ಉಡುಪಿ, ಅ 03: ಕರ್ನಾಟಕ ಸಂಭ್ರಮ-50 ರಡಿ “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಅಭಿಯಾನದ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆಯು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಂಚರಿಸುತ್ತಾ ಉಡುಪಿ ಜಿಲ್ಲೆಯಲ್ಲಿ ಅಕ್ಟೋಬರ್ 5 ರಿಂದ 10 ರವರೆಗೆ ಒಟ್ಟು 6 ದಿನಗಳ ಕಾಲ ಜಿಲ್ಲೆಯ ವಿವಿಧೆಡೆ ಸಂಚರಿಸಲಿದೆ. 

ಅಕ್ಟೋಬರ್ 5 ರಂದು ರಥವು ಕಾರ್ಕಳ ತಲುಪಲಿದ್ದು, ಉಡುಪಿ & ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ ಉಪಚುನಾವಣೆ ಪ್ರಯುಕ್ತ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸರಳವಾಗಿ ಕಾರ್ಯಕ್ರಮವನ್ನು ಅಂದು ಬೆಳಿಗ್ಗೆ 11 ಗಂಟೆಗೆ ಕಾರ್ಕಳ ತಾಲೂಕು ಆಡಳಿತದ ವತಿಯಿಂದ ಕಾರ್ಕಳ ಪ್ರವಾಸಿ ಮಂದಿರದಲ್ಲಿ ಕನ್ನಡ ರಥಕ್ಕೆ ಪೂಜೆ, ಗೌರವ ಸಲ್ಲಿಸಿಕೊಳ್ಳಲಾಗುವುದು. 

ರಥಯಾತ್ರೆಯು ಅಕ್ಟೋಬರ್ 6 ರಂದು ಕಾಪು, ಅಕ್ಟೋಬರ್ 7 ರಂದು ಉಡುಪಿ, ಅಕ್ಟೋಬರ್ 8 ರಂದು ಬ್ರಹ್ಮಾವರ, ಅಕ್ಟೋಬರ್ 9 ರಂದು ಕುಂದಾಪುರ ಹಾಗೂ ಅಕ್ಟೋಬರ್ 10 ರಂದು ಬೈಂದೂರು ಆಗಮಿಸಿ ಮುಂದಕ್ಕೆ ಶಿವಮೊಗ್ಗದ ಹೊಸನಗರಕ್ಕೆ ತಲುಪುತ್ತದೆ. ಈ ಸಂದರ್ಭದಲ್ಲಿ ಕನ್ನಡಾಭಿಮಾನಿಗಳು ಭಾಗವಹಿಸಿ ಕಾರ್ಯಕ್ರಮದ ಯಶಸ್ವಿಗೆ ಸಹಕರಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.