಾಗಿರಬೇಕಿತ್ತು, ಹೀಗಿರಬೇಕಿತ್ತು.. ಹೀಗೆ ಮತ್ತೇನೇನೋ ಅಭಿಪ್ರಾಯಗಳೇ ಸಂಬಂಧಗಳನ್ನು ಇಂಚಿಂಚು ಕೊಲ್ಲುತ್ತಿರುವುದು ಅಲ್ಲವೇ..?! ನಾವು ಬೇರೆಯವರ ಮೇಲೆ ನಿರೀಕ್ಷೆ ಇಟ್ಟುಕೊಂಡಂತೆ, ನಮ್ಮ ಮೇಲೂ ಇತರರು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಅವರೆಲ್ಲರ ಇಚ್ಛೆಯಂತೆ ನಾವು ಬದುಕುತ್ತಿದ್ದೇವ.? ನಮ್ಮ ಯೋಚನೆಗಳೇ ಪದೇಪದೇ ಬದಲಾಗುವಾಗ ಮತ್ತೊಬ್ಬರ ಬದಲಾವಣೆ ನಮ್ಮನ್ನು ಅಷ್ಟೇಕೆ ಕಾಡಬೇಕು..!? ಯೋಚಿಸಬೇಕಾದ ವಿಷಯ.
ಅನೇಕ ಕಾರಣಗಳಿಂದ ಜೊತೆಯಾದವರಿಗಿಂತ, ಸುಮ್ಮನೇ ಯಾವುದೋ ಪುಸ್ತಕದ ಓದಿಗೋ, ನಿತ್ಯವೂ ಕಾಫಿ ಶಾಪ್ನಲ್ಲಿ ಎದುರಾಗುವ ಮುಖ ಪರಿಚಯಕ್ಕೊ, ಅಥವಾ ಮತ್ಯಾವುದೋ ವೇದಿಕೆಯಲ್ಲಿನ ಅನಿರೀಕ್ಷಿತ ಭೇಟಿಯಿಂದಾದ ಎಷ್ಟೋ ಪರಿಚಯಗಳು ನಮ್ಮ ಮೊಗದ ಮೇಲೆ ಮುಗುಳ್ನಗೆ ಮೂಡಿಸಲು ಯಶಸ್ವಿಯಾಗುತ್ತವೆ. ಯಾಕೆ ಹಾಗೆ..!? ಕಾರಣವಿಷ್ಟೇ, ಅಲ್ಲಿ ಯಾರ ಇಷ್ಟ ಕಷ್ಟಗಳ ಹಂಗು ಯಾರಿಗೂ ಇರುವುದಿಲ್ಲ. ಯಾರೊಬ್ಬರ ಬದಲಾವಣೆಯು ಮತ್ತೊಬ್ಬರ ಮೇಲೆ ಅಂತ ದೊಡ್ಡ ಪರಿಣಾಮವನ್ನೇನು ಬೀರುವುದಿಲ್ಲ. ಮುಖ್ಯವಾಗಿ ಅಲ್ಲಿ ಒಬ್ಬರಿಗೊಬ್ಬರ ಮೇಲೆ ಯಾವುದೇ ನಿರೀಕ್ಷೆಗಳಿರುವುದಿಲ್ಲ. ಆದ್ದರಿಂದಲೇ ಅಂತ ಅನಿರೀಕ್ಷಿತ ಬಂಧ / ಬಂಧುಗಳು ಮಧುರ ಅನ್ನಿಸುವುದು.
ಇನ್ನಾದರೂ ಬದಲಾಗೋಣ. ಎಲ್ಲರೂ ಅವರವರು ಸಾಗುವ ಹಾದಿಯಲ್ಲಿ ವಿಭಿನ್ನರೆ, ಸೌಂದರ್ಯಯುತರೆ. ನಾವು ಮನದೊಳಗೆ ಮತ್ತೊಬ್ಬರ ಮೇಲೆ ಹುಟ್ಟಿಸಿಕೊಂಡ ನಿರೀಕ್ಷೆಗಳ ಅಂಟುಗಳನ್ನು ಕಿತ್ತೊಗೆದು, ನಿರಾಳವಾಗಿ ಮುಂದೆ ಸಾಗೋಣ, ಜೊತೆಯಾಗಿ - ಹಿತವಾಗಿ..ಎಲ್ಲರೊಳಗೊಂದಾಗಿ. ಯಾಕೆಂದರೆ ಪರಿವರ್ತನೆ ಜಗದ ನಿಯಮ. ಇದೇ ಬದುಕಿನ ಸುಂದರತೆ.
_ಪಲ್ಲವಿ ಚೆನ್ನಬಸಪ್ಪ