ಗಜರಾತ್, ಬರೋಡಾ, ಅ.12: ದಸರಾ ಆಚರಣೆಯು ರಾಮಲೀಲಾ ಅಂತ್ಯವನ್ನು ಸೂಚಿಸುತ್ತದೆ ಮತ್ತು ರಾವಣನ ಮೇಲೆ ದೇವರು ರಾಮನ ವಿಜಯವನ್ನು ನೆನಪಿಸುತ್ತದೆ. ಪರ್ಯಾಯವಾಗಿ, ದಸರಾದಂದು ದುಷ್ಟತನವನ್ನು ಸೂಚಿಸುವ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಇದು ದುಷ್ಟರ ನಾಶವನ್ನು ಚಿತ್ರಿಸುತ್ತದೆ. ಆದುದರಿಂದ ನಾವೂ ದುಷ್ಟತನದ ಬದುಕಿಗೆ ವಿದಾಯ ಹೇಳಿ ಹೊಸತನದತ್ತ ಹೆಜ್ಜೆಗಳಿಡೋಣ.ವಿಜಯದಶಮಿ ನಂತರ ಇಪ್ಪತ್ತು ದಿನಗಳ ನಂತರ ಆಚರಿಸಲಾಗುವ ದೀಪಗಳ ಪ್ರಮುಖ ಹಬ್ಬ ದೀಪಾವಳಿಯ ತಯಾರಿಗೆ ದಸರಾ ಪೂರಕವಾಗಿದ್ದು ನಾವೂ ಹೊಸತನದ ದೀಪಗಳಾಗಿ ಬಾಲನ್ನು ಬೆಳಗಿಸೋಣ. ಮುಂದಿನ ದಿನಗಳಲ್ಲಿ ಬರೋಡಾದಲ್ಲಿ ಭವ್ಯ ತುಳು ಭವನ ನಿರ್ಮಾಣ ಸಾಧ್ಯತೆವಿದೆ. ಈ ಮೂಲಕ ಹೊಸ ಬದುಕಿನ ಜೀವಕಳೆ ತುಂಬುವ ಕೇಂದ್ರ ನಮ್ಮ ಭವಣವಾಗಿಸೋಣ ಎಂದು ತುಳು ಸಂಘ ಬರೋಡಾ ಅಧ್ಯಕ್ಷ ಶಶಿಧರ್ ಬಿ.ಶೆಟ್ಟಿ ಗುರುವಾಯನಕೆರೆ  ತಿಳಿಸಿದರು.

ಗುಜರಾತ್ ರಾಜ್ಯದ ಬರೋಡಾ ಇಲ್ಲಿ ಸೇವಾನಿರತ ತುಳು ಸಂಘ ಬರೋಡಾ ಮಹಾನಗರದಲ್ಲಿನ ಇಂಡಿಯಾ  ಬುಲ್ಸ್ ಮೆಘಾ ಮಾಲ್‍ನಲ್ಲಿ ತುಳು ಸಂಘ ಬರೋಡಾ ನಿರ್ಮಿತ ವಿಶ್ವದ ಪ್ರಪ್ರಥಮ ಹಾಗೂ ಏಕೈಕ ತುಳು ಚಾವಡಿಯಲ್ಲಿ ಇಂದಿಲ್ಲಿ ಶನಿವಾರ ಸಾಂಪ್ರದಾಯಿಕವಾಗಿ ತೆನೆ (ಕದಿರು) ಹಬ್ಬ ಮೂಲಕ ವಿಜೃಂಭನೆಯಿಂದ ದಸರಾ ಹಬ್ಬ ಆಚರಿಸಲಾಗಿದ್ದು ಕಾರ್ಯಕ್ರಮವನ್ನುದ್ದೇಶಿಸಿ ಶಶಿಧರ್ ಶೆಟ್ಟಿ ಮಾತನಾಡಿದರು.

ತುಳು ಸಂಘ ಬರೋಡಾ ಗೌರವಾಧ್ಯಕ್ಷ ದಯಾನಂದ ಬೋಂಟ್ರ ಅವರ ಮಾರ್ಗದರ್ಶನದಲ್ಲಿ ನಡೆಸಲ್ಪಟ್ಟ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವದಲ್ಲಿ ತುಳುನಾಡ ಹಬ್ಬದ ವಾತಾವರಣ ಸೃಷ್ಟಿಸಿದ ಸದಸ್ಯರು ಕೃಷಿಕರಿಂದ ಅರ್ಪಿಸಲ್ಪಟ್ಟ ಹೊಸ ಭತ್ತದ ತೆನೆ, ದವಸ-ಧಾನ್ಯ ಬೆಳೆ, ತರಕಾರಿ, ಹೊಸಬೆಳೆಗಳೊಂದಿಗೆ ಚೇತನ್ ಸಾಲಿಯಾನ ತೆನೆ ಹೊತ್ತ ಚಾವಡಿಗೆ ಆಗಮಿಸಿದ್ದು  ಪದಾಧಿಕಾರಿಗಳು ಮತ್ತು ಸದಸ್ಯರು ಬರಮಾಡಿಕೊಂಡು ಸಾಂಪ್ರದಾಯಿಕವಾಗಿ ಶುದ್ಧೀಕರಿಸಿ ಕದಿರೆ ಕಟ್ಟಿ ತೆನೆಹಬ್ಬ ಸಂಭ್ರಮಕ್ಕೆ ಮೆರುಗು ನೀಡಿದರು. ಮಹಿಳಾ ಮಂಡಳಿ ಭಜನೆ ಗೈದರು.

ಕಾರ್ಯಕ್ರಮದಲ್ಲಿ ಸಂಘದ ಸುಮಾರು 300 ಅಧಿಕ ಮಂದಿ ಪಾಲ್ಗೊಂಡಿದ್ದು ಕಾರ್ತಿಕ್ ಗೌಡ ಇವರಿಗೆ ತುಳು ಸಂಘದ ವತಿಯಿಂದ ಅಧ್ಯಕ್ಷರು ಗೌರವಿಸಿ ಅಭಿನಂದಿಸಿದರು. ಮಹಿಳೆಯರು ಪ್ರಾರ್ಥನೆಯನ್ನಾಡಿದರು. ಬಾಲಚಂದ್ರ ಗೌಡ, ಕೆ.ಮಾಧವ ಶೆಟ್ಟಿ, ಮದನ್‍ಕುಮಾರ್ ಮೂಡಿಗೆರೆ, ಕೃಷ್ಣ ಶೆಟ್ಟಿ, ದಿನೇಶ್ ಶೆಟ್ಟಿ, ಕುಸುಮಾ ಜಯರಾಮ ಶೆಟ್ಟಿ, ಜಯಂತಿ ಹಳೆಯಂಗಡಿ ಸೇರಿದಂತೆ ಅಪಾರ ಸಂಖ್ಯೆಯ ಸದಸ್ಯರು ಉಪಸ್ಥಿತರಿದ್ದರು. ಗೌ| ಪ್ರ| ಕಾರ್ಯದರ್ಶಿ ಬಾಲಕೃಷ್ಣ ಎ.ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗೌರವ ಪ್ರಧಾನ ಕೋಶಾಧಿಕಾರಿ ಪಿ.ಬಾಲಚಂದ್ರ ಗೌಡ ವಂದನಾರ್ಪಣೆಗೈದರು.